ADVERTISEMENT

ಕೊಡಚಾದ್ರಿ ವೈಭವಕ್ಕೆ ಅದ್ದೂರಿ ತೆರೆ

​ಪ್ರಜಾವಾಣಿ ವಾರ್ತೆ
Published 14 ಜನವರಿ 2012, 10:55 IST
Last Updated 14 ಜನವರಿ 2012, 10:55 IST

ಶಿವಮೊಗ್ಗ:  ಸ್ವಸಹಾಯ ಗುಂಪುಗಳ ಆರ್ಥಿಕ ಸಬಲೀಕರಣಕ್ಕಾಗಿ ಸರ್ಕಾರ ಮೈಕ್ರೋ ಫೈನಾನ್ಸ್ ಸಿಸ್ಟಮ್ ಯೋಜನೆಯಡಿ ತಿಂಗಳಿಗೆ ಶೇ. 1ರ ದರದ ಬಡ್ಡಿಯಂತೆ ಸಾಲ ನೀಡುತ್ತಿದ್ದು, ಈ ಸಾಲದ ಸದುಪಯೋಗ ಪಡೆದುಕೊಳ್ಳುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವ ಸಿ.ಸಿ. ಪಾಟೀಲ್ ಸಲಹೆ ಮಾಡಿದರು.

ನಗರದ ಕುವೆಂಪು ರಂಗಮಂದಿರ ಸಮೀಪದ ಎನ್‌ಇಎಸ್ ಕ್ರೀಡಾಂಗಣದಲ್ಲಿ ಕೊಡಚಾದ್ರಿ ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಹಮ್ಮಿಕೊಂಡಿರುವ ಕೊಡಚಾದ್ರಿ ವೈಭವದ ಅಂತಿಮ ದಿನದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಹಕಾರಿ ಕ್ಷೇತ್ರ ಬಡವರ, ಅನಕ್ಷರಸ್ಥರ ಆರ್ಥಿಕ ಸಬಲೀಕರಣಕ್ಕೆ, ಕೃಷಿ, ಹೈನುಗಾರಿಕೆ, ಗೃಹ ಉದ್ಯಮಗಳ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಿಕೊಡುವ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಇದೇ ಮಾದರಿಯಲ್ಲಿ ಕೊಡಚಾದ್ರಿ ವೈಭವ ವ್ಯವಸ್ಥೆ ಮಾಡಿದೆ ಎಂದರು.

ಕಾರ್ಯಕ್ರಮದಲ್ಲಿ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದ ಸಹಕಾರ ಸಚಿವ ಲಕ್ಷ್ಮಣ ಸವದಿ ಮಾತನಾಡಿ, ಸಾರ್ವಜನಿಕರಿಗೆ ಮನರಂಜನೆಯ ಜೊತೆಗೆ ಸ್ವಸಹಾಯ ಗುಂಪುಗಳ ಉತ್ಪನ್ನಗಳಿಗೆ ಮಾರುಕಟ್ಟೆ ಕಲ್ಪಿಸಿಕೊಡುವ ಮೂಲಕ ಮಹಿಳೆಯರು ಆರ್ಥಿಕವಾಗಿ ಸಬಲರಾಗಿ ಸ್ವಾವಲಂಬಿ ಜೀವನ ನಡೆಸಲು ಅನುವು ಮಾಡಿಕೊಟ್ಟಿರುವುದು ಸಂತಸದ ಸಂಗತಿ ಎಂದರು.

ಅತಿಥಿಗಳಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾತನಾಡಿ, ಪ್ರತಿ ತಾಲ್ಲೂಕಿನಲ್ಲಿ ಈ ರೀತಿಯ ವೈಭವ ಹಮ್ಮಿಕೊಳ್ಳಬೇಕು. ಜತೆಗೆ ಈ ಕಾರ್ಯಕ್ರಮ ಶಿವಮೊಗ್ಗ ಜಿಲ್ಲೆಗೆ ಮಾತ್ರ ಸೀಮಿತವಾಗದೇ ಎಲ್ಲಾ ಜಿಲ್ಲೆಗಳಿಗೂ ವಿಸ್ತರಿಸಬೇಕು ಎಂದು ಹೇಳಿದರು.

ಪ್ರಸನ್ನನಾಥ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೊಡಚಾದ್ರಿ ಟ್ರಸ್ಟ್ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ ಸ್ವಾಗತಿಸಿದರು.

ಸಮಾರಂಭದಲ್ಲಿ ಸಂಸತ್ ಸದಸ್ಯ ಬಿ.ವೈ. ರಾಘವೇಂದ್ರ, ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಸಿ. ಮಂಜುಳಾ, ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಗಿರೀಶ್ ಪಟೇಲ್, ಆರ್‌ಎಸ್‌ಎಸ್ ಪ್ರಮುಖ ಪಟ್ಟಾಭಿರಾಂ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಭಾನುಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.
ತದನಂತರ ಕಲಾನಿರ್ದೇಶಕಿ ಕವಿತಾ ಸಾಗರ್ ನಿರ್ದೇಶನದಲ್ಲಿ ಜಾನಪದ ಕಲಾವೈಭವ ಜನರನ್ನು ರಂಜಿಸಿತು.

ಈ ಸಂದರ್ಭದಲ್ಲಿ ಅತ್ಯುತ್ತಮ ಮೂರು ಮಳಿಗೆಗಳಿಗೆ ಬಹುಮಾನ ವಿತರಿಸಲಾಯಿತು. ಮೊದಲನೆಯ ಬಹುಮಾನ ಶಿವಮೊಗ್ಗ ಸೋಮಿನಕೊಪ್ಪದ ಸಿದ್ದೇಶ್ವರ ಸ್ವಸಹಾಯ ಸಂಘ ಪಡೆದರೆ, ದ್ವಿತೀಯ ಸ್ಥಾನ ಶಿವಮೊಗ್ಗ ವಿನೋಬನಗರದ ಸೃಷ್ಟಿ ಸ್ವಸಹಾಯ ಸಂಘ ಪಡೆಯಿತು. ತೃತೀಯ ಸ್ಥಾನ ಚಿಕ್ಕಮಗಳೂರಿನ ವನಿತಾ ಸ್ತ್ರೀಶಕ್ತಿ ಸ್ವಸಹಾಯ ಸಂಘ ಪಡೆಯಿತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.