ADVERTISEMENT

ಕುಡಿಯುವ ನೀರಿಗೆ ಆಗ್ರಹಿಸಿ ಖಾಲಿ ಕೊಡಗಳ ಕೂಗು

​ಪ್ರಜಾವಾಣಿ ವಾರ್ತೆ
Published 14 ಜೂನ್ 2011, 10:20 IST
Last Updated 14 ಜೂನ್ 2011, 10:20 IST

ತೀರ್ಥಹಳ್ಳಿ: ಕುಡಿಯುವ ನೀರನ್ನು ತಕ್ಷಣ ಒದಗಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಬಾಂಡ್ಯ-ಕುಕ್ಕೆ ಗ್ರಾಮಸ್ಥರು ಸೋಮವಾರ ಬೆಜ್ಜವಳ್ಳಿ ಸಮೀಪ ಬಾಂಡ್ಯ ರಸ್ತೆಯಲ್ಲಿ ಖಾಲಿ ಕೊಡಗಳನ್ನು ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು.

ಬಾಂಡ್ಯ-ಕುಕ್ಕೆ ಗ್ರಾಮ ಪಂಚಾಯ್ತಿಯ ಗಂಟೆಜನಗಲ್ಲು, ಕೆಳಗಿನಕುಕ್ಕೆ, ಬಾಳೇಕೊಪ್ಪ, ಮೇಲಿನಬೆಜ್ಜವಳ್ಳಿ, ಸಾಲೇಜನಗಲ್ಲು, ಕುಕ್ಕೆ ಮೇಲಿನಪೇಟೆ, ದಿಂಡಿನಬೈಲು, ಪರಿಶಿಷ್ಟ ಕಾಲೊನಿ, ಸರುವಿನಕೊಪ್ಪ ಗ್ರಾಮಗಳಲ್ಲಿ ಕುಡಿಯುವ ನೀರಿನ ಅಭಾವ ತಲೆದೋರಿದ್ದು, ಸರ್ಕಾರ ತಕ್ಷಣ ಈ ಗ್ರಾಮಗಳಿಗೆ ನೀರನ್ನು ಪೂರೈಕೆ ಮಾಡಲು ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿನ ಸುಮಾರು ಒಂಬತ್ತು ಹಳ್ಳಿಗಳಿಗೆ ಕುಡಿಯುವ ನೀರಿನ ಸೌಲಭ್ಯವನ್ನು ಓವರ್‌ಹೆಡ್ ಟ್ಯಾಂಕ್ ಮೂಲಕ ಸರಬರಾಜು ಮಾಡುವ ಕಾಮಗಾರಿಯನ್ನು ಸುಮಾರು ್ಙ 35 ಲಕ್ಷ ವೆಚ್ಚದಲ್ಲಿ ಶಿವಮೊಗ್ಗ ಜಿಲ್ಲಾ ಪಂಚಾಯ್ತಿ, ಭೂಸೇನಾ ನಿಗಮದ ಮೂಲಕ  ಪೂರ್ಣಗೊಳಿಸಿದೆ.

ಈ ಸಂಬಂಧ ಬಾಂಡ್ಯ ಕುಕ್ಕೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಕೊಳವೆ ಬಾವಿಯನ್ನು ಕೊರೆಯಿಸಲಾಗಿದೆ. ಆದರೆ, ಈ ಕೊಳವೆ ಬಾವಿಗೆ ಕುಡುಮಲ್ಲಿಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವ ಚಿಡುವ ಗ್ರಾಮದ ಗ್ರಾಮಸ್ಥರು ಕಲ್ಲುಗಳನ್ನು ತುಂಬಿಸಿ ಹಾಳುಮಾಡಿ ನೀರನ್ನು ಬಳಸದಂತೆ ತಡೆಯುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಸುಮಾರು ಎರಡು ಸಾವಿರ ಜನರಿಗೆ ಅನುಕೂಲವಾಗುವ ಕುಡಿಯುವ ನೀರಿಯ ಯೋಜನೆಯನ್ನು ಹಾಳು ಮಾಡುವ ಉದ್ದೇಶದಿಂದ ಚಿಡುವ  ಗ್ರಾಮಸ್ಥರು ತಮ್ಮೂರಿನ ಕೆರೆಯ ಜಲಮೂಲಕ್ಕೆ ಕುತ್ತು ಬರುತ್ತದೆ. ಅಂತರ್ಜಲ ಕುಗ್ಗುತ್ತದೆ ಎಂಬ ಕಾರಣ ನೀಡಿ ಯೋಜನೆಯನ್ನು ತಡೆಯುವ ಪ್ರಯತ್ನ ನಡೆಸುತ್ತಿದ್ದಾರೆ.

ಸಂಬಂಧಪಟ್ಟ ಅಧಿಕಾರಿಗಳು ಸಮಸ್ಯೆಯ ತೀವ್ರತೆಯನ್ನು ಅರಿತು ಕೂಡಲೇ ಪರಿಹಾರ ಸೂಚಿಸಿ ಈ ಭಾಗದ ಹಳ್ಳಿಗಳಿಗೆ ಕುಡಿಯುವ ನೀರನ್ನು ಒದಗಿಸಲು ಮುಂದಾಗಬೇಕು ಎಂದು ಒತ್ತಾಯಿಸಿದರು.

ಸ್ಥಳಕ್ಕೆ ಶಾಸಕ ಕಿಮ್ಮನೆ ರತ್ನಾಕರ್ ಭೇಟಿ ನೀಡಿ, ಇನ್ನು ಮೂರು ದಿನಗಳಲ್ಲಿ ಚಿಡುವ ಗ್ರಾಮದ ಗ್ರಾಮಸ್ಥರೊಂದಿಗೆ ಮಾತನಾಡಿ, ಕಾನೂನಿನ ತೊಡಕಿಲ್ಲದೇ ಇದ್ದರೆ ಸೌಹಾರ್ದವಾಗಿ ಸಮಸ್ಯೆಯನ್ನು ಪರಿಹರಿಸಲಾಗುವುದು ಎಂದು ಭರವಸೆ ನೀಡಿದ ನಂತರ ಪ್ರತಿಭಟನೆಯನ್ನು ಹಿಂದೆ ಪಡೆದರು.
ಪ್ರತಿಭಟನೆಯಲ್ಲಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಟಿ.ಎಚ್. ಸೈಯದ್, ಉಪಾಧ್ಯಕ್ಷೆ ಪ್ರಿಯದರ್ಶಿನಿ, ಸದಸ್ಯರಾದ ಸರುವಿನಕೊಪ್ಪ ಉಮೇಶ್, ಎಸ್.ಟಿ. ದೇವರಾಜ್, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಮೀನಾಕ್ಷಿರಾಜು, ಜಿಲ್ಲಾ ಪಂಚಾಯ್ತಿ ಸದಸ್ಯೆ ಶ್ರುತಿ ವೆಂಕಟೇಶ್ ಮುಂತಾದವರು ಪಾಲ್ಗೊಂಡಿದ್ದರು.

ಮೆಸ್ಕಾಂ ನಿರ್ಲಕ್ಷ್ಯಕ್ಕೆ ಆಕ್ರೋಶ
ಮೆಸ್ಕಾಂನ ಬೇಜವಾಬ್ದಾರಿಯಿಂದ ಸಾರ್ವಜನಿಕರು ಅಪಾಯ ಎದುರಿಸಬೇಕಾದ ಪರಿಸ್ಥಿತಿ ತಾಲ್ಲೂಕಿನ ಬೆಜ್ಜವಳ್ಳಿ ಸಮೀಪ ಗೊರಕೋಡಿನಲ್ಲಿ ಎದುರಾಗಿದೆ ಎಂದು ಸ್ಥಳೀಯ ಗ್ರಾಮಸ್ಥರು ದೂರಿದ್ದಾರೆ.

 ಇಲ್ಲಿನ 11 ಕೆವಿಗೆ ಅಳವಡಿಸಿದ ವಿದ್ಯುತ್ ಪರಿವರ್ತಕದಲ್ಲಿ ಪದೇ ಪದೇ ಶಾರ್ಟ್ ಸರ್ಕಿಟ್‌ನಿಂದಾಗಿ ಬೆಂಕಿ ಕಾಣಿಸಿಕೊಳ್ಳುತ್ತಿದೆ. ಈ ಕುರಿತು ಮೆಸ್ಕಾಂಗೆ ಸಂಪರ್ಕಿಸಿ ಸಮಸ್ಯೆಯ ತೀವ್ರತೆಯನ್ನು ವಿವರಿಸಿ ಹೇಳಿದರೂ ಇಲಾಖೆ ಯಾವುದೇ ಕ್ರಮ ಜರುಗಿಸಿಲ್ಲ ಎಂದು ಸ್ಥಳೀಯ ಗ್ರಾಮಸ್ಥರಾದ ಗೊರಕೋಡು ಪುರುಷೋತ್ತಮ ಆರೋಪಿಸಿದ್ದಾರೆ.

 ಟಿಸಿ ಪಕ್ಕದಲ್ಲಿರುವ ಕಟೌಟ್ ಕಂಬದ 11 ಕೆವಿ ತಂತಿಯಲ್ಲಿ ಆಗಾಗ್ಗೆ ಶಾರ್ಟ್ ಸರ್ಕಿಟ್ ಆಗುವುದರಿಂದ ಅನೇಕಬಾರಿ ತಂತಿ ತುಂಡಾಗಿ ನೆಲದ ಮೇಲೆ ಬೀಳುತ್ತಿದೆ. ಈ ಪ್ರದೇಶದಲ್ಲಿ ಶಾಲಾ ವಿದ್ಯಾರ್ಥಿಗಳು, ಸಾರ್ವಜನಿಕರು, ಜಾನುವಾರುಗಳು ಓಡಾಟ ನಡೆಸುವುದರಿಂದ ಯಾವುದೇ ಹೊತ್ತಿನಲ್ಲಿ ಅಪಾಯ ಸಂಭವಿಸಬಹುದಾಗಿದೆ.

ತುಂಡಾದ ತಂತಿ ರಸ್ತೆಮೇಲೆಯೇ ಬೀಳುವುದರಿಂದ ಹಾಗೂ ವಿದ್ಯುತ್ ಪರಿವರ್ತಕದಲ್ಲಿ ಪದೇ ಪದೇ ಶಬ್ಧ ಹಾಗೂ ಬೆಂಕಿ ಏಳುವುದರಿಂದ ಈ ಪ್ರದೇಶದಲ್ಲಿನ ಜನರು ಭಯಭೀತರಾಗಿದ್ದಾರೆ ಎಂದು ಗ್ರಾಮಸ್ಥರಾದ ಬೆನಡಿಕ್ತ್ ಡಿಸೋಜ, ಮಹೇಶ, ಜಿ.ಎನ್. ಮಂಜಪ್ಪ, ಸುಶೀಲಾ, ರಾಮನಾಯ್ಕ, ಪೂರ್ಣಿಮಾ, ವಾಣಿ ಮುಂತಾದವರು ತಿಳಿಸಿದ್ದಾರೆ.

ಮಳೆಗಾಲದ ತಂಡಿ ವಾತಾವರಣದಲ್ಲಿ ಗ್ರೌಂಡಿಂಗ್ ಆಗುತ್ತಿರುವುದರಿಂದ ಮುಂದೆ ಸಂಭವಿಸಬಹುದಾದ ಅಪಾಯವನ್ನು ತಪ್ಪಿಸಲು ಮೆಸ್ಕಾಂ ತಕ್ಷಣ ತುರ್ತು ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.