ಆರಂಭಗೊಂಡ 20 ವರ್ಷಗಳ ನಂತರ ಸೊರಬ ತಾಲ್ಲೂಕಿನ ಆನವಟ್ಟಿಯ ಸರ್ಕಾರಿ ಪ್ರಥಮದರ್ಜೆ ಕಾಲೇಜು ಸ್ವಂತ ಕಟ್ಟಡದ ಭಾಗ್ಯ ಕಂಡಿದೆ. ಗ್ರಾಮಕ್ಕೆ 2 ಕಿ.ಮೀ. ದೂರ ಇರುವ ಆನವಟ್ಟಿ-ಸೊರಬ ರಸ್ತೆಯ ಸಮನವಳ್ಳಿಯ 5 ಎಕರೆ ಪ್ರದೇಶದಲ್ಲಿ ನಿರ್ಮಾಣ ಕಾರ್ಯ ಕೊನೆಗೊಳ್ಳುತ್ತಾ ಬಂದಿದ್ದು, ಇನ್ನು ಕೆಲವೇ ದಿನಗಳಲ್ಲಿ ಅದರಲ್ಲಿ ತರಗತಿಗಳು ಆರಂಭಗೊಳ್ಳಲಿವೆ.
1991ರಲ್ಲಿ ಕಲಾ ಹಾಗೂ ವಾಣಿಜ್ಯ ವಿಭಾಗಗಳ ಮೂಲಕ ಆರಂಭಗೊಂಡಿದ್ದ ಕಾಲೇಜು, ಮಧ್ಯೆ ವಾಣಿಜ್ಯ ವಿಭಾಗ ಸ್ಥಗಿತಗೊಂಡಿದ್ದು, ಸತತ 2 ದಶಕಗಳ ಕಾಲ ಎರವಲು ಕಟ್ಟಡಗಳಲ್ಲಿ ಅಲೆಮಾರಿ ಜೀವನದಂತೆ ಕಾಲ ಸವೆಸುತ್ತಾ ಬಂದಿದೆ.
ಮಹಾತ್ಮಾಗಾಂಧಿ ವಿದ್ಯಾಪೀಠ ಹಾಗೂ ಸರ್ಕಾರಿ ಬಾಲಕರ ಹಿರಿಯ ಪ್ರಾಥಮಿಕ ಶಾಲೆ ಕೊಠಡಿಗಳಲ್ಲಿ ಆಶ್ರಯ ಪಡೆದಿದ್ದ ಕಾಲೇಜು, ಪ್ರಸ್ತುತ ಹಿರಿಯ ಪ್ರಾಥಮಿಕ ಶಾಲೆಯ 3 ಕೊಠಡಿ ಅಲ್ಲದೇ, ಗುರುಭವನ ಹಾಗೂ ಸರ್ಕಾರಿ ಪದವಿಪೂರ್ವ ಕಾಲೇಜಿನ 4 ಕೋಣೆಗಳನ್ನು ತರಗತಿ ನಡೆಸಲು ಬಳಸಿಕೊಳ್ಳುತ್ತಿದೆ. ಪ್ರಾಂಶುಪಾಲರ ಕೊಠಡಿ, ಕಚೇರಿ, ಸಿಬ್ಬಂದಿಗಾಗಿ 1 ಕೊಠಡಿ, ಗ್ರಂಥಾಲಯ, ಎನ್‌ಎಸ್‌ಎಸ್, ಕ್ರೀಡಾ ಸಾಮಗ್ರಿಗಾಗಿ 1 ಕೊಠಡಿ ಇದೆ.
ಹಾಲಿ ಕಲಾ ಹಾಗೂ ವಾಣಿಜ್ಯ ವಿಭಾಗಗಳು ನಡೆಯುತ್ತಿದ್ದು, 342 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. 16 ಉಪನ್ಯಾಸಕರು ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಮಾಹಿತಿ ನೀಡುತ್ತಾರೆ ಪ್ರಾಂಶುಪಾಲ ಪ್ರೊ.ಎಂ. ನಾರಾಯಣಪ್ಪ.
ಉಪನ್ಯಾಸಕರಿಗೆ ಕೂರಲು ಸಹ ಸ್ಥಳಾವಕಾಶ ಇಲ್ಲದಂತಾಗಿದೆ. ದಿನಕ್ಕೆ 5ರಿಂದ 7 ತರಗತಿಗಳು ಏಕ ಕಾಲದಲ್ಲಿ ನಡೆಯುತ್ತಿದ್ದು, ಹೊಸ ಕಟ್ಟಡಕ್ಕೆ ಎಂದು ಹೋದೇವೋ? ಎಂದು ಉಪನ್ಯಾಸಕರು, ವಿದ್ಯಾರ್ಥಿಗಳು ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.
ನಿರೀಕ್ಷೆಗೆ ತಕ್ಕಂತೆ ಈಗಾಗಲೇ ಸುಮಾರು ರೂ2 ಕೋಟಿ ವೆಚ್ಚದ ನೂತನ ಕಟ್ಟಡ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಇನ್ನು 15 ದಿನಗಳಲ್ಲಿ ಕಾಲೇಜು ಆಡಳಿತಕ್ಕೆ ಲಭ್ಯ ಆಗಲಿದೆ.
ಆಡಳಿತಾತ್ಮಕ ಅಗತ್ಯಕ್ಕೆ 3 ಕೊಠಡಿ, ತರಗತಿಗಾಗಿ 6 ಕೊಠಡಿ ಸಿದ್ಧಗೊಂಡಿದ್ದು, ಇಷ್ಟು ವರ್ಷದ ಬೇಡಿಕೆ ಈಡೇರುವ ಕಾಲ ಸನ್ನಿಹಿತವಾಗಿದೆ.
ಕಾಲೇಜಿಗೆ ವಿಜ್ಞಾನ ವಿಭಾಗ ಸಹ ಮಂಜೂರಾಗಿದ್ದು, ತರಗತಿಗಳು ಆರಂಭಗೊಳ್ಳಬೇಕಿದೆ. ರೂ 1.5 ಕೋಟಿ ವೆಚ್ಚದಲ್ಲಿ `ಯು~ ಆಕಾರದ ಸುಂದರ ಕಟ್ಟಡ ಪ್ರತ್ಯೇಕವಾಗಿ ನಿರ್ಮಾಣಗೊಳ್ಳುತ್ತಿದೆ. ಗ್ರಾಮದಿಂದ ಕಾಲೇಜು 2 ಕಿ.ಮೀ. ದೂರ ಇರುವ ಪ್ರಯುಕ್ತ ಬಸ್ ತಂಗುದಾಣವನ್ನು ಸಹ ನಿರ್ಮಿಸಲಾಗುತ್ತಿದೆ ಎನ್ನುತ್ತಾರೆ ಶಾಸಕ ಎಚ್. ಹಾಲಪ್ಪ.
ಕಟ್ಟಡಗಳಿಗೆ ಜಾಗ ಸಮರ್ಪಕವಾಗಿ ದೊರೆತಿದ್ದು, ಕ್ರೀಡಾಂಗಣ, ಕ್ಯಾಂಟೀನ್ ಮೊದಲಾದ ಅಗತ್ಯಗಳಿಗಾಗಿ ಇನ್ನೂ 5 ಎಕರೆ ಜಾಗ ಲಭ್ಯವಾದಲ್ಲಿ ಸುಸಜ್ಜಿತ ವ್ಯವಸ್ಥೆಯಾದಂತೆ ಆಗುತ್ತದೆ. ತರಗತಿ ಆರಂಭಗೊಂಡ ನಂತರ ಕಾಲೇಜು ಅವಧಿಗಳಿಗೆ ಸೂಕ್ತವಾಗಿ ಬಸ್ ಸಂಚಾರದ ವ್ಯವಸ್ಥೆ ಕಲ್ಪಿಸಬೇಕು. ವಿಜ್ಞಾನ ವಿಭಾಗ ಆರಂಭಿಸಲು ಅನುವಾಗುವಂತೆ ವಿದ್ಯಾರ್ಥಿಗಳು ಪ್ರವೇಶ ಪಡೆಯಲು ಮುಂದೆ ಬರುವಂತೆ ಶಿಕ್ಷಣಾಭಿಮಾನಿಗಳು ಸಲಹೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.