ADVERTISEMENT

ಖಾತ್ರಿ ಫಲಾನುಭವಿ ಪಟ್ಟಿಯಲ್ಲಿ ಮೃತ ವ್ಯಕ್ತಿ !

​ಪ್ರಜಾವಾಣಿ ವಾರ್ತೆ
Published 14 ಜೂನ್ 2011, 10:10 IST
Last Updated 14 ಜೂನ್ 2011, 10:10 IST

ಸಾಗರ: ಮರಣ ಹೊಂದಿರುವ ವ್ಯಕ್ತಿ ಉದ್ಯೋಗ ಖಾತ್ರಿ ಯೋಜನೆ ಅಡಿ ಕೆಲಸ ಮಾಡಿದ್ದಾನೆ ಎಂದು ದಾಖಲೆಗಳಲ್ಲಿ ತೋರಿಸಿ ಕೂಲಿ ಹಣವನ್ನು ಮೃತ ವ್ಯಕ್ತಿಯ ತಂದೆಯ ಖಾತೆಗೆ ಜಮಾ ಮಾಡಿರುವ ವಿಲಕ್ಷಣ ಘಟನೆ ತಾಲ್ಲೂಕಿನ ಕೋಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ನಡೆದಿರುವುದನ್ನು ಆವಿನಹಳ್ಳಿಯ ಜೈಕರ್ನಾಟಕ ಜನಪರ ಹೋರಾಟ ವೇದಿಕೆ ಪತ್ತೆ ಹಚ್ಚಿದೆ.

ವೇದಿಕೆ ಸಂಗ್ರಹಿಸಿರುವ ದಾಖಲೆಗಳ ಪ್ರಕಾರ ಕೋಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕಬ್ಬನಾಡಕೊಪ್ಪದ ಪ್ರಭಾಕರ ಬಿನ್ ಮಂಜಪ್ಪ ಎಂಬುವವರು 2008ರ ಏಪ್ರಿಲ್ 25ರಂದು ಮೃತಪಟ್ಟಿದ್ದಾರೆ. ಆದರೆ, ಇದೇ ಪಂಚಾಯ್ತಿಯ ಉದ್ಯೋಗ ಖಾತ್ರಿ ಯೋಜನೆ ಅಡಿ ಕಾರ್ಯ ನಿರ್ವಹಿಸಿದ ಹಾಜರಾತಿ ಪಟ್ಟಿಯಲ್ಲಿ ದಿನಾಂಕ 2010ರ ಜುಲೈ 31 ಹಾಗೂ 2010ರ ಆಗಸ್ಟ್ 1ರಂದು ಇದೇ ಪ್ರಭಾಕರ್ ಅವರು ಕೆಲಸ ಮಾಡಿದ್ದಾರೆ ಎಂದು ನಮೂದು ಇದೆ. ಒಬ್ಬ ವ್ಯಕ್ತಿ ಮೃತಪಟ್ಟು ಎರಡು ವರ್ಷಗಳ ನಂತರ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸ ಮಾಡಲು ಹೇಗೆ ಸಾಧ್ಯ ಎಂಬುದು ವೇದಿಕೆ ಕಾರ್ಯಕರ್ತರ ಪ್ರಶ್ನೆಯಾಗಿದೆ.

ಹೀಗೆ ಮೃತ ವ್ಯಕ್ತಿ ಪ್ರಭಾಕರ್ ಅವರು ಕೆಲಸ ಮಾಡಿದ್ದಾರೆ ಎಂದು ನಮೂದಿಸಿ ಅದಕ್ಕೆ ಸಂಬಂಧಪಟ್ಟ ಕೂಲಿಯನ್ನು ಅವರ ತಂದೆಯ ಖಾತೆಗೆ ಜಮಾ ಮಾಡಲಾಗಿದೆ. ಇಂತಹ ಲೋಪ ಎಸಗಿರುವ ಪಂಚಾಯ್ತಿ ಕಾರ್ಯದರ್ಶಿ ಹಾಗೂ ಅಧ್ಯಕ್ಷರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ವೇದಿಕೆಯ ಅಧ್ಯಕ್ಷ ನವೀನ್ ಹಾಗೂ ಕಾರ್ಯದರ್ಶಿ ದೇವರಾಜ್ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.