ADVERTISEMENT

ಕ್ರೀಡಾ ಸಾಧನೆಗೆ ಪರಿಶ್ರಮ ಅಗತ್ಯ: ಮಮತಾ

​ಪ್ರಜಾವಾಣಿ ವಾರ್ತೆ
Published 4 ಜನವರಿ 2011, 9:30 IST
Last Updated 4 ಜನವರಿ 2011, 9:30 IST

ಸಾಗರ: ಯುವಜನರು ಓದಿನ  ಜತೆಗೆ ಕ್ರೀಡೆ, ಕಲೆ, ಸಾಹಿತ್ಯದಂತಹ ಕ್ಷೇತ್ರಗಳಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಕಳೆದ ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಪಡೆದ ಭಾರತ ಕಬಡ್ಡಿ ತಂಡದ ಸದಸ್ಯೆ ಮಮತಾ ಪೂಜಾರಿ ಹೇಳಿದರು. ಸಮೀಪದ ಸಿರಿವಂತೆ ಗ್ರಾಮದಲ್ಲಿ ಚಿತ್ರಸಿರಿ ಸಂಸ್ಥೆ ಸೋಮವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಕ್ರೀಡೆಯಲ್ಲಿ ಯಶಸ್ಸು ಸಾಧಿಸಲು ಅವಿರತ ಪರಿಶ್ರಮ ಮತ್ತು ಪ್ರಯತ್ನ ಅಗತ್ಯವಿದೆ. ಗ್ರಾಮೀಣ ಪ್ರದೇಶದಲ್ಲಿ ಅನೇಕ ಕ್ರೀಡಾ ಪ್ರತಿಭೆಗಳನ್ನು ಗುರುತಿಸದ ಕಾರಣಕ್ಕೆ ಅವರು ಮೂಲೆಗುಂಪಾಗುತ್ತಿದ್ದಾರೆ. ಹೀಗಾಗಿ, ಭಾರತ ಕ್ರೀಡಾ ಕ್ಷೇತ್ರದಲ್ಲಿ ನಿರೀಕ್ಷಿತ ಸಾಧನೆ ಮಾಡಲಾಗುತ್ತಿಲ್ಲ ಎಂದರು.

ಕಾಮನ್‌ವೆಲ್ತ್ ಗೇಮ್ಸ್‌ನ ಜಾವಲಿನ್ ಥ್ರೋ ವಿಭಾಗದ ಕಂಚಿನ ಪದಕ ವಿಜೇತ ಕ್ರೀಡಾಪಟು ಕಾಶಿನಾಥ ನಾಯ್ಕ ಶಿರಸಿ ಮಾತನಾಡಿ, ಸಾಧನೆಗೆ ಮುಂದಾದಾಗ ಅಡೆತಡೆಗಳು ಬರುವುದು ಸಹಜ. ಅದನ್ನು ಮೀರಿ ನಿಂತಾಗ ಮಾತ್ರ ಯಶಸ್ಸು ದೊರಕುತ್ತದೆ. ಭಾರತದಲ್ಲಿ ಕ್ರಿಕೆಟ್‌ಗೆ ದೊರಕುತ್ತಿರುವ ಪ್ರೋತ್ಸಾಹ ಇತರ ಕ್ರೀಡೆಗಳಿಗೆ ದೊರಕುತ್ತಿಲ್ಲ. ಈ ಬಗ್ಗೆ ಆತ್ಮಾವಲೋಕನದ ಅಗತ್ಯವಿದೆ ಎಂದು ಹೇಳಿದರು.

ಸನ್ಮಾನ ಸ್ವೀಕರಿಸಿದ ಸಸ್ಯ ಶಾಸ್ತ್ರಜ್ಞ ಎಂ.ಬಿ. ನಾಯ್ಕ ಕಡಕೇರಿ ಮಾತನಾಡಿ, ಸಸ್ಯಗಳನ್ನು ತಪ್ಪಾಗಿ ಗುರುತಿಸುವುದರಿಂದ ಅನೇಕ ಅನಾಹುತಗಳು ಸಂಭವಿಸುತ್ತವೆ. ಈ ಬಗ್ಗೆ ಎಚ್ಚರ ವಹಿಸಬೇಕಿದೆ. ಮೂಲ ತಳಿಗಳ ಸಂರಕ್ಷಣೆಗೆ ಒತ್ತು ನೀಡಬೇಕಿದೆ ಎಂದರು.

ನಿವೃತ್ತ ಪೊಲೀಸ್ ಅಧಿಕಾರಿ ಬಿ.ಕೆ. ಶಿವರಾಂ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸನ್ಮಾನಿತರಾದ ಕಾಮನ್‌ವೆಲ್ತ್ ಕ್ರೀಡಾಕೂಟದ ಭಾರ ಎತ್ತುವ ಸ್ಪರ್ಧೆಯಲ್ಲಿ ಕಂಚಿನ ಪದಕ ಪಡೆದಿರುವ ಸುಧೀರ್ ಭದ್ರಾವತಿ, ಉದಯೋನ್ಮುಖ ಚೆಸ್ ಆಟಗಾರ್ತಿ ರೂಪಿತಾ ಆಲಳ್ಳಿ, ಅರಳು ಪ್ರತಿಭೆ ಪ್ರಶಸ್ತಿ ಪುರಸ್ಕೃತ ಬಾಲಕವಿ ರೋಹನ್ ಸರ್ಫ್ರಾಜ್ ಮಾತನಾಡಿದರು.ಅಮಿತಾ ವಿಷ್ಣು ನಾಯ್ಕಾ ಪ್ರಾರ್ಥಿಸಿದರು. ಸಿರಿವಂತೆ ಚಂದ್ರಶೇಖರ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು.

ಡಾ.ಮೋಹನ್ ಚಂದ್ರಗುತ್ತಿ ಹಾಗೂ ಪಾವನಾ ಶ್ರೀಧರ್ ಸನ್ಮಾನಿತರನ್ನು ಪರಿಚಯಿಸಿದರು. ಮೈಸೂರಿನ ವಿವೇಕಾನಂದ ಯೂತ್‌ಮೂಮೆಂಟ್ ಸಂಸ್ಥೆಯ ಪೋಷಿಣಿ ಅಭಿನಂದನಾ ಭಾಷಣ ಮಾಡಿದರು. ಪರಮೇಶ್ವರ ದೂಗೂರು ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.