ADVERTISEMENT

ಗ್ರಂಥಾಲಯ ಜಾಗಕ್ಕೆ ಉದ್ಯಮಿಗಳ ಕಣ್ಣು

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2011, 6:50 IST
Last Updated 23 ಸೆಪ್ಟೆಂಬರ್ 2011, 6:50 IST

ಶಿವಮೊಗ್ಗ: ಗ್ರಂಥಾಲಯ ಇಲಾಖೆಯ ಜಾಗಕ್ಕೆ ಪ್ರತಿಷ್ಠಿತ ಉದ್ಯಮಿಗಳ ಕಣ್ಣುಬಿದ್ದಿದೆ. ನಗರದ ಹೃದಯಭಾಗದ ಜಾಗ ಕಬಳಿಸಲು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಹೊಂಚು ಹಾಕಿದೆ. ಜಿಲ್ಲಾ ಕೇಂದ್ರ ಗ್ರಂಥಾಲಯಕ್ಕೆ ತನ್ನ ಜಾಗದಲ್ಲಿ ಕಟ್ಟಡ ಕಟ್ಟುವುದಕ್ಕೂ ಸಂಘ ಅಡ್ಡಗಾಲು ಹಾಕಿದೆ.

ನಗರದ ಡಿವಿಎಸ್ ವೃತ್ತದಿಂದ ನಗರಸಭೆಗೆ ಹೋಗುವ ಮಾರ್ಗದಲ್ಲಿ ನಗರ ಕೇಂದ್ರ ಗ್ರಂಥಾಲಯ, ಜಿಲ್ಲಾ ಕೇಂದ್ರ ಗ್ರಂಥಾಲಯ, ಸಿಟಿ ಕ್ಲಬ್, ರೋವರ್ಸ್‌ ಕ್ಲಬ್‌ಗಳಿವೆ. ಇವುಗಳಿಗೆ ಹೊಂದಿಕೊಂಡಂತೆ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಕಚೇರಿ ಕಟ್ಟಡವೂ ಇದೆ.  ಒಂದು ವರ್ಷದ ಹಿಂದೆ ನವೀಕರಣಗೊಂಡ ವಾಣಿಜ್ಯ ಮತ್ತು ಕೈಗಾರಿಕಾ ಸಂಘಕ್ಕೆ ಈಗ ಪಕ್ಕದ ಜಿಲ್ಲಾ ಕೇಂದ್ರ ಗ್ರಂಥಾಲಯದ ಜಾಗವನ್ನು ತನ್ನದಾಗಿಸಿಕೊಳ್ಳುವ ಆಸೆ ಹುಟ್ಟಿದೆ.

ಉತ್ತರ 175 ಅಡಿ, ದಕ್ಷಿಣ 36 ಅಡಿ, ಪಶ್ಚಿಮ 23, ಪೂರ್ವ 25 ಅಡಿ ವಿಸ್ತೀರ್ಣದ ಜಾಗದಲ್ಲಿ  ಜಿಲ್ಲಾ ಕೇಂದ್ರ ಮತ್ತು ನಗರ ಕೇಂದ್ರ ಗ್ರಂಥಾಲಯ 1948ರಲ್ಲಿ ನಿರ್ಮಾಣವಾಗಿದೆ. ಇದರಲ್ಲಿ 35 ಅಡಿ ಉದ್ದ ಹಾಗೂ 7 ಅಡಿ ಅಗಲ ವಿಸ್ತೀರ್ಣದ ಜಾಗವನ್ನು ಬಿಟ್ಟುಕೊಡುವಂತೆ ಗ್ರಂಥಾಲಯ ಇಲಾಖೆಗೆ ಸಂಘದ ಪದಾಧಿಕಾರಿಗಳು ಗಂಟುಬಿದ್ದಿದ್ದಾರೆ. 

ಸಾಲದ್ದಕ್ಕೆ ಗ್ರಂಥಾಲಯದ ಕಟ್ಟಡ ನಿರ್ಮಾಣಕ್ಕೂ ಇದೇ ಪದಾಧಿಕಾರಿಗಳು ತಕರಾರು ತೆಗೆಯುತ್ತಿದ್ದಾರೆ. ಹಾಗಾಗಿ, ಜಿಲ್ಲಾ ಗ್ರಂಥಾಲಯ ಕಟ್ಟಡ ನಿರ್ಮಾಣಕ್ಕೆಂದೇ ಸರ್ಕಾರ ಮೂರು ಹಂತಗಳಲ್ಲಿ 2008ರಿಂದ ಬಿಡುಗಡೆ ಮಾಡಿದ್ಙ 27.5 ಲಕ್ಷ ಲೋಕೋಪಯೋಗಿ ಇಲಾಖೆಯಲ್ಲಿ ಅನಾಥವಾಗಿ ಬಿದ್ದಿದೆ.

ಮಹಾಲೇಖಪಾಲಕರು ಶಿಕ್ಷಣ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ಈಚೆಗೆ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಬಿಡುಗಡೆಯದ ಹಣದ ಬಳಕೆ ಪ್ರಮಾಣಪತ್ರ ಮತ್ತು ಭೌತಿಕ ಪ್ರಗತಿ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಈ ಕುರಿತು ವರದಿ ಸಲ್ಲಿಸುವಂತೆಯೂ ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿರ್ದೇಶಕ ಕೆ.ಜಿ. ವೆಂಕಟೇಶ್ ಅವರಿಗೆ ಸೂಚಿಸಿದ್ದಾರೆ.

ಇತ್ತೀಚೆಗೆ ಜಿಲ್ಲಾ ಕೇಂದ್ರ ಗ್ರಂಥಾಲಯ ಉಪನಿರ್ದೇಶಕ ಎಂ.ಎಂ. ಬಡ್ನಿ ಅವರ ಸತತ ಸೂಚನೆ ಮೇರೆಗೆ ಲೋಕೋಪಯೋಗಿ ಇಲಾಖೆ ಕಟ್ಟಡ ಕಾಮಗಾರಿ ಆರಂಭಕ್ಕೆ ಜಾಗ ಸ್ವಚ್ಛಗೊಳಿಸುತ್ತಿದ್ದಂತೆ ಈ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿ ವಿ. ಪೊನ್ನುರಾಜ್ ಅವರನ್ನು ಭೇಟಿ ಮಾಡಿ, ಇದಕ್ಕೆ ತಡೆವೊಡ್ಡುವಂತೆ ಒತ್ತಡ ಹೇರಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಜಿಲ್ಲಾ ಗ್ರಂಥಾಲಯ ಪ್ರಾಧಿಕಾರದ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಈಗಿರುವ ಕಟ್ಟಡದ ಮೇಲೆಯೇ ಹೊಸ ಕಟ್ಟಡ ಕಟ್ಟಲು ಸಾಧ್ಯವೇ ಎಂದು ಪರಿಶೀಲಿಸುವಂತೆ ಲೋಕೋಪಯೋಗಿ ಎಂಜಿನಿಯರ್‌ಗೆ ಸೂಚಿಸಿದ್ದಾರೆ!

ಆದರೆ, ಇದು ಬಹಳ ಹಳೆಯ ಕಟ್ಟಡವಾಗಿದ್ದು, ಇದರ ಮೇಲೆ ಇನ್ನೊಂದು ಕಟ್ಟಡ ಕಟ್ಟಲು ಇದು ಯೋಗ್ಯವಾಗಿಲ್ಲ ಎಂದು 1995ರಲ್ಲೇ ಲೋಕೋಪಯೋಗಿ ಎಂಜಿನಿಯರ್ ವರದಿ ನೀಡಿದ್ದಾರೆ. ಈ ಮಾಹಿತಿಯನ್ನು ಗ್ರಂಥಾಲಯ ಅಧಿಕಾರಿಗಳು ಜಿಲ್ಲಾಧಿಕಾರಿ ಗಮನಕ್ಕೆ ತಂದರೂ ಅದನ್ನು ತಲೆಗೆ ಹಾಕಿಕೊಳ್ಳದ ಅವರು ಸದ್ಯ ಕಾಮಗಾರಿ ನಿಲ್ಲಿಸುವಂತೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.

ನಗರ ಕೇಂದ್ರ ಗ್ರಂಥಾಲಯ ಮತ್ತು ಜಿಲ್ಲಾ ಕೇಂದ್ರ ಗ್ರಂಥಾಲಯ ಎರಡೂ ಇದೇ ಜಾಗದಲ್ಲಿದ್ದು, ಗ್ರಂಥಾಲಯಕ್ಕೆ ಬರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈಗಿರುವ ಸ್ಥಳ ಸಾಕಾಗುತ್ತಿಲ್ಲ. ಮುಂದಿನ ದಿನಮಾನಗಳಿಗೆ ಈಗಲೇ ಯೋಜನೆಗಳನ್ನು ರೂಪಿಸದಿದ್ದರೆ ಭವಿಷ್ಯದಲ್ಲಿ ಜಾಗಕ್ಕೆ ಪರದಾಡಬೇಕಾಗುತ್ತದೆ ಎನ್ನುವುದು ಗ್ರಂಥಾಲಯ ಇಲಾಖೆ ಅಧಿಕಾರಿಗಳ ಮಾತು.

ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘಕ್ಕೆ ಈಗ ಹೋಗುವ ರಸ್ತೆ ಕೂಡ ಗ್ರಂಥಾಲಯ ಇಲಾಖೆಯದ್ದು. ಈ ಹಿಂದೆ ಅಷ್ಟು ಜಾಗ ನೀಡಿದರೂ ಈಗ ಮತ್ತಷ್ಟು ಜಾಗ ಕೇಳುವುದು ಎಷ್ಟು ಸರಿ ಎನ್ನುವುದು ಇಲಾಖೆ ಅಧಿಕಾರಿಗಳ ಪ್ರಶ್ನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.