ADVERTISEMENT

ಎಲ್ಲೆಡೆ ಈದ್ ಮಿಲಾದ್ ಸಂಭ್ರಮಾಚರಣೆ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2017, 6:07 IST
Last Updated 3 ಡಿಸೆಂಬರ್ 2017, 6:07 IST

ಶಿವಮೊಗ್ಗ: ಪ್ರವಾದಿ ಮಹಮದ್ ಪೈಗಂಬರರ ಜನ್ಮದಿನದ ಅಂಗವಾಗಿ ಮುಸ್ಲಿಮರು ಶನಿವಾರ ಈದ್ ಮಿಲಾದ್ ಹಬ್ಬವನ್ನು ಸಂಭ್ರಮ, ಸಡಗರದಿಂದ ಆಚರಿಸಿದರು. ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಶ್ರದ್ಧಾಭಕ್ತಿ ಮೆರೆದರು.

ನಗರದ ಎಲ್ಲ ಮಸೀದಿ, ಮೊಹಲ್ಲಾಗಳಲ್ಲಿ ವಿಶೇಷ ಪ್ರಾರ್ಥನೆಯನ್ನು ಏರ್ಪಡಿಸಲಾಗಿತ್ತು. ಗಾಂಧಿ ಬಜಾರ್, ಲಷ್ಕರ್ ಮೊಹಲ್ಲಾ, ಬಾಪೂಜಿನಗರ ಮುಖ್ಯ ರಸ್ತೆ, ಬಾಲರಾಜ ಅರಸ್ ರಸ್ತೆ, ಮಹಾವೀರ ವೃತ್ತ, ಬಿ.ಎಚ್.ರಸ್ತೆ, ಗೋಪಿವೃತ್ತ, ನೆಹರೂ ರಸ್ತೆ, ಎ.ಎ.ವೃತ್ತ ಸೇರಿದಂತೆ ನಾನಾ ಕಡೆಯಿಂದ ಮೆರವಣಿಗೆಯಲ್ಲಿ ಬಂದ ಜನರು ಕೆಇಬಿ ವೃತ್ತದಲ್ಲಿ ಸೇರಿದರು.

ನಗರದ ನಾಲ್ಕು ದಿಕ್ಕಿನಿಂದಲೂ ಮೆರವಣಿಗೆಗಳು ಸಾಗಿ ಬಂದವು. ಪ್ರತಿಯೊಂದು ಬಡಾವಣೆಯ ಮಸೀದಿಗಳಿಂದಲೂ ಮೆರವಣಿಗೆ ಆಯೋಜಿಸಲಾಗಿತ್ತು. ರಸ್ತೆಯುದ್ದಕ್ಕೂ ಮೆಕ್ಕಾ, ಮದೀನ ಪ್ರತಿಕೃತಿಗಳು ಮನಸೂರೆಗೊಂಡವು. ಟಿಪ್ಪು ಸುಲ್ತಾನ್ ವೇಷಧಾರಿಗಳ ಹಿಂದೆ ಸೈನಿಕರಾಗಿ ಕುದುರೆ ಗಾಡಿಗಳಲ್ಲಿ ಸಾಗಿಬಂದ ಚಿಣ್ಣರು ಎಲ್ಲರ ಗಮನ ಸೆಳೆದರು. ಅಲಂಕೃತ ಎತ್ತಿನಗಾಡಿ, ಕುದುರೆಗಾಡಿ, ಆಟೊ, ಟೆಂಪೊ ಮತ್ತು ಕಾರುಗಳು ಮೆರವಣಿಗೆಯಲ್ಲಿ ಸಾಗಿಬಂದವು.

ADVERTISEMENT

ಮೆರವಣಿಗೆಯಲ್ಲಿ ಯುವಕರು ಹಾಡುಗಳಿಗೆ ಹೆಜ್ಜೆ ಹಾಕಿದರು. ಎಲ್ಲೆಲ್ಲೂ ಮುಸ್ಲಿಂ ಧರ್ಮದ ಬಾವುಟಗಳು ಹಾರಾಡುತ್ತಿದ್ದವು. ಸಾವಿರಾರು ಮುಸ್ಲಿಮರು ಸೇರಿದ್ದ ಮೆರವಣಿಗೆ ಹಾದು ಬಂದ ರಸ್ತೆಗಳು ಜಾತ್ರೆಯಾಗಿ ಮಾರ್ಪಟ್ಟಿದ್ದವು. ಈ ಬಾರಿ ಮುಸ್ಲಿಂ ಮಹಿಳೆಯರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಸಾಗರ
ಇಲ್ಲಿನ ಮುಸ್ಲಿಮರು ಶನಿವಾರ ಈದ್‌ ಮಿಲಾದ್‌ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು. ಹಬ್ಬದ ಅಂಗವಾಗಿ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಿತು. ಇದಕ್ಕೂ ಮುನ್ನ ವಿವಿಧ ಬಡಾವಣೆಗಳಲ್ಲಿನ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ನಡೆಯಿತು. ಇಲ್ಲಿನ ಉಪವಿಭಾಗೀಯ ಸರ್ಕಾರಿ ಆಸ್ಪತ್ರೆಯಲ್ಲಿ ಅಲ್‌ ಅಮೀನ್‌ ಮಸೀದಿ ಸಮಿತಿಯಿಂದ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು. ಧರ್ಮಗುರು ಎನ್‌.ಎ.ನೌಫಲ್‌ ರೆಹೆಮಾನಿ, ಮೊಹಿದ್ದೀನ್‌ ಸಾಬ್‌, ಅಬ್ದುಲ್‌ ಖಾದರ್‌, ಅಮೀರ್‌ ಹಂಜಾ, ಅಬ್ದುಲ್‌ ಸಲಾಂ, ಯೂಸೂಫ್‌ ಸಾಬ್‌, ಮೋಣು, ಮುರ‍್ರತ್‌ ಹಾಜರಿದ್ದರು.

ಭದ್ರಾವತಿ
ಕೈಯಲ್ಲಿ ಹಸಿರು ಧ್ವಜ, ಘೋಷಣೆ ಗಳು.. ಬಣ್ಣ ಬಣ್ಣದ ಮಿನಾರ್‌ಗಳ ಸಾಲು, ಪವಿತ್ರ ಮೆಕ್ಕಾ, ಮದೀನ ಹೋಲುವ ಚಿತ್ರಗಳ ಸಾಲಿನ ನಡುವೆ ಅದ್ದೂರಿಯಾಗಿ ಸಾಗಿದ ಈದ್ ಮಿಲಾದ್ ಮೆರವಣಿಗೆ ನಡೆಯಿತು. ನಗರದ ಹೊಳೆಹೊನ್ನೂರು ವೃತ್ತದಿಂದ ವಿವಿಧ ಮಸೀದಿಗಳ ಧರ್ಮ ಗುರುಗಳು, ಸಮಾಜದ ಮುಖಂಡರು ಹಾಗೂ ವಿವಿಧ ಮಸೀದಿಗಳ ಸಮಿತಿ ಸದಸ್ಯರ ನೇತೃತ್ವದಲ್ಲಿ ಆರಂಭವಾದ ಮೆರವಣಿಗೆ, ಪ್ರಮುಖ ರಸ್ತೆಯಲ್ಲಿ ಸಂಚರಿಸಿ ತರೀಕೆರೆ ರಸ್ತೆ ಈದ್ಗಾ ಮೈದಾನ ತಲುಪಿತು.

ಮೆರವಣಿಗೆಯಲ್ಲಿ ಬರುವ ದಾರಿಯುದ್ದಕ್ಕೂ ಜನರಿಗೆ ತಂಪು ಪಾನೀಯ, ಚಹಾ, ಮಜ್ಜಿಗೆ, ಹಣ್ಣುಗಳ ವಿತರಣೆಯನ್ನು ವಿವಿಧ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಮಾಡಲಾಗಿತ್ತು. ಟಿಪ್ಪು ಸುಲ್ತಾನ್ ರಾಷ್ಟ್ರಪ್ರೇಮಿ ಯುವಕರ ಸಂಘದಿಂದ ಬಡ ಮಹಿಳೆಯರಿಗೆ ಸೀರೆ ವಿತರಿಸಲಾಯಿತು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮುತ್ತುರಾಜ್ ಇದಕ್ಕೆ ಚಾಲನೆ ನೀಡಿದರು.

ಈದ್ಗಾ ಮೈದಾನದಲ್ಲಿ ಆಯೋಜಿಸಲಾದ ಧರ್ಮಸಭೆಯಲ್ಲಿ ಧರ್ಮಗುರುಗಳು ಪ್ರವಚನ ಮಾಡಿದರು. ಈ ವೇಳೆ ಪರಸ್ಪರ ಆಲಿಂಗಿಸಿಕೊಂಡು ಶುಭಾಶಯ ಕೋರಿದರು. ಅಂಜುಮನ್ ಸಂಸ್ಥೆಯ ಅಧ್ಯಕ್ಷ ಶೇಖ್ ಮೆಹಬೂಬ್, ಸಿ.ಎಂ.ಖಾದರ್, ಸಿ.ಎಂ.ಸಾದಿಕ್, ಪೀರ್ ಷರೀಫ್, ಮಹಮ್ಮದ್ ಸನಾವುಲ್ಲಾ, ಅಮೀರ್ ಜಾನ್, ದಿಲ್ದಾರ್, ಇಮ್ರಾನ್, ಮೆಹಬೂಬ್, ಸದಾವಲಿ ಅವರೂ ಇದ್ದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ಖರೆ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದರು. ಡಿವೈಎಸ್ಪಿ ಶಿವಕುಮಾರ್, ವೃತ್ತ ನಿರೀಕ್ಷಕರಾದ ಚಂದ್ರಶೇಖರ್, ಅಶೋಕ ಕುಮಾರ್ ಬಂದೋಬಸ್ತ್ ಕಾರ್ಯ ನಿರ್ವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.