ADVERTISEMENT

ಇ ಟೆಂಡರಿಂಗ್ ಕರೆಯದ ಎಂಪಿಎಂ

​ಪ್ರಜಾವಾಣಿ ವಾರ್ತೆ
Published 16 ಜುಲೈ 2012, 4:55 IST
Last Updated 16 ಜುಲೈ 2012, 4:55 IST

ಭದ್ರಾವತಿ: ಸರ್ಕಾರಿ ಆಡಳಿತದಲ್ಲಿ ಪಾರದರ್ಶಕತೆ ಕಾಪಾಡುವ ಸಲುವಾಗಿ ಗುತ್ತಿಗೆ ಪ್ರಕಟಣೆಯನ್ನು `ಇ~ ಆಡಳಿತ ಮೂಲಕ ನಡೆಸಬೇಕೆಂಬ ನಿಯಮವಿದ್ದರೂ ಸಹ ಸರ್ಕಾರಿ ಸ್ವಾಮ್ಯದ ಕಾರ್ಖಾನೆಯೇ ಅದನ್ನು ಸ್ಪಷ್ಟವಾಗಿ ಉಲ್ಲಂಘನೆ ಮಾಡಿರುವ ಉದಾಹರಣೆ ಇಲ್ಲಿದೆ!

ಭದ್ರಾವತಿಯ ಮೈಸೂರು ಕಾಗದ ಕಾರ್ಖಾನೆ (ಎಂಪಿಎಂ) ಸರ್ಕಾರಿ ಸ್ವಾಮ್ಯದ ಕಾರ್ಖಾನೆ. ಇಲ್ಲಿಯ ಎಲ್ಲಾ ವ್ಯವಹಾರವು ಸರ್ಕಾರದ ನಿರ್ದೇಶನ ರೀತಿಯ್ಲ್ಲಲೇ ನಡೆಯುವುದು ಸಹಜ ಪ್ರಕ್ರಿಯೆ. ಆದರೆ. ಟೆಂಡರಿಂಗ್ ವ್ಯವಸ್ಥೆಯಲ್ಲಿ ಮಾತ್ರ ಇದರ ಪಾಲನೆಯ ಸ್ಪಷ್ಟ ಉಲ್ಲಂಘನೆ ನಡೆದಿದೆ.

ಸುಮಾರು ಒಂದು ಕೋಟಿ ವ್ಯವಹಾರದ ಭದ್ರತಾ ವ್ಯವಸ್ಥೆಯ ಟೆಂಡರ್ ಪ್ರಕ್ರಿಯೆ ಸಹ `ಇ~ ಪ್ರಕ್ರಿಯೆಯಲ್ಲಿ ನಡೆದಿಲ್ಲ ಎಂಬ ಕೂಗು ಈಚೆಗೆ ಕಾರ್ಖಾನೆಯಲ್ಲಿ ಪ್ರತಿಧ್ವನಿಸಿತು. ಇದರತ್ತ ಗಮನಿಸಿದಾಗ ಸ್ವತಃ ಆಡಳಿತ ಮಂಡಳಿಯೇ ತನ್ನ ತಪ್ಪನ್ನು ಒಪ್ಪಿಕೊಂಡು ಅದಕ್ಕೆ ಸಮಜಾಯಿಷಿ ನೀಡುವ ಯತ್ನ ಮಾಡಿದೆ.

ಈ ಟೆಂಡರ್ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಅಡಗಿಲ್ಲ. ಸರಿಯಾದ ರೀತಿಯಲ್ಲಿ ಪ್ರಕಟಣೆ ನೀಡಿಲ್ಲ, ನಿಬಂಧನೆಗಳ ಉಲ್ಲಂಘನೆ ನಡೆದಿದೆ. ಕಡಿಮೆ ಮೊತ್ತಕ್ಕೆ ಕೋಟ್ ಮಾಡಿದ ವರದಿಯನ್ನು ನೋಟಿಸ್ ಬೋರ್ಡ್‌ನಲ್ಲಿ ಹಾಕಿಲ್ಲವೆಂಬ ಆರೋಪ ಕೇಳಿಬಂತು.

ಟೆಂಡರ್ ಹಿನ್ನೆಲೆ: ಮುಂದಿನ ಎರಡು ವರ್ಷಗಳ ಅವಧಿಗೆ ಕಾರ್ಖಾನೆ ಭದ್ರತಾ ವಹಿವಾಟಿನ ಟೆಂಡರ್ ಕರೆಯಲಾಯಿತು. ಇದರನ್ನು ಸರ್ಕಾರದ ಆದೇಶ ಪ್ರಕಾರ `ಇ~ ಪ್ರಕ್ರಿಯೆಯಲ್ಲಿ ನಡೆಸದ ಆಡಳಿತ ಮಂಡಳಿ ಪ್ರಕಟಣೆ ಮೂಲಕ ಆಹ್ವಾನ ನೀಡಿತ್ತು.

ಈ ಪ್ರಕ್ರಿಯೆಯಲ್ಲಿ ಹೈದ್ರಾಬಾದ್ ಮೂಲದ `ಹಾಕ್ ಸೆಕ್ಯೂರಿಟಿ ಸರ್ವೀಸಸ್~ ಹಾಗೂ ಪುಣೆ ಮೂಲದ `ಬೆಸ್ಟ್ ಸೆಕ್ಯೂರಿಟಿ ಸರ್ವೀಸಸ್~ ಭಾಗವಹಿಸಿದ್ದವು. ಇವರಿಬ್ಬರನ್ನು ಕರೆಸಿ ಮಾತುಕತೆ ಮಾಡಿದ ಕಾರ್ಖಾನೆ ಆಡಳಿತ ವರ್ಗ ಅಂತಿಮವಾಗಿ ಪುಣೆ  ಮೂಲದ ಬಿಡ್‌ದಾರರಿಗೆ ಸೆಕ್ಯೂರಿಟಿ ಕೆಲಸವನ್ನು ಗುತ್ತಿಗೆ ನೀಡಿದೆ.

ಹಲವು ಬಾರಿ ನೋಟಿಸ್: ಕಾರ್ಖಾನೆಯಲ್ಲಿ ಯಾವುದೇ ಟೆಂಡರ್ ಪ್ರಕ್ರಿಯೆಯನ್ನು `ಇ~ ವ್ಯವಸ್ಥೆ ಮೂಲಕ ಕರೆಯಲು ಸಾಧ್ಯವಾಗಿಲ್ಲ. ಈ ವ್ಯವಸ್ಥೆಯಲ್ಲಿ ಹೆಚ್ಚಿನ ಬಿಡ್‌ದಾರರು ಭಾಗವಹಿಸುವುದಿಲ್ಲ. ಹಾಗಾಗಿ, ಸರ್ಕಾರಿ ಸಂಸ್ಥೆಯಾದರೂ ವ್ಯವಸ್ಥೆ ಅಳವಡಿಸಿಕೊಂಡಿಲ್ಲ. ಇದನ್ನು ಪ್ರಶ್ನಿಸಿ ಸರ್ಕಾರದಿಂದ ನಮಗೆ ಸಾಕಷ್ಟು ನೋಟಿಸ್ ಬಂದಿದೆ ಎನ್ನುತ್ತಾರೆ ಎಂಪಿಎಂ ಜನರಲ್ ಮ್ಯಾನೇಜರ್ ಬಿ.ಎನ್. ಶ್ರೀನಿವಾಸ್.

ಪ್ರತಿ ಟೆಂಡರ್ ಕರೆದಾಗ ಅದನ್ನು ಸಂಪೂರ್ಣವಾಗಿ ವಿಶ್ಲೇಷಣೆ ಮಾಡಿ ವರದಿ ಪಡೆದು, ಸೂಕ್ತ ಆಯ್ಕೆ ಕುರಿತಾಗಿ ತೀರ್ಮಾನ ತೆಗೆದುಕೊಳ್ಳಲು ವ್ಯವಸ್ಥಾಪಕ ನಿರ್ದೇಶಕರ ನೇತೃತ್ವದಲ್ಲಿ ತಜ್ಞರ ಸಮಿತಿ ಕೆಲಸ ಮಾಡುತ್ತದೆ. ಹಾಗಾಗಿ ಸರಿಯಾದ, ಸೂಕ್ತವಾದ ಆಯ್ಕೆ ಪ್ರಕ್ರಿಯೆ ನಡೆದಿದೆ ಎಂದು ಸಮಜಾಯಿಷಿ ನೀಡಿದರು.

ಭದ್ರತಾ ವ್ಯವಸ್ಥೆಯ ಟೆಂಡರ್ ಸಹ `ಇ~ ಪ್ರಕ್ರಿಯೆಯಲ್ಲಿ ನಡೆದಿಲ್ಲ. ಆದರೆ ಆಯ್ಕೆಯಲ್ಲಿ ಯಾವುದೇ ಲೋಪ ನಡೆದಿಲ್ಲ. ಪ್ರಕಟಣೆಯಲ್ಲೂ ಸಹ ಯಾವುದೇ ನಿಬಂಧನೆಗಳ ಉಲ್ಲಂಘನೆಯಾಗಿಲ್ಲ. ಇವೆಲ್ಲಾ ಸಂಪೂರ್ಣ ಕಲ್ಪಿತ ಹೇಳಿಕೆ ಎಂದು ನುಡಿದ ಅವರು, ಎರಡೇ ಕಂಪೆನಿಗಳು ಭಾಗವಹಿಸಿದ್ದ ಈ ಬಿಡ್‌ನಲ್ಲಿ ಎರಡು ಕಡೆಯವರನ್ನು ಕೂರಿಸಿ ಮಾತುಕತೆ ಮಾಡಿಯೇ ಗುತ್ತಿಗೆ ನೀಡಲಾಗಿದೆ ಎಂದು ಸ್ಪಷ್ಟೀಕರಣ ನೀಡಿದರು.
ಪ್ರತಿಭಾ ಪುರಸ್ಕಾರ

ಬ್ರಾಹ್ಮಣರು ಎನ್ನುವ ಕಾರಣಕ್ಕೆ ಪೂರ್ವಾಗ್ರಹ ಪೀಡಿತರಾಗಿ ಅವರನ್ನು ವ್ಯತಿರಿಕ್ತ ಮನೋಭಾವದಿಂದ ನೋಡುವ ಪ್ರವೃತ್ತಿ ಸರಿಯಲ್ಲ ಎಂದು ಸೊರಬದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಉಪನ್ಯಾಸಕ ರವೀಂದ್ರಭಟ್ ಕುಳಿಬೀಡು ಹೇಳಿದರು.

ಹವ್ಯಕ ಸಾಗರ ಸಂಘಟನೆ ಶನಿವಾರ ಏರ್ಪಡಿಸಿದ್ದ ಪತ್ರಿಭಾ ಪುರಸ್ಕಾರ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯಾವುದೇ ಸಮಾಜಕ್ಕೆ ಸೇರಿದವರನ್ನು ಜಾತಿಯ ಕಾರಣದಿಂದ ಅನಾದರದಿಂದ ನೋಡುವ ಮನೋಭಾವ ಕೊನೆಯಾಗಬೇಕು ಎಂದು ಹೇಳಿದರು.

ಯುವಜನರಲ್ಲಿ ಆಧುನಿಕ ತಂತ್ರಜ್ಞಾನದ ಅತಿಯಾದ ಬಳಕೆಯಿಂದ ಕ್ರಿಯಾಶೀಲತೆ ಕಡಿಮೆಯಾಗುತ್ತಿದೆ. ಈ ಬಗ್ಗೆ ಪೋಷಕರು ಎಚ್ಚರ ವಹಿಸಬೇಕಿದೆ. ತಂತ್ರಜ್ಞಾನ ಯುವಕ ಯುವತಿಯರ ಸಾಧನೆಗೆ ಪೂರಕವಾಗಬೇಕೇ ವಿನಾ ಮಾರಕವಾಗಬಾರದು ಎಂದರು.

ಇದೇ ಸಂದರ್ಭದಲ್ಲಿ ಬ್ರಾಸಂ ಸಂಸ್ಥೆಯ ಮುಖ್ಯಸ್ಥರಾದ ಅ.ರಾ.ಲಂಬೋದರ್ ಹಾಗೂ ಗಣಪತಿ ಅರ್ಬನ್ ಕೋ-ಆಪರೇಟೀವ್ ಬ್ಯಾಂಕ್‌ನ ಅಧ್ಯಕ್ಷೆ ಶೋಭಾ ಲಂಬೋದರ್ ಅವರನ್ನು ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಅ.ರಾ.ಲಂಬೋದರ್, ಯಾವುದೇ ಸಮಾಜದಲ್ಲಿ ಒಳ್ಳೆಯ ಕೆಲಸ ಮಾಡಿದವರನ್ನು ಗುರುತಿಸುವುದರಿಂದ ಅವರು ಮತ್ತಷ್ಟು ಒಳ್ಳೆಯ ಕಾರ್ಯಗಳನ್ನು ನಡೆಸಲು ಪ್ರೇರಣೆ ನೀಡಿದಂತಾಗುತ್ತದೆ ಎಂದು ಹೇಳಿದರು.

ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚಿನ ಅಂಕ ಗಳಿಸಿದ ಹವ್ಯಕ ಸಮಾಜದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.

ಹವ್ಯಕ ಸಾಗರದ ಅಧ್ಯಕ್ಷ ಎನ್.ಎಸ್. ಮಂಕಾಳೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮೈತ್ರಿ ಮತ್ತು ಸಂಗಡಿಗರು ಪ್ರಾರ್ಥಿಸಿದರು. ವೆಂಕಟೇಶ್ ಜೋಯಿಸ್ ಸ್ವಾಗತಿಸಿದರು. ರಾಜಶ್ರೀ ಸದಾಶಿವ ಸನ್ಮಾನಿತರನ್ನು ಪರಿಚಯಿಸಿದರು. ಶ್ರೀಧರ ಹೆಗಡೆ ವಂದಿಸಿದರು. ಶರಾವತಿ ಸಿ. ರಾವ್ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.