ADVERTISEMENT

ಇತಿಹಾಸ ತಿರುಚಲು ಹೊರಟಿರುವ ಮೋದಿ

ಎಐಸಿಸಿ ಮಂಜುನಾಥ ಭಂಡಾರಿ

​ಪ್ರಜಾವಾಣಿ ವಾರ್ತೆ
Published 4 ಮೇ 2018, 12:13 IST
Last Updated 4 ಮೇ 2018, 12:13 IST

ತೀರ್ಥಹಳ್ಳಿ: ಇತಿಹಾಸ ತಿರುಚಲು ಹೊರಟಿರುವ ಪ್ರಧಾನಿ ನರೇಂದ್ರ ಮೋದಿ ಒಬ್ಬ ಸುಳ್ಳುಗಾರ ಎಂಬುದು ವಿಶ್ವಕ್ಕೇ ಗೊತ್ತಿದೆ. ಅವರು ಹುಟ್ಟುವ ಮೊದಲೇ ದೇಶದ ಸ್ವಾತಂತ್ರ್ಯಕ್ಕಾಗಿ ಕಾಂಗ್ರೆಸ್ ಹೋರಾಡಿದೆ ಎಂದು ಎಐಸಿಸಿ ಸದಸ್ಯ ಮಂಜುನಾಥ ಭಂಡಾರಿ ಹೇಳಿದರು.

ತಾಲ್ಲೂಕಿನ ಆಗುಂಬೆ ಹೋಬಳಿಯ ವಿವಿಧ ಕಡೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕಿಮ್ಮನೆ ರತ್ನಾಕರ ಅವರ ಪರವಾಗಿ ಬುಧವಾರ ಕಾಂಗ್ರೆಸ್ ಹಮ್ಮಿಕೊಂಡಿದ್ದ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದರು.

‘ದೇಶ, ವಿದೇಶದಲ್ಲಿರುವ ಕಪ್ಪುಹಣ ಪತ್ತೆ ಹಚ್ಚಿ ಪ್ರತಿಯೊಬ್ಬರ ಖಾತೆಗೆ ₹ 15 ಲಕ್ಷ ಜಮಾ ಮಾಡುತ್ತೇನೆ. 60 ವರ್ಷ ದೇಶದಲ್ಲಿ ಆಳ್ವಿಕೆ ನಡೆಸಿದ್ದ ಕಾಂಗ್ರೆಸ್ಸಿಗರನ್ನು ಜೈಲಿಗೆ ಕಳುಹಿಸುತ್ತೇನೆ. ಯುವಕರಿಗೆ 2 ಕೋಟಿ ಉದ್ಯೋಗ ನೀಡುತ್ತೇನೆ. ಶತ್ರು ರಾಷ್ಟ್ರ ಪಾಕಿಸ್ತಾನದ ಸೈನಿಕರ ತಲೆ ಕಡಿದು ಭಾರತಕ್ಕೆ ತರುತ್ತೇನೆ ಎಂದು ಹೇಳಿದ ಪ್ರಧಾನಿ ನರೇಂದ್ರ ಮೋದಿ ಇದರಲ್ಲಿ ಯಾವುದಾದರೂ ಒಂದು ಕೆಲಸವನ್ನಾದರೂ ಮಾಡಿದ್ದಾರಾ’ ಎಂದು ಮಂಜುನಾಥ ಭಂಡಾರಿ ಪ್ರಶ್ನಿಸಿದರು.

ADVERTISEMENT

‘ನರೇಂದ್ರ ಮೋದಿ ಎಲ್ಲಿಹೋದರೂ ಸುಳ್ಳು ಹೇಳಿ ತಪ್ಪಿಸಿಕೊಳ್ಳುತ್ತಿದ್ದಾರೆ. ನಾಲ್ಕೂವರೆ ವರ್ಷಗಳ ಆಳ್ವಿಕೆಯಲ್ಲಿ ವಿದೇಶವನ್ನು ಸುತ್ತುತ್ತಿರುವ ಮೋದಿ ಅವರು ದೇಶದ ಬಡವರನ್ನು ಮರೆತಿದ್ದಾರೆ. ನೀರವ ಮೋದಿ ತರಹದ ಬ್ಯಾಂಕ್ ಲೂಟಿಕೋರರಿಗೆ ಬೆಂಬಲ ನೀಡಿದ್ದೇ ಅವರ ದೊಡ್ಡ ಸಾಧನೆ’ ಎಂದು  ಟೀಕಿಸಿದರು.

ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಬಿ.ಎ.ರಮೆಶ್ ಹೆಗ್ಡೆ ಮಾತನಾಡಿ, ‘ಎಲ್ಲ ವರ್ಗದ ಜನರನ್ನು ಸಮಾನವಾಗಿ ಕಾಣುವ ಕಾಂಗ್ರೆಸ್ ಮಾತ್ರ ದೇಶಕ್ಕೆ ಬೇಕಾಗಿದೆ. ನರೇಂದ್ರ ಮೋದಿ ಅವರ ಸುಳ್ಳಿನಿಂದ ದೇಶವನ್ನು ಕಟ್ಟಲು ಸಾಧ್ಯವಿಲ್ಲ. ಕ್ಷೇತ್ರದಲ್ಲಿ ಜೆಡಿಎಸ್, ಬಿಜೆಪಿ ಅಭ್ಯರ್ಥಿಗಳು ರಾಜಕಾರಣವನ್ನು ಲಾಭಕ್ಕಾಗಿ ಬಳಸಿಕೊಳ್ಳುವುದಕ್ಕೆ ಮಾತ್ರ ಸೀಮಿತರಾಗಿದ್ದಾರೆ’ ಎಂದು ಹೇಳಿದರು.

ಅಭ್ಯರ್ಥಿ ಕಿಮ್ಮನೆ ರತ್ನಾಕರ, ತಾಲ್ಲೂಕು ಕಾಂಗ್ರೆಸ್ ಅಧ್ಯಕ್ಷ ಕೆಸ್ತೂರು ಮಂಜುನಾಥ್, ಜನಪರ ವೇದಿಕೆ ಸಂಚಾಲಕ ನೆಂಪೆ ದೇವರಾಜ್ ಮಾತನಾಡಿದರು.

ಪ್ರಚಾರ ಸಮಿತಿ ಅಧ್ಯಕ್ಷ ಯಡೂರು ರಾಜಾರಾಮ್, ಜಿಲ್ಲಾ ಪಂಚಾಯ್ತಿ ಸದಸ್ಯೆ ಭಾರತಿ ಪ್ರಭಾಕರ್, ತಾಲ್ಲೂಕು ಪಂಚಾಯ್ತಿ ಸದಸ್ಯೆ ವೀಣಾ ಗಿರೀಶ್, ಎಪಿಎಂಸಿ ಅಧ್ಯಕ್ಷ ಕೇಳೂರು ಮಿತ್ರ ಸೇರಿದಂತೆ ಅನೇಕ ಮುಖಂಡರಿದ್ದರು.

ಬಡವರ ಸಂಕಷ್ಟಗಳನ್ನು ಅರಿತ ಸಿದ್ದರಾಮಯ್ಯ ಅವರು ಕಳೆದ 5 ವರ್ಷಗಳಲ್ಲಿ ನೀಡಿದ ಆಡಳಿತವನ್ನು ದೇಶದ ಜನತೆ ಮೆಚ್ಚಿದ್ದಾರೆ. ಕಿಮ್ಮನೆ ರತ್ನಾಕರ ಅವರು ಶಿಕ್ಷಣ ಸಚಿವರಾಗಿ ನಿರ್ವಹಿಸಿದ ಕಾರ್ಯ ಮಾದರಿಯಾಗಿದೆ. ಬಿಜೆಪಿ, ಜೆಡಿಎಸ್ ಪಕ್ಷವನ್ನು ತಿರಸ್ಕರಿಸಿ ಕಾಂಗ್ರೆಸ್‌ಗೆ ಮತ ನೀಡುವ ಮೂಲಕ ಸ್ವಚ್ಛ, ಸಮೃದ್ಧ ಕರ್ನಾಟಕ ಕಟ್ಟಲು ಕಾಂಗ್ರೆಸ್ ಬೆಂಬಲಿಸುವುದಕ್ಕೆ ಜನತೆ ಮುಂದಾಗಬೇಕು
- ನೆಂಪೆ ದೇವರಾಜ್.ಜನಪರ ವೇದಿಕೆ ಸಂಚಾಲಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.