ADVERTISEMENT

ಕಾಮಗಾರಿ ಮುಗಿಸಲು ಸೂಚನೆ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2011, 10:00 IST
Last Updated 8 ಅಕ್ಟೋಬರ್ 2011, 10:00 IST
ಕಾಮಗಾರಿ ಮುಗಿಸಲು ಸೂಚನೆ
ಕಾಮಗಾರಿ ಮುಗಿಸಲು ಸೂಚನೆ   

ಸಾಗರ: ಪ್ರಯಾಣಿಕರ ಅನುಕೂಲಕ್ಕಾಗಿ ಇಲ್ಲಿನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ನಡೆಯುತ್ತಿರುವ ಪ್ಲಾಟ್‌ಫಾರಂ ಕಾಮಗಾರಿ ವಿಳಂಬ ಗತಿಯಲ್ಲಿ ಸಾಗಿದ್ದು, ಅದನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.

ಇಲ್ಲಿನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ವಿವಿಧ ಪ್ರದೇಶಗಳಿಗೆ ಆರಂಭಿಸಲಾಗಿರುವ ನೂತನ ಬಸ್ ಸಂಚಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಬಸ್ ನಿಲ್ದಾಣದಲ್ಲಿ ಪ್ಲಾಟ್‌ಫಾರಂ ವ್ಯವಸ್ಥೆ ಸರಿಯಾಗಿ ಇಲ್ಲದ ಕಾರಣ ಪ್ರಯಾಣಿಕರಿಗೆ ತೊಂದರೆ ಅಗುತ್ತಿತ್ತು. ಮಳೆಗಾಲದಲ್ಲಿ ನೀರು ನಿಂತು ಬಸ್‌ಗಳ ಸಂಚಾರಕ್ಕೂ ತೊಡಕು ಉಂಟಾಗುತ್ತಿದೆ. ಇದನ್ನು ನಿವಾರಿಸಲು ಒಂದು ಕೋಟಿ ರೂ. ವೆಚ್ಚದಲ್ಲಿ ಇ ಟೆಂಡರ್ ಮೂಲಕ ಪ್ಲಾಟ್‌ಫಾರಂ ಕಾಮಗಾರಿ ಗುತ್ತಿಗೆ ವಹಿಸಿದ್ದುನಿಗದಿತ ಅವಧಿಯಲ್ಲಿ ಕೆಲಸ ಆಗದೆ ಇರುವುದು ಬೇಸರದ ಸಂಗತಿ ಎಂದರು.

ಸಾರಿಗೆ ಇಲಾಖೆಗೆ ಸಲ್ಲಿಸಿದ ಬೇಡಿಕೆ ಆಧಾರದ ಮೇರೆಗೆ ಐದು ಹೊಸ ಬಸ್ ಮಂಜೂರು ಮಾಡಲಾಗಿದೆ. ಈ ಪೈಕಿ ಎರಡು ಬಸ್‌ಗಳನ್ನು ನಗರ ಸಾರಿಗೆ ಸಂಚಾರಕ್ಕೆ ಬಳಸಲಾಗುವುದು. ಉಳಿದ ಬಸ್‌ಗಳನ್ನು ಆವಿನಹಳ್ಳಿ, ಹೊಳೆಬಾಗಿಲು, ಸಿಗಂದೂರು, ಜೋಗ್‌ಫಾಲ್ಸ್, ಚಂದ್ರಗುತ್ತಿ   ಮೊದಲಾದ ಪ್ರದೇಶಗಳಿಗೆ ಬಿಡಲಾಗುವುದು ಎಂದು ಹೇಳಿದರು.

ನಗರ ಪ್ರದೇಶಗಳಿಗೆ ಬಿಡುವ ಬಸ್‌ಗಳು ಅತ್ಯಾಧುನಿಕ ಸೌಲಭ್ಯ ಹೊಂದಿದ್ದರೆ ಸಾಲದು. ಹೆಚ್ಚಿನ ಪ್ರವಾಸಿ ಕೇಂದ್ರಗಳಿರುವ ಸಾಗರದಂತಹ ತಾಲ್ಲೂಕು ಕೇಂದ್ರಕ್ಕೂ ಇಂತಹ ಸೌಲಭ್ಯಗಳಿರುವ ಬಸ್‌ಗಳನ್ನು ಒದಗಿಸುವತ್ತ ಸಾರಿಗೆ ಇಲಾಖೆ ಗಮನ ಹರಿಸಬೇಕುಎಂದರು.

ನಗರಸಭೆ ಅಧ್ಯಕ್ಷ ರಾಧಾಕೃಷ್ಣ ಬೇಂಗ್ರೆ, ಉಪಾಧ್ಯಕ್ಷ ಡಿ. ರವಿ, ಸ್ಥಾಯಿ ಸಮಿತಿ ಅಧ್ಯಕ್ಷ ನಾಗರಾಜ್ ಸುಬ್ರು, ಕೆಎಸ್‌ಆರ್‌ಟಿಸಿ ಡಿಪೋ ವ್ಯವಸ್ಥಾಪಕ ರಮೇಶ್, ಟಾಕಪ್ಪ ಭೀಮನೇರಿ, ಸಿಂಗಾರಿಗೌಡ ಇನ್ನಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.