ADVERTISEMENT

ಕೋಡೂರು-ಅಮ್ಮನಘಟ್ಟ ಜೇನುಕಲ್ಲಮ್ಮ ಜಾತ್ರೆ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2012, 7:20 IST
Last Updated 14 ಅಕ್ಟೋಬರ್ 2012, 7:20 IST

ರಿಪ್ಪನ್‌ಪೇಟೆ: ಸಮೀಪದ ಕೋಡೂರು ಅಮ್ಮನಘಟ್ಟ ಜೇನುಕಲ್ಲಮ್ಮ ಜಾತ್ರೆಯ ಕಡೆದಿನದ ಅಂಗವಾಗಿ ಶುಕ್ರವಾರವೂ ಜಿಲ್ಲೆಯ ವಿವಿಧೆಡೆಗಳಿಂದ ಭಕ್ತ ಸಮೂಹ ಕಿಕ್ಕಿರಿದು ಸೇರಿತ್ತು. ಬೆಳಿಗ್ಗೆಯಿಂದಲೇ ದೇವಿಗೆ ಶಾಸ್ತ್ರೋಕ್ತವಾಗಿ ಪೂಜಾ ವಿಧಿ- ವಿಧಾನಗಳು ಅರ್ಚಕ ಭಾಸ್ಕರ ಜೋಯ್ಸ ಅವರ ನೇತೃತ್ವದಲ್ಲಿ ನಡೆಯಿತು. 

ಭಾದ್ರಪದ ಬಹುಳದಲ್ಲಿ ನಡೆಯುವ ಅಮ್ಮನಘಟ್ಟ ದೇವಿಯ ಜಾತ್ರೆಯು ಅ. 2ರಿಂದ ಪ್ರತಿ ಮಂಗಳವಾರ ಹಾಗೂ ಶುಕ್ರವಾರ ನಡೆದು ಇಂದು ಜಾತ್ರೆಯು ಕೊನೆಗೊಂಡಿತ್ತು.  

ದೇವಿಗೆ ಹರಕೆ ಹೊತ್ತ ಭಕ್ತರು ತಂಡೋಪತಂಡವಾಗಿ ಕುಟುಂಬ ಸಮೇತರಾಗಿ ಬಂದು ಪಶು ಸಂಪತ್ತಿನ ಹೆಚ್ಚಳಕ್ಕಾಗಿ   ಬೆಣ್ಣೆಯನ್ನು ಸಮರ್ಪಿಸಿ, ರೈತಾಪಿ ವರ್ಗದವರು ಬೆಳೆದ ಫಸಲಿನ ಅಡಿಕೆ , ಅಕ್ಕಿ, ಶುಂಠಿ ಸೇರಿದಂತೆ ವಿವಿಧ ಪದಾರ್ಥಗಳನ್ನು ಅರ್ಪಿಸಿ, ಹರಕೆ ಪೂರ್ಣಗೊಳಿಸುವ ಬಗ್ಗೆ ನಗ ನಾಣ್ಯಗಳನ್ನೂ ಸಲ್ಲಿಸಿ ಕೃತಾರ್ಥರಾದರು. ತದ ನಂತರದಲ್ಲಿ ಮನೆಯಿಂದ ತಂದಂತಹ ಬುತ್ತಿಯನ್ನು ದೇವರಿಗೆ ಎಡೆ ಅರ್ಪಿಸಿ ಪ್ರಸಾದ ಸ್ವೀಕರಿಸಿ ಧನ್ಯತಾ ಭಾವದಿಂದ ತೆರಳಿದರು.

ಕಳೆದ ನಾಲ್ಕುವಾರಗಳಿಂದ ಸುಮಾರು ಲಕ್ಷಕ್ಕೂ ಅಧಿಕ ಭಕ್ತರು ದೇವಿಯ ಸನ್ನಿಧಾನಕ್ಕೆ ಆಗಮಿಸಿ ವಾರ್ಷಿಕ ಜಾತ್ರೆಯಲ್ಲಿ ಪಾಲ್ಗೊಂಡಿದ್ದರು.

ಭಕ್ತರ ಹರಕೆ ಕಾಣಿಕೆಗಳಿಂದಲೇ ದೇವಸ್ಥಾನದ ಜೀರ್ಣೋದ್ಧಾರದ ವಿವಿಧ ಅಭಿವೃದ್ಧಿ ಕಾರ್ಯಗಳು ಈ ಪರಿಸರದಲ್ಲಿ ತ್ವರಿತಗತಿಯಲ್ಲಿ ಸಾಗುತ್ತಿವೆ.

ದೇವಸ್ಥಾನ ಸಮಿತಿಯ ಮುಖ್ಯಸ್ಥರಾದ ಮಾಜಿ ಶಾಸಕರಾದ ಬಿ. ಸ್ವಾಮಿರಾವ್, ಡಾ.ಜಿ.ಡಿ. ನಾರಾಯಣಪ್ಪ, ಮುಖಂಡರಾದ ಕೋಡೂರು ವಿಜೇಂದ್ರರಾವ್, ಬಿ.ಪಿ. ರಾಮಚಂದ್ರ, ಬಿ.ಎಸ್. ಪುರುಷೋತ್ತಮ್, ತಿಮ್ಮಪ್ಪ, ಗಡ್ಲೆಗೌಡರು, ಏರಿಗೆ ಉಮೇಶ ಹಾಜರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.