ADVERTISEMENT

ಗುಣಮಟ್ಟದಲ್ಲಿ ರಾಜಿ ಇಲ್ಲ: ಸಚಿವ

ಸಿಂಥೆಟಿಕ್ ಟ್ರ್ಯಾಕ್ ಕಾಮಗಾರಿ ವೀಕ್ಷಣೆ, ಕ್ರೀಡಾಂಗಣಕ್ಕೊಬ್ಬ ಕೋಚ್ ನೇಮಕ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2012, 6:30 IST
Last Updated 24 ಡಿಸೆಂಬರ್ 2012, 6:30 IST

ಶಿವಮೊಗ್ಗ: ಕ್ರೀಡಾಂಗಣಗಳ ಕಾಮಗಾರಿ ಗುಣಮಟ್ಟದಲ್ಲಿ ಯಾವುದೇ ರಾಜಿ ಇಲ್ಲ ಎಂದು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಚಿವ ಎಂ.ಪಿ. ಅಪ್ಪಚ್ಚು ರಂಜನ್ ಕ್ರೀಡಾಂಗಣಗಳ ನಿರ್ಮಾಣ ಸಂಸ್ಥೆ ಹಾಗೂ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ನೆಹರೂ ಕ್ರೀಡಾಂಗಣದಲ್ಲಿ ಭಾನುವಾರ ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣ ಕಾಮಗಾರಿ ವೀಕ್ಷಿಸಿದ ಅವರು, ಸಿಂಥೆಟಿಕ್ ಟ್ರ್ಯಾಕ್‌ನಲ್ಲಿ ಯಾವುದೇ ಕಾರಣಕ್ಕೂ ನೀರು ನಿಲ್ಲಬಾರದು. ಆ ರೀತಿಯಲ್ಲಿ ಗುಣಮಟ್ಟದ ಕಾಮಗಾರಿ ಮಾಡದಿದ್ದರೆ ಗುತ್ತಿಗೆದಾರ ಸಂಸ್ಥೆಯನ್ನು ಕಪ್ಪುಪಟ್ಟಿಗೆ ಸೇರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ನೆಹರೂ ಕ್ರೀಡಾಂಗಣದ ಕಾಮಗಾರಿಯಲ್ಲಿ ಪ್ರಸ್ತುತ ಪ್ರಸ್ತಾವದಂತೆ ಗುಣಮಟ್ಟ ಕಾಯ್ದುಕೊಳ್ಳಬೇಕು. ಅಂತೆಯೇ ಜಿಲ್ಲೆಯಲ್ಲಿ ನಿರ್ಮಾಣವಾಗುತ್ತಿರುವ ಎಲ್ಲ ಕ್ರೀಡಾಂಗಣಗಳ ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಬೇಕು. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಗಮನ ಹರಿಸಬೇಕು ಎಂದು ಸೂಚಿಸಿದರು.

ತದನಂತರ ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ರೀಡಾಪಟುಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ರಾಜ್ಯದಲ್ಲಿ ಸುಸಜ್ಜಿತ ಮತ್ತು ಹೈಟೆಕ್ ಕ್ರೀಡಾಂಗಣಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ರಾಜ್ಯದಲ್ಲಿ 25 ಜಿಲ್ಲಾಮಟ್ಟದ ಕ್ರೀಡಾಂಣಗಳಿದ್ದು ಎಲ್ಲವನ್ನು ಸುಸಜ್ಜಿತಗೊಳಿಸಲಾಗುತ್ತಿದೆ. ಅಲ್ಲದೇ ತಾಲ್ಲೂಕು ಮಟ್ಟದ ಕ್ರೀಡಾಂಗಣಗಳ ನಿರ್ಮಾಣ ಕಾಮಗಾರಿಗಳು ನಡೆದಿವೆ ಎಂದರು.

ಉನ್ನತೀಕರಣಗೊಳ್ಳುತ್ತಿರುವ ಕೆಲವು ಜಿಲ್ಲೆಗಳಲ್ಲಿನ ಸಿಂಥೆಟಿಕ್ ಟ್ರ್ಯಾಕ್‌ನಲ್ಲಿ ನೀರು ನಿಲ್ಲುತ್ತಿರುವುದನ್ನು ಗಮನಿಸಲಾಗಿದೆ. ಇದರಿಂದ ಟ್ರ್ಯಾಕ್ ಹಾಳಾಗುವ ಸಾಧ್ಯತೆ ಇರುವುದರಿಂದ ಟ್ರ್ಯಾಕ್‌ನಲ್ಲಿ ನೀರು ನಿಲ್ಲದಂತೆ ಕಾಮಗಾರಿ ನಿರ್ಮಿಸಲು ಸೂಚಿಸಲಾಗಿದೆ ಎಂದರು.
ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಗೆ ಸಂಬಂಧಿಸಿದಂತೆ ಪರಿಷ್ಕೃತ ವೃಂದ ಮತ್ತು ನೇಮಕಾತಿ ಸೇವಾ ನಿಯಮಾವಳಿ ಅನ್ವಯ ಸಿಬ್ಬಂದಿ ನೇಮಿಸಿಕೊಳ್ಳಲಾಗುವುದು. ಇದರಿಂದ ಇಲಾಖೆಯ ವಿವಿಧ ಕ್ರೀಡಾಂಗಣಗಳಲ್ಲಿನ ಕೊರತೆ ನೀಗಿಸಬಹುದಾಗಿದೆ ಎಂದರು.

ಪ್ರತಿ ಕ್ರೀಡಾಂಗಣಕ್ಕೂ ಒಬ್ಬ ಕೋಚ್ ನೇಮಿಸಬೇಕು ಎಂಬುದು ಸರ್ಕಾರದ ಉದ್ದೇಶವಿದೆ. ಸಿಬ್ಬಂದಿ ನೇಮಕಾತಿ ನಂತರ ಸುಧಾರಣೆಯಾಗಲಿದೆ ಎಂದರು.

ಶಿವಮೊಗ್ಗದಲ್ಲಿ ಭಾರತೀಯ ಕ್ರೀಡಾ ಪ್ರಾಧಿಕಾರ ಸ್ಥಾಪಿಸುವ ಸಂಬಂಧ ಸರ್ಕಾರ ಉತ್ಸುಕತೆ ತೋರಿದೆ. ಸಂಬಂಧಿಸಿದಂತೆ ಕ್ರೀಡಾಂಗಣಗಳನ್ನು ಹೈಟೆಕ್ ಮಾಡಲಾಗುತ್ತಿದೆ. ಆದರೆ ಕೇಂದ್ರ ಸರ್ಕಾರದಿಂದಲೇ ಸರಿಯಾದ ಸ್ಪಂದನ ಸಿಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಗಿರೀಶ್ ಪಟೇಲ್, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಜಂಟಿ ನಿರ್ದೇಶಕ ಎಂ.ಆರ್. ಮೋಹಿತ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.