ADVERTISEMENT

ಎಂಪಿಎಂ ಅಧ್ಯಕ್ಷ ಆರಗ ಜ್ಞಾನೇಂದ್ರ ಮನವಿ.ತುಟ್ಟಿಭತ್ಯೆ ಸದ್ಯಕ್ಕಿಲ್ಲ: ಧರಣಿ ಕೈ ಬಿಡಿ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2011, 7:05 IST
Last Updated 18 ಫೆಬ್ರುವರಿ 2011, 7:05 IST

ಶಿವಮೊಗ್ಗ: ‘ಕಾರ್ಮಿಕರಿಗೆ ತುಟ್ಟಿಭತ್ಯೆ ನೀಡುವುದಿಲ್ಲ ಎಂದು ಎಲ್ಲೂ ಹೇಳಿಲ್ಲ. ಆದರೆ, ಪ್ರಸ್ತುತ ಕಾರ್ಖಾನೆಯ ಆರ್ಥಿಕ ಸ್ಥಿತಿಯಲ್ಲಿ ತುಟ್ಟಿಭತ್ಯೆ ನೀಡಲು ಸಾಧ್ಯವಾಗುತ್ತಿಲ್ಲ. ಈ ವಿಚಾರದಲ್ಲಿ ರಾಜಕೀಯ ಪ್ರಚೋದಿತ ಧರಣಿಯನ್ನು ಕೈಬಿಡಬೇಕು’ ಎಂದು ಎಂಪಿಎಂ ಅಧ್ಯಕ್ಷ ಆರಗ ಜ್ಞಾನೇಂದ್ರ, ಕಾರ್ಮಿಕರಲ್ಲಿ ಮನವಿ ಮಾಡಿದರು.  ಎಂಪಿಎಂ 2007ರಿಂದ ಇದುವರೆಗೂ ಸಂಬಳದ ಮೂಲವೇತನದ ಮೇಲೆ ಶೇ. 46ರಷ್ಟು ತುಟ್ಟಿಭತ್ಯೆ ನೀಡುತ್ತಾ ಬಂದಿದೆ. ಆದರೆ, 2010ರ ಜುಲೈ 1ರಿಂದ ಶೇ. 10.25ರಷ್ಟು ತುಟ್ಟಿಭತ್ಯೆ ನೀಡುವುದು ಬಾಕಿ ಇದೆ. ಇದನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ ಅಷ್ಟೇ ಎಂದು ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.

ಕಾರ್ಖಾನೆಯನ್ನು ನಷ್ಟದಿಂದ ಹೊರತರಲು ರೂ200 ಕೋಟಿ ಅನುದಾನ ನೀಡುವಂತೆ ಮುಖ್ಯಮಂತ್ರಿಗೆ ಮನವಿ ಮಾಡಲಾಗಿದೆ. ಪ್ರಸಕ್ತ ಬಜೆಟ್‌ನಲ್ಲಿ ಅದಕ್ಕೆ ಅನುದಾನ ಸಿಗುವ ಎಲ್ಲಾ ಸಾಧ್ಯತೆಗಳಿದ್ದು, ಕಾರ್ಮಿಕರು ಅಲ್ಲಿಯವರೆಗೆ ಸಹಕರಿಸಬೇಕು ಎಂದು ಮನವಿ ಮಾಡಿದರು. ರಾಜ್ಯ ನಿಯಮದಡಿ ತುಟ್ಟಿಭತ್ಯೆ ನೀಡುತ್ತಿರುವ ಕಾರ್ಖಾನೆ ನಷ್ಟದಲ್ಲಿದ್ದರೆ ಕಾರ್ಮಿಕರಿಗೆ ತುಟ್ಟಿಭತ್ಯೆ ಕೊಡುವಂತಿಲ್ಲ ಎಂದು ಸರ್ಕಾರ 1994ರಲ್ಲೇ ಆದೇಶ ಹೊರಡಿಸಿದೆ. ಇಷ್ಟಾದರೂ ಕಾರ್ಖಾನೆ 2007ರಿಂದ ಶೇ. 46ರಷ್ಟು ತುಟ್ಟಿಭತ್ಯೆ ನೀಡುತ್ತಾ ಬಂದಿದೆ ಎಂದು ಹೇಳಿದರು.

ನ್ಯೂಸ್ ಪ್ರಿಂಟ್ ದರ ಮಾರುಕಟ್ಟೆಯಲ್ಲಿ ದಿಢೀರ್ ಕುಸಿತ ಕಂಡಿದ್ದರಿಂದ ಈಗಲೂ ಪ್ರತಿ ಕ್ವಿಂಟಲ್ ನ್ಯೂಸ್ ಪ್ರಿಂಟ್ ಉತ್ಪಾದನೆಯಲ್ಲಿರೂ 5 ಸಾವಿರ ನಷ್ಟವಾಗುತ್ತಿದೆ. ಇಷ್ಟಾದರೂ ನ್ಯೂಸ್ ಪ್ರಿಂಟ್ ಉತ್ಪಾದನೆ ಮಾಡಲೇಬೇಕಾಗಿದೆ. ಬರುವ ಮಾರ್ಚ್‌ಗೆ ಕಾರ್ಖಾನೆಯ ಒಟ್ಟು ನಷ್ಟರೂ 200 ಕೋಟಿ  ಮುಟ್ಟಬಹುದೆಂಬ ನಿರೀಕ್ಷೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು.

ಇಂತಹ ನಷ್ಟದಲ್ಲಿರುವ ಕಾರ್ಖಾನೆಯನ್ನು ಲಾಭದ ಹಾದಿಗೆ ತರುವ ಎಲ್ಲ ಸಾಧ್ಯತೆಗಳಿವೆ. ಆದರೆ, ಇದಕ್ಕೆ ಸಮಯ ಬೇಕು. ನೌಕರರು ಕೆಲಮಟ್ಟಿನ ತ್ಯಾಗ ಮಾಡಿ, ಹೆಚ್ಚಿನ ಉತ್ಪಾದನೆಯಲ್ಲಿ ತೊಡಗಿಕೊಳ್ಳಬೇಕು ಎಂದು ಮನವಿ ಮಾಡಿದರು.ಕಾರ್ಖಾನೆ ನಷ್ಟದಲ್ಲಿರುವುದರಿಂದ ತುಟ್ಟಿಭತ್ಯೆ ನೀಡಲು ಸಾಧ್ಯವಿಲ್ಲ ಎಂದು ಕಳೆದ ನವೆಂಬರ್ 3ರಂದೇ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಅಲ್ಲದೇ, ಇದೇಫೆ. 7ರಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಕರೆದ ಸಭೆಯಲ್ಲೂ ಪ್ರಸ್ತಾಪಿಸಲಾಗಿದೆ. ಬಜೆಟ್‌ನಲ್ಲಿ ನ್ಯಾಯ ಒದಗಿಸುವ ಭರವಸೆಯನ್ನು ಮುಖ್ಯಮಂತ್ರಿ ನೀಡಿದ್ದಾರೆ ಎಂದರು.

ಮುಖ್ಯಮಂತ್ರಿ ಸಭೆಗೆ ಯಾವ ಕಾರ್ಮಿಕರ ಮುಖಂಡರಿಗೂ ಕಾರ್ಖಾನೆ ವತಿಯಿಂದ ಅಧಿಕೃತ ಆಹ್ವಾನ ನೀಡಿರಲಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ನಮ್ಮ ಮೇಲೆ ವಿನಾಕಾರಣ ಗೂಬೆ ಕೂರಿಸುವ ಪ್ರಯತ್ನ ನಡೆಯುತ್ತಿದೆ. ಇಂತಹ ರಾಜಕೀಯ ಪ್ರಚೋದಿತ ಆರೋಪಿಗಳಿಗೆ ತಾವು ಉತ್ತರ ಕೊಡುವುದಿಲ್ಲ ಎಂದರು. ಸುದ್ದಿಗೋಷ್ಠಿಯಲ್ಲಿ ಕಾರ್ಖಾನೆಯ ಎಚ್‌ಆರ್‌ಡಿ ವಿಭಾಗದ ಪ್ರಧಾನ ವ್ಯವಸ್ಥಾಪಕ ಶ್ರೀನಿವಾಸ್, ಹಿರಿಯ ವ್ಯವಸ್ಥಾಪಕ ಮಹಾವೀರ್‌ಕುಮಾರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.