ADVERTISEMENT

ಕಳಪೆ ರಸ್ತೆ: ಜಿ.ಪಂ. ಅಧ್ಯಕ್ಷರಿಂದ ತೀವ್ರ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2011, 6:15 IST
Last Updated 17 ಸೆಪ್ಟೆಂಬರ್ 2011, 6:15 IST

ದಾವಣಗೆರೆ: `ಸರ್ಕಾರದ ದುಡ್ಡು ಕೊಳ್ಳೆ ಹೊಡೆಯೋಕೆ ಬಂದಿದ್ದೀರಾ? ಅಲ್ರೀ, ದನ ಕಾಯುವ ಹುಡುಗನಿಗೆ ಗೊತ್ತಾಗುತ್ತೆ ಮಳೆಗಾಲದಲ್ಲಿ ಟಾರು ಹಾಕಿಸಬಾರದು ಅಂತ. ನಿಮಗೆ ಗೊತ್ತಾಗಲ್ವಾ? ನಿಮಗೆ `ಕಾಮನ್‌ಸೆನ್ಸ್~ ಇದೆಯೇ? ಅಬ್ಬಾ ಆ ದೇವರೇ ಕಾಯ್ಬೇಕು!~

-ಇದು ನಗರದ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಶುಕ್ರವಾರ ನಡೆದ  ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆಡಿಪಿ) ಜಿಲ್ಲಾಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷ ಕೆ.ಜಿ. ಬಸವಲಿಂಗಪ್ಪ ಲೋಕೋಪಯೋಗಿ ಇಲಾಖೆ ಎಂಜಿನಿಯರ್‌ಗಳನ್ನು ತರಾಟೆ ತೆಗೆದುಕೊಂಡ ರೀತಿ.

ಜಿಲ್ಲೆಯ ಸೂಳೆಕೆರೆ-ಚನ್ನಗಿರಿ, ಕುಮುಟಾ- ಕರಮಡಗಿ, ದೊಡ್ಡಅಬ್ಬಿಗೆರೆ-ನಲ್ಲೂರು ರಸ್ತೆ ಮತ್ತು ಇತರ ಕಡೆಗಳಲ್ಲಿ ಕಳಪೆ ಕಾಮಗಾರಿಗಳನ್ನು ನಾನೇ ಕಣ್ಣಾರೆ ಕಂಡಿದ್ದೇನೆ. ರುದ್ರಾಪುರದ ರಸ್ತೆಯಲ್ಲಿ ಟಾರು ಹಾಕಿ 6 ತಿಂಗಳಾಗಿಲ್ಲ. ಆಗಲೇ ಕಿತ್ತುಹೋಗಿದೆ. 1ಕಿ.ಮೀ. ರಸ್ತೆಗೆ ್ಙ 30ರಿಂದ ್ಙ 40ಲಕ್ಷ ಅಂದಾಜು ವೆಚ್ಚ ತೋರಿಸ್ತೀರಿ. ಅಷ್ಟು ದುಡ್ಡು ಖರ್ಚು ಮಾಡಿರೋ ರಸ್ತೆ ಆರು ತಿಂಗಳಲ್ಲೇ ಗುಂಡಿ ಬೀಳುತ್ತೆ ಅಂದ್ರೆ ಏನ್ರೀ ಅರ್ಥ? ಎಂದು ಹರಿಹಾಯ್ದರು.

 ಪ್ರತಿ ಮಳೆಗಾಲದಲ್ಲೇ ಟಾರು ಹಾಕಿಸಿ, ಸರ್ಕಾರದ ಹಣ ವ್ಯರ್ಥಮಾಡಿದ್ದೀರಿ. ದನ ಕಾಯುವ ಹುಡುಗನಿಗೆ ಇರುವ ಸಾಮಾನ್ಯ ಜ್ಞಾನ ಬಿಇ ಮಾಡಿಕೊಂಡಿರೋ ನಿಮಗೆ ಇಲ್ಲ ಅಂದ್ರೆ ನೀವು ಕೆಲಸ ಮಾಡಲು ಅಸಮರ್ಥರು ಅಂತಲೇ ಅರ್ಥ. ಸಭೆಗೆ ಬರುವ ಮುನ್ನ ವರದಿಯನ್ನು ಅಧ್ಯಕ್ಷರಿಗೆ ತಲುಪಿಸುವ ಪರಿಪಾಠವೂ ನಿಮಗಿಲ್ಲ. ಮಳೆಗಾಲದಲ್ಲಿ ಯಾವುದೇ ರಸ್ತೆಗಳಿಗೆ ಟಾರು ಹಾಕಿಸಬೇಡಿ. ಬರೀ ಮೆಟ್ಲಿಂಗ್ ಮಾತ್ರ ಮಾಡಬೇಕು ಎಂದು ಗುತ್ತಿಗೆದಾರರಿಗೆ ಬಸವಲಿಂಗಪ್ಪ ಸೂಚನೆ ನೀಡಿದರು.

ಅಧ್ಯಕ್ಷರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಲು ತಡವರಿಸಿದ ಲೋಕೋಪಯೋಗಿ ಇಲಾಖೆ ಎಂಜಿನಿಯರ್, ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಊರಿಗೆ ಹೋಗಿದ್ದಾರೆ. ಅವರ ಪರವಾಗಿ ನಾನು ಸಭೆಗೆ ಹಾಜರಾಗಿದ್ದೇನೆ. ನನಗೆ ಹೆಚ್ಚಿನ ಮಾಹಿತಿ ಇಲ್ಲ. ಕಾಮಗಾರಿಗಳನ್ನು `ರೆಕ್ಟಿಫೈ~ ಮಾಡಿ ತಮಗೆ ವರದಿ ಸಲ್ಲಿಸುತ್ತೇನೆ ಎಂದು ಸಮಜಾಯಿಷಿ ನೀಡಿದರು.

ಕೆಡಿಪಿ ಸಭೆಯುದ್ದಕ್ಕೂ ರಸ್ತೆಯ ಅವ್ಯವಸ್ಥೆ ಕುರಿತು ಅಧ್ಯಕ್ಷರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಸಭೆಯಲ್ಲಿ ಉಪಾಧ್ಯಕ್ಷ ಟಿ. ಮುಕುಂದ, ಮುಖ್ಯ ಯೋಜನಾಧಿಕಾರಿ ಜಿ.ಆರ್. ಓಂಕಾರಪ್ಪ, ಮುಖ್ಯ ಲೆಕ್ಕಾಧಿಕಾರಿ ಎಂ.ಎಸ್. ಜಯರಾಂ ಮತ್ತು ಉಪ ಕಾರ್ಯದರ್ಶಿ ಬಿ.ಎಸ್. ಷಡಕ್ಷರಪ್ಪ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಸುಧಾ ವೀರೇಂದ್ರಪಾಟೀಲ್, ಸಾಮಾಜಿಕ ಮತ್ತು ನ್ಯಾಯ ಸಮಿತಿ ಅಧ್ಯಕ್ಷೆ ಜಯಲಕ್ಷ್ಮೀ, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷೆ ಅಂಬಿಕಾ ರಾಜಪ್ಪ ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.