ADVERTISEMENT

ಗ್ರಾಮಸ್ಥರ ಆಕ್ರೋಶ; ಹಲವರಿಗೆ ಗಾಯ, 61 ಮಂದಿ ಬಂಧನ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2013, 6:12 IST
Last Updated 8 ಏಪ್ರಿಲ್ 2013, 6:12 IST

ಭದ್ರಾವತಿ: ಇಲ್ಲಿನ ದೊಡ್ಡೇರಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬೆಳ್ಳಿಗೆರೆ ಗ್ರಾಮದ ಅರಣ್ಯ ಒತ್ತುವರಿ ಜಾಗ ತೆರವಿಗೆ ಸಿದ್ಧತೆ ನಡೆಸಿದ್ದ ವೇಳೆ ಗ್ರಾಮಸ್ಥರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ನಡುವೆ ಚಕಮಕಿ ನಡೆದು ಮೂರು ಬೈಕ್, ಒಂದು ರೋಲರ್, ಕ್ರೂಷರ್ ವಾಹನ ಬೆಂಕಿಗೆ ಆಹುತಿ ಆದ ಘಟನೆ ಭಾನುವಾರ ನಡೆದಿದೆ.

ಬಗರ್‌ಹುಕುಂ ಸಾಗುವಳಿ ಮಾಡಿದ್ದ ಜಾಗ ತೆರವಿಗೆ ಮೂರು ದಿನದಿಂದ ಪ್ರಯತ್ನ ನಡೆಸಿದ್ದ ಅರಣ್ಯ ಇಲಾಖೆ ಇಂದು ಬೆಳಿಗ್ಗೆ ಬುಲ್ಡೋಜರ್, ಇಟಾಚಿ ವಾಹನ ಸಮೇತ ಸ್ಥಳಕ್ಕೆ ಬಂದ ವೇಳೆ ಅಲ್ಲಿದ್ದ ಜನರು ವಾಹನ ತಡೆದು ಆಕ್ರೋಶ ವ್ಯಕ್ತಪಡಿಸಿದರು.

ಈ ಹಂತದಲ್ಲಿ ಜರುಗಿದ ಮಾತಿನ ಚಕಮಕಿ ಹಾಗೂ ಕೈ ಮಿಲಾಯಿಸುವ ಪರಿಸ್ಥಿತಿ ವಿಕೋಪ ಹಂತಕ್ಕೆ ತಲುಪಿದ ವೇಳೆ ಅರಣ್ಯ ಸಿಬ್ಬಂದಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಇದರಿಂದ ಸಿಟ್ಟಿಗೆದ್ದ ಜನರು ವಾಹನಕ್ಕೆ ಬೆಂಕಿ ಹಚ್ಚಿದ ಘಟನೆ ನಡೆದಿದೆ.
ಈ ಘಟನೆಯಿಂದ ಗಾಯಕ್ಕೊಳಗಾದ ಇಬ್ಬರು ಅರಣ್ಯ ಸಿಬ್ಬಂದಿ, ಇಬ್ಬರು ವಾಹನ ಚಾಲಕರು ಹಾಗೂ 8 ಮಂದಿ ಗ್ರಾಮಸ್ಥರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ.

ಘಟನೆ ಹಿನ್ನೆಲೆ: ಚನ್ನಗಿರಿ ಅರಣ್ಯ ವ್ಯಾಪ್ತಿಗೆ ಸೇರಿದ ಬಂಡಿಗುಡ್ಡ ಪ್ರದೇಶದ ಬೆಳ್ಳಿಗೆರೆ ಗ್ರಾಮದ 232 ಎಕರೆ ಪ್ರದೇಶದಲ್ಲಿ ಸುಮಾರು 117ಮಂದಿ ಕೃಷಿಕರು ಕಳೆದ ನಾಲ್ಕು ದಶಕದಿಂದ ಸಾಗುವಾಳಿ ನಡೆಸಿದ್ದರು.

ಸುಪ್ರೀಂ ಕೋರ್ಟ್ ಆದೇಶ ಹಿನ್ನೆಲೆಯಲ್ಲಿ ಜಾಗ ತೆರವು ಕಾರ್ಯ ನಡೆಸಲು ಅರಣ್ಯ ಇಲಾಖೆ ಹಲವು ವರ್ಷಗಳಿಂದ ಪ್ರಯತ್ನ ನಡೆಸಿತ್ತು. ಆದರೆ ಇದಕ್ಕೆ ಅವಕಾಶ ದೊರೆಯದ ಹಿನ್ನೆಲೆಯಲ್ಲಿ ನಾಗರಿಕರು ಹಾಗೂ ಅಧಿಕಾರಿಗಳ ನಡುವೆ ನಿರಂತರ ಮಾತುಕತೆ ನಡೆದಿತ್ತು.

ಮೂರು ದಿನದಿಂದ ಜಿಲ್ಲಾಡಳಿತ, ಅರಣ್ಯ ಇಲಾಖೆ ಹಾಗೂ ಗ್ರಾಮಸ್ಥರ ನಡುವೆ ತೆರವು ಕಾರ್ಯ ವಿಚಾರವಾಗಿ ಮಾತುಕತೆ ಸಾಗಿತ್ತು. ಭಾನುವಾರ ಬೆಳಿಗ್ಗೆ ಅರಣ್ಯ ಇಲಾಖೆ ಸಿಬ್ಬಂದಿ ತೆರವು ಕಾರ್ಯಕ್ಕಾಗಿ ಕೆಲವು ವಾಹನ ಸಮೇತ ಸ್ಥಳಕ್ಕೆ ಆಗಮಿಸಿದರು.
ಲಾರಿಯಲ್ಲಿ ಬಂದ ಬುಲ್ಡೋಜರ್ ಇಳಿಸುವ ಸಂದರ್ಭದಲ್ಲಿ ಉಂಟಾದ ಜಾಗದ ವ್ಯತ್ಯಾಸ ಕಾರಣ ಅರಣ್ಯ ಇಲಾಖೆಯವರು ಖಾತೆ ಜಮೀನು ಸಾಗುವಳಿ ತೆರವಿಗೂ ಮುಂದಾಗಿದ್ದಾರೆ ಎಂದು ಭಾವಿಸಿದ ಗ್ರಾಮಸ್ಥರು ಕೋಪದಿಂದ ವಾಹನ ತಡೆದು ಪ್ರತಿಭಟನೆ ನಡೆಸಿದ್ದಾರೆ.

ಈ ಹಂತದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆದು, ಈ ಎಲ್ಲಾ ಅನಾಹುತ ನಡೆಯಲು ಕಾರಣವಾಯಿತು ಎಂದು ಪ್ರತ್ಯಕ್ಷದರ್ಶಿ ತಿಳಿಸಿದ್ದಾರೆ.

ಘಟನೆ ಸಂಬಂಧ ಉಪವಲಯ ಅರಣ್ಯಾಧಿಕಾರಿ ಮಂಜುನಾಥ್ ಅವರು ನೀಡಿದ ದೂರಿನ ಮೇರೆಗೆ ಗ್ರಾಮಾಂತರ ಪೊಲೀಸರು 35 ಪುರುಷ, 26 ಮಹಿಳೆಯರು ಸೇರಿದಂತೆ ಒಟ್ಟು 61ಮಂದಿಯನ್ನು ಬಂಧಿಸಿ ಕ್ರಮ ಜರುಗಿಸಿದ್ದಾರೆ.

ಇದಕ್ಕೆ ಪ್ರತಿಯಾಗಿ ಗ್ರಾಮಸ್ಥರು ಸಹ ಅರಣ್ಯ ಇಲಾಖೆ ಸಿಬ್ಬಂದಿ ವಿರುದ್ಧ ದೂರು ದಾಖಲಿಸಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದರ ಕುರಿತಂತೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಘಟನಾ ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿದ್ದು, ಹೆಚ್ಚಿನ ಪೊಲೀಸ್ ಪಹರೆ ನಿಯೋಜಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.