ADVERTISEMENT

ಎಂಪಿಎಂ ಪ್ಲಾಂಟೇಷನ್‌ಗೆ ಬೆಂಕಿ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2011, 13:10 IST
Last Updated 13 ಮಾರ್ಚ್ 2011, 13:10 IST
ಎಂಪಿಎಂ ಪ್ಲಾಂಟೇಷನ್‌ಗೆ ಬೆಂಕಿ
ಎಂಪಿಎಂ ಪ್ಲಾಂಟೇಷನ್‌ಗೆ ಬೆಂಕಿ   

ತೀರ್ಥಹಳ್ಳಿ: ಎಂಪಿಎಂ (ಮೈಸೂರು ಪೇಪರ್ ಮಿಲ್) ಪ್ಲಾಂಟೇಷನ್‌ನಲ್ಲಿ ಮತ್ತೆ ಅಕೇಶಿಯಾ ಗಿಡಗಳನ್ನು ನೆಡಲು ನೈಸರ್ಗಿಕ ಕಾಡಿಗೆ ಬೆಂಕಿಹಚ್ಚಿ ಸುಟ್ಟ ಪ್ರಕರಣ ತಾಲ್ಲೂಕಿನ ತ್ರಿಯಂಬಕಪುರ ಗ್ರಾ.ಪಂ. ವ್ಯಾಪ್ತಿಯ ಕೌದಳ್ಳಿ ಸಮೀಪ ಹುಲಿಮನೆ ಎಂಬಲ್ಲಿ ಇತ್ತೀಚೆಗೆ ಸಂಭವಿಸಿದೆ.ತ್ರಿಯಂಬಕಪುರ ಗ್ರಾ.ಪಂ. ಸರ್ವೆ ನಂ 25 ರಲ್ಲಿ ಸುಮಾರು ಹತ್ತಾರು ಎಕರೆ ಪ್ರದೇಶ ಬೆಂಕಿಗೆ ಆಹುತಿಯಾಗಿದೆ. ಕಳೆದ ಕೆಲವು ದಿನಗಳ ಹಿಂದೆಯೇ ಬೆಂಕಿ ತಗುಲಿದ್ದ ಈ ಪ್ರದೇಶದಲ್ಲಿದ್ದ ಬೆಲೆಬಾಳುವ ಅನೇಕ ಮರಗಳು ಸುಟ್ಟು ಭಸ್ಮವಾಗಿವೆ. ಈಗಲೂ ಈ ಪ್ರದೇಶದಲ್ಲಿ ಬೆಂಕಿಯ ಜ್ವಾಲೆ ದೊಡ್ಡದೊಡ್ಡ ಮರಗಳಲ್ಲಿ ಕಾಣಿಸಿಕೊಂಡಿದೆ.

ಪ್ಲಾಂಟೇಷನ್‌ನಲ್ಲಿ ಬೆಳೆದ ಅಕೇಶಿಯಾ ದಿಮ್ಮಿ ಕಟಾವು ಮಾಡಲಾಗುತ್ತಿದ್ದು, ಈ ಪ್ರದೇಶದಲ್ಲಿ ಮತ್ತೆ  ಗಿಡಗಳನ್ನು ನೆಡುವ ಸಲುವಾಗಿ ಕಸಕಡ್ಡಿಗಳನ್ನು ಸ್ವಚ್ಛಗೊಳಿಸಲು ಎಂಪಿಎಂ ಹೀಗೆ ಬೆಂಕಿಹಾಕಿ ಸುಡಲಾಗುತ್ತದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಈ ಪ್ರದೇಶದಲ್ಲಿದ್ದ ಬೆಲೆಬಾಳುವ ಮತ್ತಿ, ಹೊನ್ನೆ, ನೇರಲು, ಹಲಸು, ನಂದಿ ಮುಂತಾದ ಮರಗಳು ಬೆಂಕಿಗೆ ಆಹುತಿಯಾಗಿವೆ.  ಪ್ಲಾಂಟೇಷನ್ನಿನ ಕೆಳ ಭಾಗದಲ್ಲಿದ್ದ ಚಿಕ್ಕಪುಟ್ಟ ಸಸಿಗಳು ಸುಟ್ಟು ಕರಕಲಾಗಿವೆ. 

ಬಿದಿರುಕಟ್ಟೆಯಿಂದ ಒಣಗಿದ ಬಿದಿರು ಮೆಳೆಗಳಿಗೆ ಬೆಂಕಿ ತಗುಲದಂತೆ ಎಚ್ಚರ ವಹಿಸಿ ಉಳಿದ ಭಾಗಗಳಲ್ಲಿನ ಕಸಕಡ್ಡಿಗಳನ್ನು ಎಂಪಿಎಂ ಇಲಾಖೆಯವರೇ ಸುಟ್ಟಿದ್ದಾರೆ ಎಂದು ಸ್ಥಳೀಯ ಗ್ರಾಮಸ್ಥರು ಹೇಳುತ್ತಾರೆ. ಮಲೆನಾಡಿನಲ್ಲಿ ಈಗ ಎಂಪಿಎಂ ಪ್ಲಾಂಟೇಷನ್ನಿನಲ್ಲಿ ಅಕೇಶಿಯಾ ಮರಗಳನ್ನು ಕಡಿದು ಸಾಗಿಸಲಾಗುತ್ತಿದೆ. ಬೃಹತ್ ಗಾತ್ರದ ಲಾರಿಗಳ ಓಡಾಟಕ್ಕೆ ಗ್ರಾಮಾಂತರ ಪ್ರದೇಶದ ರಸ್ತೆಗಳು ಹಾಳಾಗುತ್ತಿವೆ. ಎಲ್ಲಿ ಬೇಕೆಂದರಲ್ಲಿ ಗುಡ್ಡ ಅಗೆದು ರಸ್ತೆ ಮಾಡುವುದರಿಂದ ಚರಂಡಿಗೆ ಮಣ್ಣು  ತುಂಬಿಸುವುದರಿಂದ ಮಳೆಗಾಲದಲ್ಲಿ ರಸ್ತೆಗಳ ಮೇಲೆ ನೀರು ಹರಿದು ಹಾಳಾಗುತ್ತಿದೆ. ಈ ಕುರಿತು ಎಚ್ಚರ ವಹಿಸದ ಎಂಪಿಎಂ ಕಾಡುಗಳನ್ನು ತನಗೆ ಬೇಕಾದಂತೆ ಬಳಸಿಕೊಳ್ಳುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.

ಈಗಾಗಲೇ ತಾಲ್ಲೂಕಿನ ಅನೇಕ ಕಡೆಗಳಲ್ಲಿ ಎಂಪಿಎಂ ಪ್ಲಾಂಟೇಷನ್ನುಗಳಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಇದೊಂದು ನಿಯೋಜಿತ ಕ್ರಮವಾಗಿದೆ. ಸಾಂಪ್ರದಾಯಕವಾಗಿ ಕಡಿತಲೆಯಾದ ಪ್ರದೇಶವನ್ನು ಸುಟ್ಟು ಸ್ವಚ್ಛಗೊಳಿಸಿ ಗಿಡಗಳನ್ನು ನೆಡಲಾಗುತ್ತದೆ. ಇದರಿಂದಾಗಿ ಹಳ್ಳಿಗಾಡಿನ ನದಿ ತೊರೆಗಳಲ್ಲಿ ನೀರು ಬರಿದಾಗುತ್ತಿದೆ. ಬಹಳ ಆಳದಿಂದ ನೀರನ್ನು ಹೀರಿ ಬೆಳೆಯುವ ಅಕೇಶಿಯಾ ಮರಗಳಿಂದ ನೀರಿನ ಕೊರತೆ ಎದುರಾಗಿ ಬೇಸಾಯಕ್ಕೆ ನೀರು ಸಮರ್ಪಕವಾಗಿ ಸಿಗುತ್ತಿಲ್ಲ ಎಂದು ರೈತರು ತಮ್ಮ ಅಸಹಾಯಕತೆ  ತೋಡಿಕೊಳ್ಳುತ್ತಾರೆ.

 ಮಲೆನಾಡಿನ ಸಾವಿರಾರು ಎಕರೆ ಪ್ರದೇಶಗಳಲ್ಲಿ ಎಂಪಿಎಂ ಪ್ಲಾಂಟೇಷನ್ ನಿರ್ಮಾಣ ಮಾಡಿರುವ ವಿವಾವ ಹೈಕೋರ್ಟ್ ಮೆಟ್ಟಿಲೇರಿದೆ. ಇತ್ತಿಚೆಗೆ ಸೊಪ್ಪಿನ ಬೆಟ್ಟ ಹಾಗೂ ಗೋಮಾಳ ಪ್ರದೇಶಗಳಲ್ಲಿ ಪ್ಲಾಂಟೇಷನ್ ನಿರ್ಮಾಣ ಮಾಡದಂತೆ ಕೋರ್ಟ್  ಆದೇಶ ನೀಡಿದ್ದರೂ ಅದನ್ನು ಎಂಪಿಎಂ ಪರಿಣಿಗಣಿಸುತ್ತಿಲ್ಲ ಎಂಬ ಆರೋಪಗಳು ಕೇಳಿಬಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.