ADVERTISEMENT

ಕುವೆಂಪು ವಿವಿ ಪರೀಕ್ಷಾ ಅಕ್ರಮ: ಕೆಲಸಕ್ಕೆ ಸಿಬ್ಬಂದಿ ಮನವಿ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2012, 6:53 IST
Last Updated 13 ಡಿಸೆಂಬರ್ 2012, 6:53 IST

ಭದ್ರಾವತಿ: ಕುವೆಂಪು ವಿವಿ ಪರೀಕ್ಷಾ ಅಕ್ರಮ ದೋಷಣೆಯಿಂದ ಸಸ್ಪೆಂಡ್ ಆಗಿರುವ ಸಿಬ್ಬಂದಿ, ತಮ್ಮನ್ನು ಪುನಃ ಕೆಲಸಕ್ಕೆ ತೆಗೆದುಕೊಳ್ಳುವಂತೆ ವಿನಂತಿಸಿ ಹಲವು ಅರ್ಜಿಗಳನ್ನು ತಮ್ಮ ಮೇಲಧಿಕಾರಿಗಳಿಗೆ ಸಲ್ಲಿಕೆ ಮಾಡಿದ್ದಾರೆ.

ತಮ್ಮ ಮೇಲಿರುವ ಅಪಾದನೆ ನ್ಯಾಯಾಲಯದ ಮುಂದಿದ್ದು, ಈಗಾಗಲೇ ಜಾಮೀನು ಪಡೆದು ನ್ಯಾಯಾಂಗ ಬಂಧನದಿಂದ ಹೊರ ಬಂದಿರುವ ತಮಗೆ ಕೆಲಸ ನೀಡಿ ಎಂದು ಕೆಲವರು ಹೈಕೋರ್ಟ್ ಸಹ ಅರ್ಜಿ ಸಲ್ಲಿಸಿದ್ದರು.

ಸದರಿ ನ್ಯಾಯಪೀಠ ಸ್ಪಷ್ಟ ಆದೇಶ ನೀಡಿ ಸಿಬ್ಬಂದಿ ಸಲ್ಲಿಸಿರುವ ಅರ್ಜಿಗಳನ್ನು ಪರಿಗಣಿಸಿ, ವಿವಿ ಆಡಳಿತ ಆದಷ್ಟು ಬೇಗ ಅದನ್ನು ಕಾನೂನು ಸಮ್ಮತವಾಗಿ ವಿಲೇವಾರಿ ಮಾಡುವಂತೆ ಆದೇಶಿಸಿದೆ.
ಇದರ ಬೆನ್ನಲ್ಲೇ ವಿವಿ ಆಡಳಿತ ಸಹ ಸಿಬ್ಬಂದಿ ಅಹವಾಲು ತುರ್ತು ಈಡೇರಿಸುವ ಸಲುವಾಗಿ ಅವರಿಗೆ ಸಮಜಾಯಿಷಿ ಕೇಳಿ ನೋಟಿಸ್ ನೀಡಿದ್ದು, ಅದಕ್ಕೆ ಅಮಾನತು ಸಿಬ್ಬಂದಿ ತಮ್ಮ ಉತ್ತರವನ್ನು ಸಲ್ಲಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ಸಮಿತಿ ಗೊಂದಲ: ಪ್ರಕರಣದ ತೀವ್ರತೆ ಹೆಚ್ಚಿದ ಸಂದರ್ಭದಲ್ಲಿ ವಿವಿ ಆಡಳಿತ ಸದಾನಂದ ನೇತೃತ್ವದ ಸಮಿತಿ ನೇಮಕ ಮಾಡಿತ್ತು. ಆದರೆ, ಸಮಿತಿ ನೀಡಿದ ವರದಿ ಕೇವಲ ಪರೀಕ್ಷಾ ವ್ಯವಸ್ಥೆಯಲ್ಲಿ ಮಾಡಬೇಕಿರುವ ಬದಲಾವಣೆ, ಮಾರ್ಗಸೂಚಿ ಕುರಿತು ಮಾಹಿತಿ ನೀಡಿ ತನ್ನ ಕೆಲಸ ಮುಗಿಸಿದೆ.

ಹೀಗಾಗಿ ಯಾವ ವಿಷಯವನ್ನು ಶೋಧನೆ ಮಾಡುವ ಮೂಲಕ ಸತ್ಯ ಬಹಿರಂಗ ಮಾಡಬೇಕಿದ್ದ ಸಮಿತಿ ಕೇವಲ ಪರೀಕ್ಷಾ ವ್ಯವಸ್ಥೆಯಲ್ಲಿನ ಕೆಲವೊಂದು ಬದಲಾವಣೆ ಕುರಿತಂತೆ ಸಲಹೆ, ಸೂಚನೆ ನೀಡಿ ಕೈತೊಳೆದುಕೊಂಡಿದ್ದು, ವಿವಿ ಆಡಳಿತಕ್ಕೆ ಮತ್ತಷ್ಟು ಸಮಸ್ಯೆಯನ್ನು ಸೃಷ್ಟಿ ಮಾಡಿತು.

ಈ ನಡುವೆ ತನಿಖೆ ನಡೆಸುತ್ತಿರುವ ಪೊಲೀಸರು ಪರೀಕ್ಷಾ ಉತ್ತರ ಪತ್ರಿಕೆ, ಅಂಕಪಟ್ಟಿ ಹಗರಣದಲ್ಲಿ ಭಾಗಿಯಾದ ಕಾಲೇಜು ಸಿಬ್ಬಂದಿಗಳ ವಿಚಾರಣೆ ನಡೆಸುವ ಜತೆಗೆ, ವಿವಿ ಪರೀಕ್ಷಾಂಗ ವಿಭಾಗಕ್ಕೆ ಭೇಟಿ ನೀಡಿ ಮತ್ತಷ್ಟು ಮಾಹಿತಿ ಕಲೆ ಹಾಕುವ ಯತ್ನ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.