ADVERTISEMENT

ಕ್ಯಾರಿಒವರ್ ಪದ್ಧತಿ ವಿರೋಧಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 20 ಜುಲೈ 2013, 10:37 IST
Last Updated 20 ಜುಲೈ 2013, 10:37 IST

ಸಾಗರ: ಕ್ಯಾರಿಒವರ್ ಪದ್ಧತಿಗೆ ತಿದ್ದುಪಡಿ ತಂದಿರುವ ಕ್ರಮವನ್ನು ವಿರೋಧಿಸಿ ಶುಕ್ರವಾರ ಇಲ್ಲಿನ  ಸಂಜಯ್ ಮೆಮೋರಿಯಲ್ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿಗಳು  ಪ್ರತಿಭಟನೆ ನಡೆಸಿದರು.

ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದ ವಿದ್ಯಾರ್ಥಿಗಳು ಉಪವಿಭಾಗಾಧಿಕಾರಿಗಳ ಕಚೇರಿಯ ಆವರಣದಲ್ಲಿ ಬಹಿರಂಗ ಸಭೆ ನಡೆಸಿದರು.

ಸಭೆಯಲ್ಲಿ ಕಾಲೇಜಿನ ವಿದ್ಯಾರ್ಥಿ ವೇದಿಕೆ ಮುಖಂಡ ಅನಿಲ್ ಮುದ್ದನ್ ಮಾತನಾಡಿ, ಕ್ಯಾರಿಒವರ್ ಪದ್ಧತಿ ಪ್ರಕಾರ ಈ ಹಿಂದೆ ಅಂತಿಮ ಸೆಮಿಸ್ಟರ್ ಪರೀಕ್ಷೆ ಬರೆಯುವ ಮುನ್ನ ಹಿಂದಿನ ಸೆಮಿಸ್ಟರ್‌ಗಳ 12 ವಿಷಯಗಳನ್ನು ಬಾಕಿ ಉಳಿಸಿಕೊಂಡಿದ್ದರೂ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುತ್ತಿತ್ತು. ನಂತರ ಅದನ್ನು 10ಕ್ಕೆ ಇಳಿಸಲಾಯಿತು. ಈಗ 4ಕ್ಕೆ ಇಳಿಸಿರುವುದು ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕವಾಗಿದೆ ಎಂದು ಹೇಳಿದರು.

ಕ್ಯಾರಿಒವರ್ ಪದ್ಧತಿಯಲ್ಲಿ ತಿದ್ದುಪಡಿ ತಂದಿರುವ ಪರಿಣಾಮ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಕಾಲೇಜಿನ 70 ವಿದ್ಯಾರ್ಥಿಗಳ ಪೈಕಿ 15 ರಿಂದ 20 ವಿದ್ಯಾರ್ಥಿಗಳಿಗೆ ಮಾತ್ರ ಪರೀಕ್ಷೆ ಬರೆಯಲು ಅವಕಾಶ ದೊರಕುತ್ತದೆ. ಇದರಿಂದ ಹಲವು ವಿದ್ಯಾರ್ಥಿಗಳು ಹಿಂದಿನ ವರ್ಷದ ವಿಷಯಗಳ ಜೊತೆಗೆ ಒಂದೇ ವರ್ಷದಲ್ಲಿ ಅಂತಿಮ ಸೆಮಿಸ್ಟರ್‌ನ ಎಲ್ಲಾ ವಿಷಯಗಳಲ್ಲೂ ಉತ್ತೀರ್ಣರಾಗಿ ಉದ್ಯೋಗ ಪಡೆಯಲು ಅವಕಾಶವಿಲ್ಲದಂತಾಗಿದೆ ಎಂದರು.
ವಿದ್ಯಾರ್ಥಿ ವೇದಿಕೆ ಮುಖಂಡರಾದ ಡಿ.ಎಲ್.ಮೋಹಿತ್, ರೂಪಿತಾ, ಶರತ್,ಪ್ರವೀಣ್, ಮಹೇಶ್, ಲಿಖಿತಾ ಇನ್ನಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.