ತೀರ್ಥಹಳ್ಳಿ: ಮಳೆಯ ತವರು ದಕ್ಷಿಣ ಭಾರತದ ಚಿರಾಪುಂಜಿ ಖ್ಯಾತಿಯ ಆಗುಂಬೆಯಲ್ಲಿ ವರ್ಷದಿಂದ ವರ್ಷಕ್ಕೆ ಮಳೆ ಪ್ರಮಾಣ ಕ್ಷೀಣಿಸುತ್ತಿದೆ. ಆಗುಂಬೆಯ ಮಳೆ ತನ್ನ ಗತ ವೈಭವವನ್ನು ಕೇವಲ ದಾಖಲೆಗಳಲ್ಲಿ ಉಳಿಸಿಕೊಳ್ಳುವಂತಾಗಿದೆ.
‘ಮಳೆ ಎಂದರೆ ಆಗುಂಬೆ, ಆಗುಂಬೆ ಎಂದರೆ ಮಳೆ’ ಎಂಬಂತಿದ್ದ ಪಶ್ಚಿಮ ಘಟ್ಟ ಸಾಲಿನ ಆಗುಂಬೆಯಲ್ಲಿ ಧೋ ಎಂದು ಸುರಿಯಬೇಕಿದ್ದ ಮಳೆಯ ಪ್ರಮಾಣ ವರ್ಷಗಳು ಸರಿದಂತೆ ಕಡಿಮೆ ಯಾಗುತ್ತಿರುವುದು ಆತಂಕ ಸೃಷ್ಟಿಸಿದೆ.
ಇಲ್ಲಿ ಮಳೆಯ ಪ್ರಮಾಣ ಕಡಿಮೆ ಯಾದರೂ ಹೊಸನಗರ ಭಾಗದ ಯಡೂರು, ಮಾಸ್ತಿಕಟ್ಟೆ, ಕೊಡಚಾದ್ರಿ ಭಾಗದಲ್ಲಿ ಹೆಚ್ಚಾಗಿರುವುದು ಮಳೆರಾಯನ ಚಿತ್ತ ಅತ್ತ ಹರಿದಿರುವುದನ್ನು ಖಾತರಿಪಡಿಸುತ್ತದೆ.
ಆಗುಂಬೆಯಲ್ಲಿ ಬೀಳುವ ಮಳೆ ಪ್ರಮಾಣಕ್ಕಿಂತ ಹೆಚ್ಚಾಗಿ ಯಡೂರು, ಮಾಸ್ತಿಕಟ್ಟೆ, ಕೊಡಚಾದ್ರಿ ತಪ್ಪಲಿನಲ್ಲಿ ಬೀಳುತ್ತಿರುವುದು ಇತ್ತೀಚಿನ ಸಮೀಕ್ಷೆಗಳಿಂದ ವ್ಯಕ್ತವಾಗಿದೆ.
ಹಿಂದೆ ಅರಣ್ಯ ಪ್ರದೇಶದ ವಿಸ್ತೀರ್ಣ ಹೆಚ್ಚಾಗಿತ್ತು. ಈಗ ಅರಣ್ಯವು ಮೇಲ್ನೋಟಕ್ಕೆ ಕಂಡುಬಂದರೂ ದಟ್ಟ ಅರಣ್ಯ (ಸಾಂದ್ರತೆ) ಪ್ರದೇಶದ ಪ್ರಮಾಣ ಕಡಿಮೆಯಾಗಿದೆ.
ಬೃಹತ್ ಗಾತ್ರದ ಗಗನಚುಂಬಿ ಮರಗಳ ಸಂಖ್ಯೆ ಕ್ಷೀಣಿಸುತ್ತಿದೆ. ಬಗರ್ ಹುಕುಂ ಸಾಗುವಳಿ, ಪಾರಂಪರಿಕ ಅರಣ್ಯವಾಸಿ ಗರ ಅರಣ್ಯ ಮಾನ್ಯ ಹಕ್ಕು, ಒತ್ತುವರಿ ಮುಂತಾದ ಕಾರಣಗಳಿಂದ ಅರಣ್ಯದ ಪ್ರಮಾಣ ಕಡಿಮೆಯಾಗುತ್ತಿರುವುದೇ ಮಳೆ ಪ್ರಮಾಣ ತಗ್ಗಲು ಕಾರಣವಾಗಿದೆ ಎಂಬ ಅಭಿಪ್ರಾಯ ಕೂಡ ವ್ಯಕ್ತವಾಗಿದೆ.
ಆಗುಂಬೆಯಲ್ಲಿ ಜುಲೈ ಅಂತ್ಯಕ್ಕೆ 1,828 ಮಿ.ಮೀ. ಮಳೆ ಬಿದ್ದಿದ್ದು, 2,477 ಮಿ.ಮೀ. ವಾಡಿಕೆ ಮಳೆಯಾಗಿದೆ. ಶೇ 74ರಷ್ಟು ಮಳೆಯಾಗಿದ್ದು, ಶೇ 26ರಷ್ಟು ಕೊರತೆ ಇದು. ಮಳೆ ಪ್ರಮಾಣ ವರ್ಷದಿಂದ ವರ್ಷಕ್ಕೆ ಕುಸಿತ ಕಾಣುತ್ತಿರುವುದರಿಂದಾಗಿ ಕೃಷಿ ಸೇರಿದಂತೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ.
ಮಲೆನಾಡು ಭಾಗದಲ್ಲಿ ಬೀಳುತ್ತಿದ್ದ ಮಳೆ ನಿಧಾನಕ್ಕೆ ಬಯಲು ಪ್ರದೇಶಗಳತ್ತ ಸರಿಯುತ್ತಿರುವುದು ಏಕೆ ಎಂಬ ಪ್ರಶ್ನೆ ಎದುರಾಗಿದ್ದು, ಈ ಕುರಿತು ಅಧ್ಯಯನದ ಅವಶ್ಯಕತೆ ಇದೆ ಎನ್ನುತ್ತಾರೆ ಸ್ಥಳೀಯರು.
‘ಹಿಂದೆ ದೇಶದಲ್ಲಿ ಶೇ 33ರಷ್ಟು ಅರಣ್ಯ ಪ್ರದೇಶವಿತ್ತು. ಈಗ ಶೇ 19ಕ್ಕೆ ಕುಸಿದಿದೆ. ಜನರು ಅರಣ್ಯವನ್ನು ಅತಿಕ್ರಮಿಸುತ್ತಿರುವುದರಿಂದ ಹೀಗೆ ಆಗಿದೆ. ಸಮುದ್ರದ ಒತ್ತಡಗಳಿಂದ ಆಗುತ್ತಿರುವ ವೈಪರೀತ್ಯದಿಂದ ಮಳೆ ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಿದೆ.
1900ರಲ್ಲಿ ದೇಶದಲ್ಲಿ 20 ಕೋಟಿ ಜನಸಂಖ್ಯೆ ಇತ್ತು. ಈಗ 128 ಕೋಟಿ ಆಗಿದೆ. ಅರಣ್ಯದಲ್ಲಿನ ಸಾಂದ್ರತೆ ಕೂಡ ಕುಂಠಿತಗೊಂಡಿದೆ. ಈ ಎಲ್ಲಾ ಕಾರಣಗಳಿಂದ ಮಳೆಯ ಪ್ರಮಾಣ ಕ್ಷೀಣಿಸುತ್ತಿದೆ’ ಎನ್ನುತ್ತಾರೆ ಶಾಸಕ ಕಿಮ್ಮನೆ ರತ್ನಾಕರ.
ಹಿಂದಿನ ದಿನಗಳ ನೆನಪು...
ಹವಾಮಾನ ಇಲಾಖೆ ಸಿದ್ಧಪಡಿಸಿರುವ ದಾಖಲೆ ಪ್ರಕಾರ ಅತಿ ಹೆಚ್ಚು 11,343.5 ಮಿಲಿ ಮೀಟರ್ ಮಳೆ ಆಗುಂಬೆಯಲ್ಲಿ 1962ರಲ್ಲಿ ಬಿದ್ದಿದೆ. ಈ ಪ್ರಮಾಣದ ಮಳೆ ಮತ್ತೆ ಆಗುಂಬೆಯಲ್ಲಿ ಇಂದಿನವರೆಗೂ ಸುರಿದಿಲ್ಲ. ಅಂದು ಸುರಿದ ಮಳೆಯ ಪ್ರಮಾಣವನ್ನು ಈಗ ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ ಎಂದು ಸ್ಥಳೀಯರು ಹೇಳುತ್ತಾರೆ.
ಆ ಪ್ರಮಾಣದಲ್ಲಿ ಬಿದ್ದ ಮಳೆ 1963ರಲ್ಲಿ ಕೇವಲ 6,664 ಮಿ.ಮೀ.ಗೆ ಮಿತಿಗೊಂಡಿತು. ನಂತರ ಒಮ್ಮೆ ಮಾತ್ರ ಮಳೆಯ ಪ್ರಮಾಣ 10,000 ಮಿ.ಮೀ. ಗಡಿ ದಾಟಿತ್ತು. ಅದು 1978ರಲ್ಲಿ. ಆ ವರ್ಷ 10,464 ಮಿ.ಮೀ. ಮಳೆಯಾಯಿತು.
ಈ ವರ್ಷ ಕೇವಲ 6,000 ಮಿ.ಮೀ. ಅಷ್ಟೇ ಮಳೆಯಾಗಿದೆ. ಆಗುಂಬೆ ಮಳೆಯ ಅಂಕಿಅಂಶ ಗಮನಿಸಿದರೆ ವರ್ಷದಿಂದ ವರ್ಷಕ್ಕೆ ಮಳೆಯ ಪ್ರಮಾಣ ಕುಸಿಯುತ್ತಿರುವುದು ಸ್ಪಷ್ಟ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.