ADVERTISEMENT

ಕೇಳಿ ಬರದ ಅಪಸ್ವರ: ಸಾಹಿತಿ ನಾ.ಡಿಸೋಜ ಹರ್ಷ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2013, 6:43 IST
Last Updated 7 ಡಿಸೆಂಬರ್ 2013, 6:43 IST

ಸಾಗರ: ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಆಯ್ಕೆ ಪ್ರಕಟವಾದಾಗ ಸಾಮಾನ್ಯವಾಗಿ ಅಪಸ್ವರದ ಧ್ವನಿಗಳು ಕೇಳಿ ಬರುತ್ತವೆ. ಈ ಬಾರಿ ಆ ರೀತಿ ಆಗದೇ ಇರುವುದು ನನಗೆ ಸಮಾಧಾನ ಉಂಟು ಮಾಡಿದೆ ಎಂದು ಮಡಿಕೇರಿಯಲ್ಲಿ ನಡೆಯಲಿರುವ 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಸಾಹಿತಿ ಡಾ.ನಾ.ಡಿಸೋಜ ಹೇಳಿದರು.

ವಕೀಲರ ಸಂಘ ಶುಕ್ರವಾರ ನೀಡಿದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಆಯ್ಕೆ ವಿವಾದಕ್ಕೆ ಆಸ್ಪದ ಮಾಡಿಕೊಡದೆ ಇರುವ ರೀತಿಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯುವುದು ಸೂಕ್ತ ಎಂದರು.

ವಕೀಲರ ಸಂಘದ ಅಧ್ಯಕ್ಷ ಎಚ್‌.ಕೆ. ಅಣ್ಣಪ್ಪ ಮಾತನಾಡಿ, ನಾ.ಡಿಸೋಜ ಅವರನ್ನು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು ಸಾಗರದ ಸಾಂಸ್ಕೃತಿಕ ಹಿರಿಮೆಗೆ ಮತ್ತೊಂದು ಗರಿ ಮೂಡಿಸಿದಂತಾಗಿದೆ. ಡಿಸೋಜ ಅವರಿಗೆ ಭವಿಷ್ಯದಲ್ಲಿ ಜ್ಞಾನಪೀಠ ಪ್ರಶಸ್ತಿ ಬರುವಂತಾಗಲಿ ಎಂದು ಆಶಿಸಿದರು.

ಹಿರಿಯ ವಕೀಲ ಟಿ.ಬಿ.ಮಂಜುನಾಥ್‌ ಶೆಟ್ಟಿ ಮಾತನಾಡಿ ಸರಳತೆ ಹಾಗೂ ಸಜ್ಜನಿಕೆಗೆ ಮತ್ತೊಂದು ಹೆಸರು ಎನ್ನುವಂತಿರುವ ಡಿಸೋಜ ಅವರು ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನ ವಹಿಸಲು ಅತ್ಯಂತ ಸೂಕ್ತ ವ್ಯಕ್ತಿಯಾಗಿದ್ದಾರೆ ಎಂದು ಹೇಳಿದರು.

ವಕೀಲರ ಸಂಘದ ಕಾರ್ಯದರ್ಶಿ ರವೀಶ್‌ಕುಮಾರ್‌, ಖಜಾಂಚಿ ಪ್ರೇಮ್‌ಸಿಂಗ್‌, ಆರೀಫ್‌ ಆಲಿಖಾನ್‌, ಬಿ.ತ್ಯಾಗಮೂರ್ತಿ, ಎಚ್‌.ಆರ್. ಶ್ರೀಧರ್, ವಿನಯಕುಮಾರ್‌, ಉಲ್ಲಾಸ್‌, ಮರಿದಾಸ್‌, ಕೆ.ಎಲ್‌. ಭೋಜರಾಜ್‌, ಮಹಮದ್‌ ಜಿಕ್ರಿಯಾ, ಕೆ.ವಿ.ಪ್ರವೀಣ್‌ಕುಮಾರ್‌, ಗೌತಮ್‌, ಅಬ್ದುಲ್‌ ರಶೀದ್‌, ರಮೇಶ್‌ ಮರ್ತೂರು ಇನ್ನಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.