ADVERTISEMENT

ಕೊಂಕಣ ರೈಲ್ವೆ ಜೋಡಣೆ: ಸ್ಪಷ್ಟ ನಿಲುವಿಗೆ ಆಗ್ರಹ

ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದಿಂದ ಖರ್ಗೆಗೆ ಮನವಿ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2013, 10:09 IST
Last Updated 3 ಆಗಸ್ಟ್ 2013, 10:09 IST

ಶಿವಮೊಗ್ಗ: ತಾಳಗುಪ್ಪದಿಂದ ಕೊಂಕಣ ರೈಲ್ವೆ ಜೋಡಣೆ ನೂರಾರು ವರ್ಷಗಳ ಬೇಡಿಕೆಯಾಗಿದ್ದು, ಈ ಬಗ್ಗೆ ರೈಲ್ವೆ ಇಲಾಖೆಯ ಸ್ಪಷ್ಟ ನಿಲುವನ್ನು ರೈಲ್ವೆ ಸಚಿವರು ಬಹಿರಂಗ ಪಡಿಸಬೇಕು ಎಂದು ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟ, ಕೇಂದ್ರ ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರನ್ನು ಆಗ್ರಹಿಸಿದೆ.

ತಾಳಗುಪ್ಪದಿಂದ ಕೊಂಕಣ ರೈಲ್ವೆ ಜೋಡಣೆ ಆಗಬೇಕು ಎಂದು ಸರ್.ಎಂ.ವಿಶ್ವೇಶರಯ್ಯ ಅಭಿಪ್ರಾಯವಾಗಿತ್ತು. ಈ ಜೋಡಣೆ ಬಗ್ಗೆ ಈ ಹಿಂದಿನ ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ಕೆ.ಎಚ್.ಮುನಿಯಪ್ಪ ಸ್ವಲ್ಪ ಆಶಾಭಾವನೆ ವ್ಯಕ್ತಪಡಿಸಿದ್ದರು. ರಾಜ್ಯ ಸರ್ಕಾರ ಹಣ ನೀಡಿದರೆ ಈ ಮಾರ್ಗದಲ್ಲಿ ಸುರಂಗ ನಿರ್ಮಿಸಿ ಜೋಡಣೆ ಮಾಡಬಹುದು ಎಂದು ತಿಳಿಸಿದ್ದರು. ಕೇಂದ್ರ ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು ಈ ಬಗ್ಗೆ ಸ್ಪಷ್ಟ ಅಭಿಪ್ರಾಯ ವ್ಯಕ್ತಪಡಿಸಬೇಕು ಎಂದು ವೇದಿಕೆ ಒತ್ತಾಯಿಸಿದೆ.

ಶಿವಮೊಗ್ಗ-ಹರಿಹರ ಮಾರ್ಗದ ಬಗ್ಗೆ ಅಧಿಕಾರಿಗಳಿಂದ ಅಸ್ಪಷ್ಟ ಉತ್ತರ ಬರುತ್ತಿದೆ. ಇದಕ್ಕೆ ಹಣ ಕೂಡ ಬಿಡುಗಡೆಯಾಗಿಲ್ಲ. ಈ ರೈಲ್ವೆ ಮಾರ್ಗದ ಬಗ್ಗೆಯೂ ಗೊಂದಲವಿದೆ. ಇದರ ಬಗ್ಗೆಯೂ ಸಚಿವರು ಸ್ಪಷ್ಟನೆ ನೀಡಬೇಕು. ರಾತ್ರಿ ತಾಳಗುಪ್ಪ-ಬೆಂಗಳೂರು ರೈಲು ಯಾವಾಗಲೂ ಕಿಕ್ಕಿರಿದು ಪ್ರಯಾಣಿಕರಿಂದ ತುಂಬಿರುತ್ತದೆ. ಈ ರೈಲಿಗೆ ಕನಿಷ್ಠ ಇನ್ನು 5 ಬೋಗಿ ಜೋಡಿಸುವ ಅಗತ್ಯವಿದೆ.

ಶಿವಮೊಗ್ಗದಿಂದ ಬೆಳಿಗ್ಗೆ ಹೊರಡುವ ಇಂಟರ್‌ಸಿಟಿ ರೈಲು ಒಂದನೇ ಪ್ಲಾಟ್ ಫಾರಂನಿಂದ ಹೊರಡಿಸಬೇಕು. ರೈಲ್ವೆ ನಿಲ್ದಾಣದ ಹತ್ತಿರ ಇರುವ ವಾಹನ ಪಾರ್ಕಿಂಗ್ ಸ್ಥಳಕ್ಕೆ ಯಾವುದೇ ಮೇಲ್ಛಾವಣೆ ವ್ಯವಸ್ಥೆ ಇಲ್ಲ. ಹಾಗಾಗಿ, ವಾಹನ ನಿಲುಗಡೆಗೆ ಸುಸಜ್ಜಿತ ಮೇಲ್ಛಾವಣಿ ಆಗಬೇಕು ಎಂದು ವೇದಿಕೆ ಆಗ್ರಹಿಸಿದೆ.

ಶಿವಮೊಗ್ಗದಲ್ಲಿ ಸವಳಂಗ ರಸ್ತೆಗೆ ಒಂದು ಮೇಲು ಸೇತುವೆ ಅಗತ್ಯವಿದೆ. ಹಾಗೆಯೇ, ಶಿವಮೊಗ್ಗ- ಭದ್ರಾವತಿಯ ನಡುವೆ ಜೇಡಿಕಟ್ಟೆಯಲ್ಲಿ ಒಂದು ಮೇಲು ಸೇತುವೆ ಅಗತ್ಯವಿದೆ. ಶಿವಮೊಗ್ಗ- ಹೊಳೆಹೊನ್ನೂರು ರಸ್ತೆಯಲ್ಲಿ ವಾಹನ ಸಂಚಾರ ದಟ್ಟವಾಗಿದ್ದು ಹಾಗೂ ಈ ಮಾರ್ಗದಲ್ಲಿ ಹಲವಾರು ರೈಲುಗಳು ಸಂಚರಿಸುತ್ತಿದ್ದು ಪ್ರಯಾಣಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗಿದೆ. ಈ ಸ್ಥಳದಲ್ಲಿ ಮೇಲು ಸೇತುವೆ ಅಗತ್ಯವಿದೆ ಎಂದು ವೇದಿಕೆ ಮನವಿ ಮಾಡಿದೆ.

ಶಿವಮೊಗ್ಗದ ಅತ್ಯಂತ ಪ್ರಮುಖ ರಸ್ತೆ 100 ಅಡಿ ರಸ್ತೆ ರೈಲ್ವೆ ಸ್ಟೇಷನ್ ಬಳಿ ಅಪೂರ್ಣಗೊಂಡಿದೆ. ಇದನ್ನು ರೈಲ್ವೆ ಇಲಾಖೆ ಸಹಕಾರದಿಂದ ಪೂರ್ಣಗೊಳಿಸಬೇಕಿದೆ. ಇದಕ್ಕೆ ಸಚಿವರು ಇಲಾಖೆಗೆ ನಿರ್ದೇಶನ ನೀಡಬೇಕು. ಶಿವಮೊಗ್ಗ ಹಳೆ ನಿಲ್ದಾಣದಲ್ಲಿ ಕನಿಷ್ಠ ಸೌಲಭ್ಯಗಳನ್ನು ಕಲ್ಪಿಸಬೇಕು. ಹಾಗೆಯೇ, ಶಿವಮೊಗ್ಗದಿಂದ ಸಂಜೆ ಬಿಟ್ಟು ಬೆಂಗಳೂರು ತಲುಪುವ ಹಾಗೆ, ಬೆಂಗಳೂರಿಂದ ಬೆಳಿಗ್ಗೆ ಬಿಟ್ಟು ಶಿವಮೊಗ್ಗ ತಲುಪುವ ಹಾಗೆ ಇನ್ನೊಂದು ಇಂಟರ್‌ಸಿಟಿ ರೈಲು ಸೌಲಭ್ಯ ಅಗತ್ಯವಿದೆ ಎಂದು ವೇದಿಕೆ ಪ್ರಧಾನ ಕಾರ್ಯದರ್ಶಿ ಕೆ.ವಿ.ವಸಂತಕುಮಾರ್ ಪ್ರಕಟಣೆಯಲ್ಲಿ ರೈಲ್ವೆ ಸಚಿವರನ್ನು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.