ADVERTISEMENT

ಒತ್ತುವರಿ ಕಟ್ಟಡ ತೆರವು ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2011, 6:15 IST
Last Updated 1 ಫೆಬ್ರುವರಿ 2011, 6:15 IST

ಶಿವಮೊಗ್ಗ: ಜಿಲ್ಲಾಡಳಿತ, ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ನಗರದ ಗಾರ್ಡನ್ ಏರಿಯಾದಲ್ಲಿನ ರಾಜಕಾಲುವೆ ಹಾಗೂ ಕನ್ಸರ್‌ವೆನ್ಸಿಗಳ ಒತ್ತುವರಿ ಕಟ್ಟಡಗಳನ್ನು ಸೋಮವಾರ ಪೊಲೀಸ್ ನೆರವಿನಲ್ಲಿ ತೆರವುಗೊಳಿಸಿತು.

ಬೆಳಿಗ್ಗೆ 6ಗಂಟೆಯಿಂದಲೇ ದಿಢೀರ್ ತೆರವು ಕಾರ್ಯಾಚರಣೆ ನಡೆಸಿದ ನಗರಸಭೆ ಸಿಬ್ಬಂದಿ, ಗಾರ್ಡನ್ ಏರಿಯಾದಲ್ಲಿನ 20ಕ್ಕೂ ಹೆಚ್ಚು ಅನಧಿಕೃತ ಕಟ್ಟಡಗಳನ್ನು ಜೆಸಿಬಿ ಮೂಲಕ ತೆರವುಗೊಳಿಸಿದರು.  

ಗಾರ್ಡ್‌ನ ಏರಿಯಾದ ಎಲ್‌ಎಲ್‌ಆರ್ ರಸ್ತೆಯಿಂದ ಆರಂಭವಾದ ತೆರವು ಕಾರ್ಯಾಚರಣೆ ಸಂದರ್ಭದಲ್ಲಿ ಸುಮಾರು 20ಕ್ಕೂ ಹೆಚ್ಚು ಅನಧಿಕೃತ ಕಟ್ಟಡಗಳು ನೆಲಕ್ಕುರುಳಿದವು. ಇವುಗಳಲ್ಲಿ ಬಹುತೇಕ ಎಲ್ಲ ಅಂಗಡಿಗಳು ಗ್ಯಾರೇಜ್-ವರ್ಕ್‌ಶಾಪ್ ಅಂಗಡಿಗಳಿದ್ದವು. ಈ ಸಂದರ್ಭದಲ್ಲಿ ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು.

ದಿಢೀರ್ ತೆರವಿಗೆ ಆಕ್ಷೇಪ: ಏಕಾಏಕಿ ತೆರವು ಕಾರ್ಯಾಚರಣೆ ನಡೆಸಿದ್ದಕ್ಕೆ ಕೆಲ ಅಂಗಡಿ ಮಾಲೀಕರು ಆಕ್ರೋಶ ವ್ಯಕ್ತಪಡಿಸಿದರು. ‘ಲಕ್ಷಾಂತರ ಬಂಡವಾಳ ಹಾಕಿ ವ್ಯವಹಾರ ನಡೆಸುತ್ತಿದ್ದೇವೆ. ಮುನ್ಸೂಚನೆ ಇಲ್ಲದೇ, ತೆರವುಗೊಳಿಸಿದರೆ ಎಲ್ಲಿ ಹೋಗೋದು? ಜೀವನ ನಡೆಸುವುದು ಹೇಗೆ?’ ಎಂದು ತೆರವುಗೊಂಡ ವ್ಯಾಪಾರಿಗಳು ಅಳಲುತೋಡಿಕೊಂಡರು.

ಆದರೆ, ಸ್ಥಳದಲ್ಲಿದ್ದ ಪೊಲೀಸರ ನೆರವು ಬಳಸಿಕೊಂಡು ಅನಧಿಕೃತ ಕಟ್ಟಡಗಳನ್ನು ಮುಲಾಜಿಲ್ಲದೆ ತೆರವುಗೊಳಿಸಲಾಯಿತು. ಆಗ, ಮಾಲೀಕರು ಆತುರದಿಂದ ಅಂಗಡಿಯಲ್ಲಿದ್ದ ಸಾಮಗ್ರಿಗಳನ್ನು ಸಾಗಿಸಿದರು.

20 ಅಡಿ ಒತ್ತುವರಿಯಾಗಿತ್ತು: ಕನ್ಸರ್‌ವೆನ್ಸಿ ಮತ್ತು ರಾಜಕಾಲುವೆಗಳೆರಡರಲ್ಲೂ ಒತ್ತುವರಿ ತೆರವು ಕಾರ್ಯಾಚರಣೆ ಮಾಡಲಾಗಿದೆ. ಸುಮಾರು 20 ಅಡಿ ಅಗಲದ ರಾಜಕಾಲುವೆಗಳ ಸಂಪೂರ್ಣ ಒತ್ತುವರಿಯಾಗಿತ್ತು. ಇದರಿಂದ ಮಳೆಗಾಲದಲ್ಲಿ ನೀರು ಸರಾಗವಾಗಿ ಹರಿಯದೆ, ನೆರೆ ಉಂಟಾಗುತ್ತಿತ್ತು. ಆದ್ದರಿಂದ ಅಕ್ರಮ ಕಟ್ಟಡಗಳನ್ನು ಅನಿವಾರ್ಯವಾಗಿ ತೆರವುಗೊಳಿಸಲಾಯಿತು ಎಂದು ಆಯುಕ್ತ ಬಿ. ಜಯಣ್ಣ ತಿಳಿಸಿದರು.

ಮೊದಲ ಹಂತವಾಗಿ ಗಾರ್ಡನ್ ಏರಿಯಾದಲ್ಲಿ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಆರಂಭವಾಗಿದೆ. ಮುಂದಿನ ದಿನಗಳಲ್ಲಿ ನಗರದ ರಾಜಕಾಲುವೆ ಮತ್ತು ಕನ್ಸರ್‌ವೆನ್ಸಿಗಳ ಒತ್ತುವರಿ ತೆರವನ್ನು ಹಂತ ಹಂತವಾಗಿ ಕೈಗೆತ್ತಿಕೊಳ್ಳಲಾಗುವುದು ಎಂದೂ ಅವರು ಸ್ಪಷ್ಟಪಡಿಸಿದರು.
ಉಪ ವಿಭಾಗಾಧಿಕಾರಿ ಎಂ.ಎಲ್. ವೈಶಾಲಿ, ತಹಶೀಲ್ದಾರ್ ಚಂದ್ರಶೇಖರ್ ಮತ್ತಿತರರು ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.