ADVERTISEMENT

ಕುಸಿಯುವ ಹಂತದಲ್ಲಿ ಶಾಲಾ ಕಟ್ಟಡ!

​ಪ್ರಜಾವಾಣಿ ವಾರ್ತೆ
Published 18 ಜುಲೈ 2012, 6:35 IST
Last Updated 18 ಜುಲೈ 2012, 6:35 IST
ಕುಸಿಯುವ ಹಂತದಲ್ಲಿ ಶಾಲಾ ಕಟ್ಟಡ!
ಕುಸಿಯುವ ಹಂತದಲ್ಲಿ ಶಾಲಾ ಕಟ್ಟಡ!   

ತೀರ್ಥಹಳ್ಳಿ: ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸುವುದಿಲ್ಲ ಎಂಬ ಅಪವಾದ ಈ ಶಾಲೆಗಿಲ್ಲ. ಮಕ್ಕಳ ಸಂಖ್ಯೆಯೂ ಕಡಿಮೆ ಇಲ್ಲ. ಶಿಕ್ಷಕರೂ ಇದ್ದಾರೆ. ಬಿಸಿಯೂಟದೊಂದಿಗೆ ಶಾಲೆಯೂ ನಡೆಯುತ್ತಿದೆ. ಆದರೆ, ಶಾಲೆಯ ಕಟ್ಟಡ ಯಾವ ಕ್ಷಣದಲ್ಲಾದರೂ ಕುಸಿದು ಬೀಳುವ ಹಂತ ತಲುಪಿದ್ದು, ವಿದ್ಯಾರ್ಥಿಗಳು, ಶಿಕ್ಷಕರು ಆತಂಕದ ಕ್ಷಣಗಳನ್ನು ಎದುರಿಸುತ್ತಿದ್ದಾರೆ.

- ಇಂಥ ಆತಂಕದ ಕ್ಷಣಗಳನ್ನು ಎದುರಿಸುತ್ತಿರುವ ಶಾಲೆಯ ಹೆಸರು `ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆ ಇರೇಗೋಡು~.ಸೋರುತ್ತಿರುವ ಸೂರನ್ನು ದಿಟ್ಟಿಸಿನೋಡುತ್ತಾ, ಮೈಮೇಲೆ ಆಗಾಗ್ಗೆ ಬೀಳುವ ಗೆದ್ದಲ ಮಣ್ಣನ್ನು ಕೊಡವಿಕೊಳ್ಳುತ್ತಾ, ಪಾಠ ಕೇಳುವ ಮಕ್ಕಳಿಗೆ ಪ್ರತಿನಿತ್ಯ ಕೊಠಡಿಯೊಳಗೆ ಬೀಳುವ ರಾಶಿ ಗೆದ್ದಿಲ ಮಣ್ಣನ್ನು ಸಾರಿಸುವುದೇ ಕೆಲಸವಾಗಿದೆ.

1956-57ನೇ ಸಾಲಿನಲ್ಲಿ ಆರಂಭಗೊಂಡ ಶಾಲೆಯ ಕಟ್ಟಡವನ್ನು ಹಸಿ ಇಟ್ಟಿಗೆ ಹಾಗೂ ಮಣ್ಣಿನಿಂದ ನಿರ್ಮಿಸಲಾಗಿದೆ. ಸರಿಯಾದ ಅಡಿಪಾಯ ಹಾಕದೇ ಇರುವುದರಿಂದ ಗೋಡೆಗಳು ಬಿರುಕು ಬಿಟ್ಟಿವೆ. ಮಂಗಳೂರು ಹೆಂಚಿನ ಮಾಡು ಕುಸಿಯುತ್ತಿದೆ. ರೀಪು, ಪಕಾಸುಗಳು ಗೆದ್ದಲಿಗೆ ಆಹುತಿಯಾಗಿವೆ. ನೆಲಕ್ಕೆ ಹಾಕಿದ ಸಿಮೆಂಟ್ ಹಲ್ಲೆ ಹಲ್ಲೆಯಾಗಿ ಕಿತ್ತು ಬರುತ್ತಿದೆ. ಓರೆಯಾಗಿ ನಿಂತ ಗೋಡೆಗಳು ಯಾವ ಕ್ಷಣದಲ್ಲಾದರೂ ಬೀಳುವ ಸ್ಥಿತಿಯನ್ನು ತಲುಪಿವೆ.

ಈ ಶಾಲೆಯಲ್ಲಿ ಈಗ 19 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಹುಸನಿ, ತಾಟಳ್ಳಿ, ಇರೇಗೋಡಿನ ಮಕ್ಕಳ ಪ್ರಾಥಮಿಕ ಶಿಕ್ಷಣ ಕೇಂದ್ರವಾದ ಈ ಶಾಲೆಯಲ್ಲಿ ಕಲಿತ ಅನೇಕರು ಉನ್ನತ ಹುದ್ದೆಗಳನ್ನು ಅಲಂಕರಿಸಿ ಊರಿನ ಹಿರಿಮೆಯನ್ನು ಹೆಚ್ಚಿಸಿದ್ದಾರೆ.

 57 ವಸಂತಗಳನ್ನು ಕಂಡ ಶಾಲೆಯ ಅಗತ್ಯಗಳನ್ನು ಮನಗಂಡ ಸ್ಥಳೀಯ ದಾನಿಗಳು, ಹಳೇ ವಿದ್ಯಾರ್ಥಿಗಳು ಶಾಲೆಯ ಅಭಿವೃದ್ಧಿಗೆ ಕೊಡುಗೆ ನೀಡಿದ್ದಾರೆ. ಡಾ.ವಾಸಪ್ಪ `ರಂಗ ಮಂದಿರ~ದ ಕೊಡುಗೆ ನೀಡಿದ್ದಾರೆ, `ಪ್ರಜಾವಾಣಿ~ ನಿವೃತ್ತ ಸುದ್ದಿ ಸಂಪಾದಕ ಇ.ವಿ. ಸತ್ಯನಾರಾಯಣ ಅವರು ಶಾಲೆಗೆ ನೀರನ್ನು ಒದಗಿಸಿದ್ದಾರೆ.

ವಾಣಿಜ್ಯ ತೆರಿಗೆ ಅಧಿಕಾರಿ ಇರೇಗೋಡು ವಿಜೇಂದ್ರ ಅವರು `ಧ್ವಜಕಟ್ಟೆ~ಯನ್ನು ನಿರ್ಮಿಸಿಕೊಟ್ಟಿದ್ದಾರೆ. ಉದ್ಯಮಿ ಇ.ವಿ. ಲಕ್ಷ್ಮೀನಾರಾಯಣ ಅವರು ರೂ 30 ಸಾವಿರ ಕೊಡುಗೆ ನೀಡಿದ್ದಾರೆ. ಸ್ಥಳೀಯರ ಸಹಕಾರ ಒಂದಲ್ಲಾ ಒಂದು ವಿಧದಲ್ಲಿ ಶಾಲೆಗೆ ಸಿಕ್ಕಿದೆ ಎಂದು ಮುಖ್ಯ ಶಿಕ್ಷಕ ಭೀಮಪ್ಪ ವೆಂಕಣ್ಣ ಅವರ ಹಾಗೂ ಶಿಕ್ಷಕಿ ಟಿ.ವಿ. ಸೌಮ್ಯಾ ಹೇಳುತ್ತಾರೆ.

ಶಾಲೆಗೆ ಸಂಬಂಧಿಸಿದ ಆಸ್ತಿ ಯಾವುದೂ ಇಲ್ಲ. ಕುಚ್ಚಲಿನಲ್ಲಿ 1 ಎಕರೆ ಗದ್ದೆ ಇದೆ ಎನ್ನಲಾಗಿದೆ. ಆದರೆ, ದಾಖಲೆ ಇಲ್ಲ. ಶಾಲೆ ಕಟ್ಟಡಕ್ಕೆ ಹಕ್ಕುಪತ್ರ ಇಲ್ಲ. ಸರ್ಕಾರಿ ಕಟ್ಟಡ ಎನ್ನುವುದನ್ನು ಬಿಟ್ಟರೆ ಉಳಿದ ಯಾವ ಮಾಹಿತಿಗಳೂ ಇಲ್ಲ. ಸುಮಾರು 10ರಿಂದ 20 ಗುಂಟೆ ಜಮೀನನ್ನು ಇರೇಗೋಡು ಲಿಂಗನಾಯ್ಕರು ನೀಡಿದ್ದಾರೆ. ಶಾಲೆಯಲ್ಲಿ ಹಿಂದುಳಿದ ವರ್ಗದ ವಿದ್ಯಾರ್ಥಿಗಳು ಮಾತ್ರ ಕಲಿಯುತ್ತಿದ್ದಾರೆ.

ಕುಡಿಯುವ ನೀರಿಗೆ ವ್ಯವಸ್ಥೆ ಇಲ್ಲದಾಗಿದೆ. ಸಾರ್ವಜನಿಕ ಬಾವಿಯಿಂದ ನೀರನ್ನು ತಂದು ಬಿಸಿಯೂಟ ಹಾಗೂ ಕುಡಿಯಲು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಬಿಸಿಯೂಟದ ಕೋಣೆ, ಶೌಚಾಲಯ ಕಟ್ಟಡ ಸುಸಜ್ಜತವಾಗಿವೆ,

ಶಾಲೆಯ ಕಟ್ಟಡ ದುರಸ್ತಿಗೆ ಸರ್ಕಾರ ಗಮನ ಹರಿಸುವಂತೆ ಮಾಡಲು ಸ್ಥಳೀಯರು ಪ್ರಯತ್ನಿಸಿ ಈಗ ಕೈಚೆಲ್ಲಿ ಕುಳಿತಿದ್ದಾರೆ. ಶಿಥಿಲಗೊಂಡ ಕಟ್ಟಡದ ನಿರ್ಮಾಣಕ್ಕೆ ನೀಲನಕ್ಷೆ ತಯಾರಿಸಿದ ಎಂಜಿನಿಯರ್ ಅವರು ಕಟ್ಟಡ ದುರಸ್ತಿ ಮಾಡುವ ಬದಲು ಹೊಸ ಕಟ್ಟಡ ನಿರ್ಮಿಸುವುದು ಒಳಿತು ಎಂದು ವರದಿ ನೀಡಿ ಅದಕ್ಕಾಗಿ ಸುಮಾರು ರೂ  12 ಲಕ್ಷ ಹಣ ಬೇಕಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.

`ಶಾಲೆಗೆ ಮಕ್ಕಳನ್ನು ಕಳುಹಿಸಲು ಪೋಷಕರು ಹಿಂಜರಿಯುತ್ತಿದ್ದಾರೆ. ಕಟ್ಟಡ ದುರಸ್ತಿ ಮಾಡಿಸಿ ಎಂದು ಒತ್ತಾಯಿಸುತ್ತಿದ್ದಾರೆ. ಜನಪ್ರತಿನಿಧಿಗಳು ಕ್ಷೇತ್ರ ಶಿಕ್ಷಣಾಧಿಕಾರಿ ಗಮನಕ್ಕೆ ತಂದರೂ ಸಮಸ್ಯೆ ಪರಿಹಾರ ಆಗಿಲ್ಲ~ ಎಂದು ಎಸ್‌ಡಿಎಂಸಿ ಅಧ್ಯಕ್ಷ ಇ.ಆರ್. ನಾರಾಯಣ ಹೇಳುತ್ತಾರೆ.

`ತಾಲ್ಲೂಕಿನ ತುಂಬಾ ಸರ್ಕಾರಿ ಶಾಲೆಗಳಿಗೆ ಪೋಷಕರು ಮಕ್ಕಳನ್ನು ಕಳುಹಿಸುತ್ತಿಲ್ಲ ಎಂದು ಮುಚ್ಚುತ್ತಿದ್ದಾರೆ. ನಮ್ಮೂರಿನ ಶಾಲೆಗೆ ಮಕ್ಕಳಿದ್ದಾರೆ. ಕಟ್ಟಡ ಸರಿಇಲ್ಲ. ಜನಪ್ರತಿನಿಧಿಗಳಿಗೆ ಕಣ್ಣು,ಕಿವಿ ಇಲ್ಲದಾಗಿದೆ. ಇಂಥ ಶಾಲೆಗೆ ಮಕ್ಕಳನ್ನು ಕಳುಹಿಸಬೇಕೋ, ಬೇಡವೋ ಎಂಬ ಚಿಂತೆ ಎದುರಾಗಿದೆ. ಸಂಬಂಧಪಟ್ಟವರು ತಕ್ಷಣ ಎಚ್ಚೆತ್ತುಕೊಳ್ಳುವುದು ಒಳ್ಳೆಯದು~ ಎಂದು ಎಸ್‌ಡಿಎಂಸಿ ಸದಸ್ಯ ಇರೇಗೋಡು ಹರಿಯಪ್ಪ ಹೇಳುತ್ತಾರೆ.
       

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.