ADVERTISEMENT

ಎಂಪಿಎಂ ಕಾರ್ಮಿಕರ ಬೈಕ್ ರ್ಯಾಲಿ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2011, 8:10 IST
Last Updated 19 ಫೆಬ್ರುವರಿ 2011, 8:10 IST

ಭದ್ರಾವತಿ: ಮೈಸೂರು ಕಾಗದ ಕಾರ್ಖಾನೆ ಅಧ್ಯಕ್ಷರು ತಪ್ಪು ಹೇಳಿಕೆ ನೀಡುವ ಮೂಲಕ ಕಾರ್ಮಿಕರನ್ನು ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿ ನೂರಾರು ಮಂದಿ ಕಾರ್ಮಿಕ ಸಂಘದ ನೇತೃತ್ವದಲ್ಲಿ ಶುಕ್ರವಾರ ಬೈಕ್‌ರ್ಯಾಲಿ ನಡೆಸಿ ತಹಶೀಲ್ದಾರ್ ಅವರಿಗೆ ಮನವಿ ಅರ್ಪಿಸಿದರು.ಕಾರ್ಮಿಕರ ತುಟ್ಟಿಭತ್ಯೆ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಸರದಿ ಉಪವಾಸ ಸತ್ಯಾಗ್ರಹ ನಡೆಸಿದೆ. ಇದಕ್ಕೆ ಇಲ್ಲದ ಸಬೂಬು ಹೇಳಿ ನಮ್ಮೊಂದಿಗೆ ಮಾತುಕತೆ ನಡೆಸದ ಅಧ್ಯಕ್ಷ ಆರಗ ಜ್ಞಾನೇಂದ್ರ ಅವರ ಧೋರಣೆ ಖಂಡನೀಯ ಎಂದು ಕಾರ್ಮಿಕ ಸಂಘದ ಅಧ್ಯಕ್ಷ ಸದಾಶಿವಲಿಂಗೇಗೌಡಹೇಳಿದರು.

ಕಾರ್ಖಾನೆ ನಷ್ಟದಲ್ಲಿದೆ ಎಂದು ಸದಾ ಹೇಳುವ ಮೂಲಕ ಅಭಿವೃದ್ಧಿಪರ ಚಿಂತನೆ ನಡೆಸದ ಜ್ಞಾನೇಂದ್ರ ವಿನಾಕಾರಣ ನಮ್ಮ ಮುಖಂಡರ ವಿರುದ್ಧ ಹರಿಹಾಯುವ ಮನೋಭಾವ ಹೊಂದಿರುವುದು ಸರಿಯಲ್ಲ ಎಂದು ಅವರು ಎಚ್ಚರಿಸಿದರು.ಸರ್ಕಾರ ಈ ಕೂಡಲೇ ಮಧ್ಯಪ್ರವೇಶಿಸಿ ಕಾರ್ಮಿಕರಿಗೆ ದೊರೆಯಬೇಕಾದ ತುಟ್ಟಿಭತ್ಯೆ ನೀಡಬೇಕು ಎಂದು ಒತ್ತಾಯಿಸುವ ಮನವಿಯನ್ನು  ತಹಶೀಲ್ದಾರ್‌ಗೆ ಸಲ್ಲಿಸಲಾಯಿತು.ಸಂಘದ ಮುಖಂಡರಾದ ಹಾಲಪ್ಪ, ಶಿವಮೂರ್ತಿ, ತೀರ್ಥಪ್ಪ, ದಾನಂ, ಭೂಷಣ್‌ರಾವ್ ಸೇರಿದಂತೆ ನೂರಾರು ಕಾರ್ಮಿಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.