ADVERTISEMENT

ಕಾಗೋಡು -ಬಿಎಸ್‌ವೈ ಒಳ ಒಪ್ಪಂದ: ಈಶ್ವರಪ್ಪ ಆರೋಪ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2013, 19:59 IST
Last Updated 6 ಏಪ್ರಿಲ್ 2013, 19:59 IST

ಶಿವಮೊಗ್ಗ: ಜಿಲ್ಲೆಯಲ್ಲಿ ಅಭ್ಯರ್ಥಿಗಳ ಆಯ್ಕೆಯಲ್ಲಿ ಕೆಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹಾಗೂ ಕಾಂಗ್ರೆಸ್‌ನ ಕಾಗೋಡು ತಿಮ್ಮಪ್ಪ ಜಾತಿ ಆಧಾರದಲ್ಲಿ ಒಳಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಆರೋಪಿಸಿದರು.

ರಾಜ್ಯದ ಇತರ ಭಾಗಗಳಲ್ಲೂ ಇದೇ ರೀತಿಯ ಒಳಒಪ್ಪಂದ ಮಾಡಿಕೊಳ್ಳಲಾಗಿದ್ದು, ಇದನ್ನು ಮುಂದಿನ ದಿನಗಳಲ್ಲಿ ಬಹಿರಂಗ ಪಡಿಸಲಾಗುವುದು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಹೇಳಿದರು.

ಜಿಲ್ಲೆಯಲ್ಲಿ ಜಾತಿ ಆಧಾರದಲ್ಲಿ ಮತ ಚಲಾವಣೆ ಆಗುವುದಿಲ್ಲ. ಹಿಂದಿನ ಚುನಾವಣೆಗಳಲ್ಲಿ ಇದು ದೃಢಪಟ್ಟಿದೆ. ಜಿಲ್ಲೆಯ ಬ್ರಾಹ್ಮಣರು ಬಿಜೆಪಿ ಪರವಾಗಿಯೇ ಇದ್ದಾರೆ ಎಂದರು.

ಕಾಗೋಡು ತಿಮ್ಮಪ್ಪ ಅವರ ಶಿಕ್ಷಣ ಸಂಸ್ಥೆಗೆ ಸರ್ಕಾರದಿಂದ ಭೂಮಿ ಮಂಜೂರು ಮಾಡಲಾಗಿದ್ದು, ಇದು ಚುನಾವಣೆಯ ಒಪ್ಪಂದ ಎಂಬ ಆರೋಪ ಇದೆಯಲ್ಲ ಎಂಬ ಮಾಧ್ಯಮದವರ ಪ್ರಶ್ನೆಗೆ, ಅವಶ್ಯಕತೆ ಇದ್ದ ಕಾರಣ ಸಚಿವ ಸಂಪುಟದಿಂದ ಶಿಕ್ಷಣ ಸಂಸ್ಥೆಗೆ ಭೂಮಿ ನೀಡಲಾಗಿದೆ. ಇದರಲ್ಲಿ ತಮ್ಮ ಪಾತ್ರ ಇಲ್ಲ ಎಂದು ತಿಳಿಸಿದರು.   

ಕಾಂಗ್ರೆಸ್‌ನಲ್ಲಿ ರಾಜ್ಯ ನಾಯಕರದ್ದು ಏನೂ ನಡೆಯುತ್ತಿಲ್ಲ. ಸ್ಥಳೀಯ ನಾಯಕರ ಅಪೇಕ್ಷೆಗಳಿಗೆ ಬೆಲೆ ಇಲ್ಲ. ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ, ಚುನಾವಣಾ ಚಟುವಟಿಕೆಗಳು ಎಲ್ಲ ದೆಹಲಿಯಲ್ಲೇ ನಡೆಯುತ್ತಿವೆ. ಆದರೆ, ಬಿಜೆಪಿಯಲ್ಲಿ ಸ್ಥಳೀಯರ ಅಪೇಕ್ಷೆಯಂತೆ ಅಭ್ಯರ್ಥಿಗಳ ಆಯ್ಕೆ ನಡೆದಿದೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.