ADVERTISEMENT

ಗ್ರಾಮಾಂತರ, ಸಾಗರ; ಬಿಜೆಪಿಗೆ ಬಂಡಾಯದ ಭಾರ

ಹೊಸಮುಖ ಅಶೋಕ ನಾಯ್ಕಗೆ ಮಣೆ, ಬೇಳೂರು ರಾಜಕೀಯ ಭವಿಷ್ಯಕ್ಕೆ ಬರೆ

ಚಂದ್ರಹಾಸ ಹಿರೇಮಳಲಿ
Published 17 ಏಪ್ರಿಲ್ 2018, 10:51 IST
Last Updated 17 ಏಪ್ರಿಲ್ 2018, 10:51 IST

ಶಿವಮೊಗ್ಗ: ಎರಡನೇ ಹಂತದಲ್ಲಿ ಬಿಜೆಪಿ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಣೆ ಮಾಡಿದ್ದು, ಸಾಗರ, ಶಿವಮೊಗ್ಗ ಗ್ರಾಮಾಂತರ ಕ್ಷೇತ್ರಗಳಲ್ಲಿ ಬಂಡಾಯದ ಬಿಸಿ ಎದುರಿಸುವ ಸನ್ನಿವೇಶ ನಿರ್ಮಾಣವಾಗಿದೆ.

ಕುಮಾರ್ ಬಂಗಾರಪ್ಪ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ನಂತರ ಸೊರಬ ಕ್ಷೇತ್ರದ ಮಾಜಿ ಶಾಸಕ ಹರತಾಳು ಹಾಲಪ್ಪ ಅವರು ಬಿ.ಎಸ್. ಯಡಿಯೂರಪ್ಪ ಸೂಚನೆ ಮೇಲೆ ಸಾಗರ ವಿಧಾನಸಭಾ ಕ್ಷೇತ್ರದತ್ತ ಮುಖ ಮಾಡಿದ್ದರು. ಕ್ಷೇತ್ರದ ಹಳ್ಳಿಹಳ್ಳಿ ಸುತ್ತಲು ಆರಂಭಿಸಿದ್ದರು. ಈಚೆಗೆ ನಡೆದ ದಿಢೀರ್ ಬೆಳೆವಣಿಗೆಯಲ್ಲಿ ಬೇಳೂರು ಗೋಪಾಲಕೃಷ್ಣ ಅವರಿಗೆ ಟಿಕೆಟ್ ಖಚಿತ ಎನ್ನುವ ಸುದ್ದಿ ಹರಡಿತ್ತು. ಅದನ್ನು ಬೇಳೂರು ಸಹ ಖಚಿತಪಡಿಸಿದ್ದರು.

ಈ ಎಲ್ಲ ಬೆಳವಣಿಗೆಗಳಿಂದ ಕೆರಳಿದ್ದ ಹಾಲಪ್ಪ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ, ಅಸಮಾಧಾನ ಹೊರಹಾಕಿದ್ದರು. ಕಾಂಗ್ರೆಸ್‌ ಸೇರುವ ಸುದ್ದಿಯೂ ಹರಿದಾಡಿತ್ತು. ಕೊನೆಗೂ ಇಬ್ಬರ ನಡುವಿನ ಪೈಪೋಟಿಯಲ್ಲಿ ಹಾಲಪ್ಪ ಯಶ ಸಾಧಿಸಿದ್ದಾರೆ. ಈಗ ಬೇಳೂರು ಅವರತ್ತ ಎಲ್ಲರ ಚಿತ್ತ ನೆಟ್ಟಿದೆ.

ADVERTISEMENT

ಬೇಳೂರು ಭವಿಷ್ಯ ಅತಂತ್ರ:

ಕಳೆದ ಬಾರಿ ಯಡಿಯೂರಪ್ಪ ಅವರ ವಿರುದ್ಧ ಬಂಡಾಯ ಎದ್ದು ಜೆಡಿಎಸ್ ಸೇರಿದ್ದ ಬೇಳೂರು ಅವರು ಅದೇ ಪಕ್ಷದ ಟಿಕೆಟ್‌ ಪಡೆದು 2013ರ ಚುನಾವಣೆ ಎದುರಿಸಿದ್ದರು. ಆದರೆ, ಅವರು ಪಡೆದ ಮತ ಕೇವಲ 23217 ಮಾತ್ರ. ಕೆಜೆಪಿಯ ಬಿ.ಆರ್. ಜಯಂತ್ 30,712 ಮತ ಗಳಿಸಿ ಬೇಳೂರು ಅವರನ್ನು ಮೂರನೇ ಸ್ಥಾನಕ್ಕೆ ನೂಕಿದ್ದರು. ಬಿಜೆಪಿಯ ಶಾರದಾ ಸಿ. ರಾವ್ ಕೇವಲ 5,355 ಮತ ಪಡೆದಿದ್ದರು. ಬಿಜೆಪಿ ವಿಭಜನೆಯ ಲಾಭ ಪಡೆದಿದ್ದ ಕಾಗೋಡು ಭಾರಿ ಮತಗಳ ಅಂತರದಿಂದ (ಪಡೆದ ಮತ 71,960) ಗೆಲುವು ಪಡೆದಿದ್ದರು. ಅತ್ಯಂತ ಕಡಿಮೆ ಮತ ಪಡೆದಿದ್ದ ಬಿಜೆಪಿ ಭಾರಿ ಮುಖಭಂಗ ಅನುಭವಿಸಿತ್ತು.

ನಂತರದ ಬೆಳವಣಿಗೆಯಲ್ಲಿ ಬಿಜೆಪಿ ಸೇರಿದ್ದ ಬೇಳೂರು ಈ ಬಾರಿ ಟಿಕೆಟ್ ಪಡೆಯಲು ಸಾಕಷ್ಟು ಪ್ರಯತ್ನ ನಡೆಸಿದ್ದರು. ಟಿಕೆಟ್‌ ಕೈ ತಪ್ಪಿದ್ದು ಅವರ ರಾಜಕೀಯ ಭವಿಷ್ಯ ಅತಂತ್ರವಾಗಿದೆ. ಮುಂದಿನ ನಡೆ ತೀವ್ರ ಕುತೂಹಲ ಕೆರಳಿಸಿದ್ದರೂ, ಬಿಜೆಪಿಯ ಒಡಕು ಕಾಂಗ್ರೆಸ್‌ಗೆ ಅನುಕೂಲ ಕಲ್ಪಿಸುವ ಸಾಧ್ಯತೆ ತಳ್ಳಿಹಾಕುವಂತಿಲ್ಲ ಎನ್ನುವುದು ಅವರದೇ ಪಕ್ಷದ ಮುಖಂಡರ ಆತಂಕ.

ಮಾಜಿ ಶಾಸಕ ಕುಮಾರಸ್ವಾಮಿಗೆ ಕೋಕ್:

ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿ ಈ ಬಾರಿ ಹೊಸ ಮುಖಕ್ಕೆ ಮನ್ನಣೆ ನೀಡಿದೆ. ಬಂಜಾರ ಸಮುದಾಯದ ಕೆ.ಬಿ. ಅಶೋಕ್‌ ನಾಯ್ಕ ಅವರು ಈಗ ಬಿಜೆಪಿ ಅಧಿಕೃತ ಅಭ್ಯರ್ಥಿ. 2008ರ ಚುನಾವಣೆಯಲ್ಲಿ 56,979 ಮತಗಳನ್ನು ಪಡೆದು ಕಾಂಗ್ರೆಸ್‌ನ ಕರಿಯಣ್ಣ ಅವರನ್ನು 25 ಸಾವಿರ ಮತಗಳ ಅಂತರದಲ್ಲಿ ಮಣಿಸಿದ್ದ ಕೆ.ಜಿ. ಕುಮಾರಸ್ವಾಮಿ ವಿಧಾನಸಭೆ ಪ್ರವೇಶಿಸಿದ್ದರು. 2013ರಲ್ಲಿ ಕೆಜೆಪಿ, ಬಿಜೆಪಿ ವಿಭಜನೆಯ ಸಮಯದಲ್ಲಿ ಬಿಜೆಪಿ ಜತೆ ಉಳಿದುಕೊಂಡಿದ್ದರು. ಯಡಿಯೂರಪ್ಪ ಜತೆ ಅಂದು ಕೆಜೆಪಿಯಲ್ಲಿ ಗುರುತಿಸಿಕೊಂಡಿದ್ದ ಅಶೋಕ್ ನಾಯ್ಕ ಅವರಿಗೆ ಈಗ ಟಿಕೆಟ್ ದೊರೆತಿದೆ.

‘2013ರಲ್ಲಿ ಕೆಜೆಪಿ ವಿಭಜನೆ ಪರಿಣಾಮ ಸೋಲುವುದು ಖಚಿತವಾದರೂ ಪಕ್ಷದ ಅಣತಿಯಂತೆ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದೆ. ಅಂದು ಪಕ್ಷ ನಿಷ್ಠೆ ತೋರಿದ್ದಕ್ಕೆ ಇಂದು ಬಹುಮಾನ ಲಭಿಸಿದೆ. ಕ್ಷೇತ್ರದ ಜನರ ಅಭಿಪ್ರಾಯ ಪಡೆದು ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇನೆ’ ಎಂದು ಅಭಿಪ್ರಾಯ ಹಂಚಿಕೊಂಡರು ಕುಮಾರಸ್ವಾಮಿ.

ಮೂರು ವರ್ಷ ಮೊದಲೇ ಕ್ಷೇತ್ರದಲ್ಲಿ ಬೀಡುಬಿಟ್ಟು, ಪ್ರತಿ ಗ್ರಾಮಗಳಲ್ಲೂ ಓಡಾಡುತ್ತಿದ್ದ ವಿ. ನಾರಾಯಣಸ್ವಾಮಿ ಅವರಿಗೂ ಬಿಜೆಪಿ ಕೋಕ್ ನೀಡಿದೆ. ಬಿಜೆಪಿ ಟಿಕೆಟ್ ಸಿಗುವ ಕುರಿತು ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದ ಅವರು ಕಾಂಗ್ರೆಸ್ ಸೇರುವ ಸುಳಿವು ನೀಡಿದ್ದಾರೆ. ಭೋವಿ ಸಮಾಜದ ಕುಮಾರಸ್ವಾಮಿ ಮತ್ತು ದಲಿತ ಸಮುದಾಯದ ನಾರಾಯಣಸ್ವಾಮಿ ನಡೆ ಬಿಜೆಪಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ.

ಮತ್ತೆ ಸಹೋದರರ ಸವಾಲ್:

ನಿರೀಕ್ಷೆಯಂತೆ ಸೊರಬದಲ್ಲಿ ಕುಮಾರ್ ಬಂಗಾರಪ್ಪ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಮತ್ತೊಮ್ಮೆ ಅಲ್ಲಿ ಸಹೋದರರ ಸವಾಲ್‌ಗೆ ವೇದಿಕೆ ಸಿದ್ಧವಾಗಿದೆ. ಕಳೆದೆರಡು ಚುನಾವಣೆಗಳಲ್ಲಿ ತ್ರಿಕೋನ ಸ್ಪರ್ಧೆಗೆ ಸಾಕಷ್ಟಿಯಾಗಿದ್ದ ಸೊರಬ ಈ ಬಾರಿ ಇಬ್ಬರ ಮಧ್ಯೆ ನೇರ ಸ್ಪರ್ಧೆ ನಡೆಯುವ ಸಾಧ್ಯತೆ ಇದೆ.

ತೀರ್ಥಹಳ್ಳಿಯಲ್ಲೂ ನಿರೀಕ್ಷೆಯಂತೆಯೇ ಆರಗ ಜ್ಞಾನೇಂದ್ರ ಬಿಜೆಪಿ ಅಧಿಕೃತ ಅಭ್ಯರ್ಥಿ. 1994, 1999, 2004ರಲ್ಲಿ ಹ್ಯಾಟ್ರಿಕ್ ಗೆಲುವು ಪಡೆದಿದ್ದ ಅವರು 2008, 2013ರ ಚುನಾವಣೆಯಲ್ಲಿ ಸೋಲು ಕಂಡಿದ್ದರು. ಕಳೆದ ಬಾರಿಯಂತೆ ಈಗಲೂ ತ್ರಿಕೋನ ಸ್ಪರ್ಧೆ ಇದೆ. ಅಂದು ಕೆಜೆಪಿಯಿಂದ ಸ್ಪರ್ಧಿಸಿದ್ದ ಆರ್.ಎಂ. ಮಂಜುನಾಥ ಗೌಡ ಅವರು ಈಗ ಜೆಡಿಎಸ್‌ನಿಂದ ಕಣಕ್ಕೆ ಇಳಿದಿದ್ದಾರೆ. ಯಥಾ ಪ್ರಕಾರ ಕಾಂಗ್ರೆಸ್‌ನಿಂದ ಕಿಮ್ಮನೆ ಇದ್ದಾರೆ.

ಖಾಲಿ ಉಳಿದ ಭದ್ರಾವತಿ

ಸ್ವಾತಂತ್ರ್ಯಾ ನಂತರ ಇದುವರೆಗೆ ನಡೆದ ಚುನಾವಣೆಯಲ್ಲಿ ಒಮ್ಮೆಯೂ ಭದ್ರಾವತಿ ಕ್ಷೇತ್ರದಲ್ಲಿ ಬಿಜೆಪಿ ಖಾತೆ ತೆರೆದಿಲ್ಲ. ಈ ಬಾರಿ ಮಾಜಿ ಶಾಸಕರ ಪುತ್ರ, ಲಿಂಗಾಯತ ಸಮುದಾಯದ ಪ್ರವೀಣ್ ಪಟೇಲ್‌ಗೆ ಟಿಕೆಟ್ ನೀಡುವ ನಿರೀಕ್ಷೆ ಇತ್ತು. ಆದರೆ, ಎರಡನೇ ಪಟ್ಟಿಯಲ್ಲೂ ಅಭ್ಯರ್ಥಿ ಆಯ್ಕೆ ಘೋಷಿಸಿಲ್ಲ. ಮೊದಲ ಪಟ್ಟಿಯಲ್ಲಿ ಶಿವಮೊಗ್ಗ ನಗರ, ಶಿಕಾರಿಪುರ ಪ್ರಕಟವಾಗಿತ್ತು. ಈಗ ಸೊರಬ, ಸಾಗರ, ತೀರ್ಥಹಳ್ಳಿ, ಶಿವಮೊಗ್ಗ ಗ್ರಾಮಾಂತರ ಪ್ರಕಟವಾಗಿದೆ. ಭದ್ರಾವತಿ ಬಾಕಿ ಉಳಿದಿದೆ.

ಬಿಜೆಪಿ ಎರಡನೇ ಪಟ್ಟಿ ಅಭ್ಯರ್ಥಿಗಳು

ಸೊರಬ                          ಕುಮಾರ್ ಬಂಗಾರಪ್ಪ

ಸಾಗರ                           ಹರತಾಳು ಹಾಲಪ್ಪ

ತೀರ್ಥಹಳ್ಳಿ                        ಆರಗ ಜ್ಞಾನೇಂದ್ರ

ಶಿವಮೊಗ್ಗ ಗ್ರಾಮಾಂತರ           ಅಶೋಕ ನಾಯ್ಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.