ADVERTISEMENT

ಗೊಂದಲಗಳಿಗೆ ಕಿವಿಗೊಡಬೇಡಿ: ಶೆಟ್ಟರ್ ಕರೆ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2012, 8:20 IST
Last Updated 3 ಡಿಸೆಂಬರ್ 2012, 8:20 IST

ಶಿವಮೊಗ್ಗ: ಯಾವುದೇ ಗೊಂದಲಗಳಿಗೆ ಕಿವಿಗೊಡಬೇಡಿ; ಚಿಂತಿತರಾಗಬೇಡಿ ಎಂದು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಕಾರ್ಯಕರ್ತರಿಗೆ ತಿಳಿಸಿದರು.
ನಗರದ ವಾಸವಿ ವಿದ್ಯಾಲಯದಲ್ಲಿ ಭಾನುವಾರ ಬಿಜೆಪಿ ನಗರ ಮತ್ತು ಗ್ರಾಮಾಂತರ ಘಟಕ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಸರ್ಕಾರ ಅವಧಿ ಪೂರ್ಣಗೊಳಿಸಲಿದೆ. ಬಿಜೆಪಿಯ ಶಾಸಕರು, ಮಂತ್ರಿಗಳು ಬಿಜೆಪಿಯಲ್ಲಿಯೇ ಇದ್ದಾರೆ. ಈ ಕುರಿತು ಕಾರ್ಯಕರ್ತರು ಗೊಂದಲಗೊಳ್ಳುವುದು ಬೇಡ. ಬಿಜೆಪಿ ಪುನಃ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಒಬ್ಬ ಸಾಮಾನ್ಯ ಕಾರ್ಯಕರ್ತನಿಗೂ ಉತ್ತಮ ಸ್ಥಾನಮಾನ ನೀಡಿರುವ ಪಕ್ಷ ಬಿಜೆಪಿ ಮಾತ್ರ. ಸಾಮಾನ್ಯ ಕಾರ್ಯಕರ್ತ, ರಾಜ್ಯ, ರಾಷ್ಟ್ರಮಟ್ಟದ ನಾಯಕರಾಗಿರುವ ಉದಾಹರಣೆಗಳು ಬಿಜೆಪಿಯಲ್ಲಿವೆ ಎಂದು ಸೂಚ್ಯವಾಗಿ ಹೇಳಿದರು.

ಕಾಂಗ್ರೆಸ್ ನೆಹರೂ ಕುಟುಂಬದ ಆಸ್ತಿಯಾಗಿದ್ದು, ಆ ಕುಟುಂಬದ ನಿರ್ದೇಶನದಂತೆ ಕಾರ್ಯ ನಿರ್ವಹಿಸುತ್ತಿದೆ. ಅವರ ನಿರ್ದೇಶನಗಳಿಲ್ಲದಿದ್ದರೆ ಕಾಂಗ್ರೆಸ್ ನಿಷ್ಕ್ರಿಯಗೊಳ್ಳುತ್ತದೆ. ಯಾವುದೇ ಪ್ರಾದೇಶಿಕ ಪಕ್ಷಗಳು ಸಹ ಒಂದು ಕುಟುಂಬಕ್ಕೆ  ಸೀಮಿತವಾಗಿವೆ. ನಿಜವಾದ ರಾಷ್ಟ್ರೀಯ ಪಕ್ಷ ಬಿಜೆಪಿ ಮಾತ್ರ ಎಂದರು.

ಬಿಜೆಪಿ ಮೇಲೆ ಪ್ರಭಾವ ಇಲ್ಲ
ಅಭಿನಂದನೆ ಸಲ್ಲಿಸಿ ಮಾತನಾಡಿದ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಕೆ. ಸಿದ್ದರಾಮಣ್ಣ, ಡಿಸೆಂಬರ್ ತಿಂಗಳು ರಾಜ್ಯದ ರಾಜಕೀಯದಲ್ಲಿ ಮಹತ್ವ ಪಡೆದುಕೊಂಡಿದೆ. ಇಂತಹ ಗೊಂದಲಗಳು ರಾಜ್ಯದಲ್ಲಿ ಅನೇಕ ಬಾರಿ ಬಂದು ಹೋಗಿವೆ. ಆದರೆ, ಪಕ್ಷ ನಂಬಿರುವಂತಹ ರಾಜಕೀಯ ವಿಚಾರಗಳು, ತತ್ವಗಳು ದೃಢವಾಗಿರುವುದರಿಂದ `ಡಿಸೆಂಬರ್ ಪ್ರಭಾವ' ಬಿಜೆಪಿ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ನೂತನವಾಗಿ ನೇಮಕಗೊಂಡ ಬಿಜೆಪಿ ಜಿಲ್ಲಾಮಟ್ಟದ ವಿವಿಧ ಘಟಕಗಳ ಪದಾಧಿಕಾರಿಗಳಿಗೆ ಅಧಿಕೃತವಾಗಿ ಅಧಿಕಾರ ನೀಡಲಾಯಿತು.
ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಸಮಾರಂಭದಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಹಾಗೂ ಸಂಸತ್ ಸದಸ್ಯ ಅನಂತಕುಮಾರ್, ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಂ.ಬಿ. ಭಾನುಪ್ರಕಾಶ್, ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್, ಆಹಾರ  ಮತ್ತು ನಾಗರಿಕ ಸರಬರಾಜು ಸಚಿವ ಡಿ.ಎನ್. ಜೀವರಾಜ್, ಶಾಸಕರಾದ ಬೇಳೂರು ಗೋಪಾಲಕೃಷ್ಣ, ಕೆ.ಜಿ. ಕುಮಾರಸ್ವಾಮಿ, ಎಂಪಿಎಂ ಅಧ್ಯಕ್ಷ ಆರಗ ಜ್ಞಾನೇಂದ್ರ, ಮಲೆನಾಡು ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪದ್ಮನಾಭ ಭಟ್, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಗೀತಾ ಮಲ್ಲಿಕಾರ್ಜುನ್, ಉಪಾಧ್ಯಕ್ಷೆ ಹೇಮಾಪಾವನಿ ಶ್ರೀನಿವಾಸ್, ನಗರಸಭಾಧ್ಯಕ್ಷ ಎಸ್.ಎನ್. ಚನ್ನಬಸಪ್ಪ, ಪದಾಧಿಕಾರಿಗಳಾದ ನಟರಾಜ್, ಗಂಗಾಧರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.