ADVERTISEMENT

ಚುನಾವಣಾ ವ್ಯವಸ್ಥೆ ಸುಧಾರಣೆ ಅಗತ್ಯ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2011, 8:40 IST
Last Updated 20 ಮಾರ್ಚ್ 2011, 8:40 IST
ಚುನಾವಣಾ ವ್ಯವಸ್ಥೆ ಸುಧಾರಣೆ ಅಗತ್ಯ
ಚುನಾವಣಾ ವ್ಯವಸ್ಥೆ ಸುಧಾರಣೆ ಅಗತ್ಯ   

ಸಾಗರ: ತೋಳ್ಬಲ, ಹಣಬಲ, ಜಾತಿಬಲದಿಂದ ನರಳುತ್ತಿರುವ ಭಾರತದ ಪ್ರಜಾಪ್ರಭುತ್ವ ಉತ್ತಮಗೊಳ್ಳಲು ಚುನಾವಣಾ ವ್ಯವಸ್ಥೆ ಸುಧಾರಣೆಗೊಳ್ಳದೇ ಬೇರೆ ದಾರಿಯಿಲ್ಲ ಎಂದು ವಿಧಾನಸಭೆಯ ಮಾಜಿ ಸ್ಪೀಕರ್ ರಮೇಶ್‌ಕುಮಾರ್ ಹೇಳಿದರು.

ರಾಮಕೃಷ್ಣ ಹೆಗಡೆ ರಾಷ್ಟ್ರೀಯ ಚಿಂತನಾ ವೇದಿಕೆ ಶನಿವಾರ ಏರ್ಪಡಿಸಿದ್ದ ವಿಚಾರ ಸಂಕಿರಣದಲ್ಲಿ ‘ರಾಜಕೀಯದಲ್ಲಿ ಮೌಲ್ಯ’ ಎಂಬ ವಿಷಯದ ಕುರಿತು ಮಾತನಾಡಿದ ಅವರು, ರಾಜಕೀಯ ಮತ್ತು ಮೌಲ್ಯ ಇವುಗಳಿಗೆ ಪರಸ್ಪರ ಸಂಬಂಧವೇ ಇಲ್ಲದ ರೀತಿಯಲ್ಲಿ ಅವುಗಳು ವಿರುದ್ಧ ದಿಕ್ಕಿನಲ್ಲಿ ಪ್ರಯಾಣ ಮಾಡುತ್ತಿರುವ ಪರಿಸ್ಥಿತಿಯನ್ನು ಈಗ ನೋಡುತ್ತಿದ್ದೇವೆ ಎಂದರು.

ಒಂದು ಪಕ್ಷದಿಂದ ಆಯ್ಕೆಯಾದವರು ಆರಿಸಿದ ಜನರಿಗೆ ಯಾವುದೇ ಕಾರಣ ಹೇಳದೇ ಅವಧಿ ಮುಗಿಯುವ ಮುನ್ನವೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಮತ್ತೆ ಚುನಾವಣೆಗೆ ನಿಲ್ಲುತ್ತಾರೆ. ಇಂತಹ ಅನೀತಿಗೆ ಜನರೂ ಪುರಸ್ಕಾರ ನೀಡುತ್ತಿದ್ದಾರೆ. ಇಂತಹ ರಾಜಕೀಯ ಅಪಮೌಲ್ಯಕ್ಕೆ ಕಾರಣ ಯಾರು ಎಂಬುದರ ಕುರಿತು ಪ್ರತಿಯೊಬ್ಬರೂ ಆತ್ಮವಿಮರ್ಶೆ ಮಾಡಬೇಕಿದೆ ಎಂದು ಹೇಳಿದರು.

ಹಗೆತನ, ವೈಯಕ್ತಿಕ ದ್ವೇಷವೇ ರಾಜಕಾರಣದ ಸಾಧನವಾಗಿದೆ. ಇಂದಿನ ರಾಜಕಾರಣದಲ್ಲಿ ಬಳಕೆಯಾಗುತ್ತಿರುವ ಭಾಷೆ ಹೇಸಿಗೆ ಹುಟ್ಟಿಸುವಂತಿದೆ. ರಾಜಕೀಯ ಅಪಮೌಲ್ಯ ಒಂದು ರಾಜ್ಯ ಅಥವಾ ಪಕ್ಷಕ್ಕೆ ಸೀಮಿತವಾಗಿಲ್ಲ. ಅತ್ಯಂತ ಉನ್ನತ ಹುದ್ದೆಗೆ ನೇಮಕವಾಗುವ ವ್ಯಕ್ತಿಯ ವಿರುದ್ಧ ಇರುವ ಗಂಭೀರ ಆಪಾದನೆ ಪ್ರಧಾನಮಂತ್ರಿ ಗಮನಕ್ಕೆ ಬರುವುದಿಲ್ಲ ಅಂತಾದರೆ ಯಾರನ್ನು ದೂಷಿಸಬೇಕು ಎಂದು ಅವರು ಪ್ರಶ್ನಿಸಿದರು.


ನಮ್ಮ ನಡವಳಿಕೆಗಳನ್ನು ಜನ ಗಮನಿಸುತ್ತಾರೆ ಎಂಬ ನೈತಿಕ ಭಯ ಇಲ್ಲದ ಶಾಸಕರ ಸಂಖ್ಯೆ ಹೆಚ್ಚಾಗಿರುವುದೇ ಸದನದ ಪಾವಿತ್ರ್ಯತೆ ಹಾಳಾಗಲು ಕಾರಣವಾಗಿದೆ. ಸದನದಲ್ಲಿ ಅವಿಶ್ವಾಸ ನಿರ್ಣಯ ಮಂಡನೆಯಾದಾಗ ರಾಜ್ಯದ ಪೊಲೀಸ್ ಮುಖ್ಯಸ್ಥರು ಸಮವಸ್ತ್ರದಲ್ಲಿ ಅಲ್ಲಿ ಹಾಜರಿದ್ದದ್ದು ತಪ್ಪಲ್ಲವೇ ಎಂದು ಮುಖ್ಯವಾಗಿ ಅನಿಸದೆ ಇದ್ದದ್ದು ದೊಡ್ಡ ದುರಂತ ಎಂದರು.

ಚುನಾವಣಾ ದಿನಾಂಕ ಘೋಷಣೆಯಾಗುತ್ತಿದ್ದಂತೆ ಎಲ್ಲೆಡೆ ಹೆಂಡದ ಅಂಗಡಿಗಳನ್ನು, ಡಿಸ್ಟಲರಿಗಳನ್ನು ಮುಚ್ಚಬೇಕೆಂಬ ಕಾಯ್ದೆಯನ್ನು ಜಾರಿಗೆ ತರಲು ಏನು ಕಷ್ಟ ಎಂದು ಪ್ರಶ್ನಿಸಿದ ಅವರು, ಚುನಾವಣಾ ಸುಧಾರಣೆಗಳ ಬಗ್ಗೆ ಯಾವ ರಾಜಕೀಯ ಪಕ್ಷಗಳಿಗೂ ಆಸಕ್ತಿ ಇಲ್ಲದೇ ಇರಲು ಅವರ ಬಳಿ ಇರುವ ಕಪ್ಪುಹಣವೇ ಕಾರಣ ಎಂದುಅಭಿಪ್ರಾಯಪಟ್ಟರು.
ಪ್ರತಿಸ್ಪಂದನೆ ನೀಡಿದ ಪತ್ರಕರ್ತ ಅ.ರಾ. ಶ್ರೀನಿವಾಸ್, ಇಂದಿನ ರಾಜಕಾರಣದಲ್ಲಿ ರಾವಣ ಶೈಲಿಯ ಆಕ್ರಮಣಕಾರಿ ರಾಜಕಾರಣೆ ವಿಜೃಂಭಿಸುತ್ತಿದ್ದು, ಅದರ ಎದುರು ಸಾತ್ವಿಕ ರಾಜಕಾರಣ ಸೋಲುತ್ತಿದೆ. ಅಧಿಕಾರ ಇದ್ದರೆ ಏನು ಬೇಕಾದರೂ ಮಾಡಬಹುದು ಎಂಬ ಅಮಲು ರಾಜಕಾರಣಿಗಳ ತಲೆಗೆ ಏರಿದೆ ಎಂದರು.

‘ಅಧಿಕಾರ ವಿಕೇಂದ್ರೀಕರಣ’ ಕುರಿತು ಜೆಡಿಯುನ ರಾಜ್ಯ ಘಟಕದ ಅಧ್ಯಕ್ಷ ಡಾ.ಮಲ್ಲನಗೌಡ ನಾಡಗೌಡ ಮಾತನಾಡಿ, ಅಧಿಕಾರ ಎಂಬುದು ಹೆಪ್ಪುಗಟ್ಟಿದ್ದರೆ ವ್ಯವಸ್ಥೆ ಕೆಡುವುದು ಖಚಿತ. ರಾಜಕಾರಣವನ್ನು ಬದಲಿಸುವ ಮತ್ತು ಸ್ವಚ್ಛಗೊಳಿಸುವ ಶಕ್ತಿ ವಿಕೇಂದ್ರೀಕರಣಕ್ಕೆ ಇದೆ ಎಂದು ಹೇಳಿದರು. ಪ್ರತಿಸ್ಪಂದಿಸಿದ ರಂಗಕರ್ಮಿ ಕೆ.ವಿ. ಅಕ್ಷರ, ಜನರು ಆಳಿಸಿಕೊಳ್ಳುವ ಬದಲು ತಾವೇ ಆಳಲು, ಗ್ರಾಮಕ್ಕೆ ಏನು ಬೇಕು ಎಂದು ಗ್ರಾಮಸ್ಥರೇ ನಿರ್ಧರಿಸಲು ಅಧಿಕಾರ ವಿಕೇಂದ್ರೀಕರಣದ ಆವಶ್ಯಕತೆ ಇದೆ ಎಂದು ಹೇಳಿದರು.

ಮಾಜಿ ಶಾಸಕ ಎಲ್.ಟಿ. ತಿಮ್ಮಪ್ಪ ಹೆಗಡೆ ಅಧ್ಯಕ್ಷತೆ ವಹಿಸಿದ್ದರು.ಮಾಜಿ ಶಾಸಕ ಬಿ. ಧರ್ಮಪ್ಪ, ವಿಧಾನ ಪರಿಷತ್‌ನ ಮಾಜಿ ಸದಸ್ಯೆ ಪ್ರಫುಲ್ಲಾ ಮಧುಕರ್, ಎಸ್.ವಿ. ಪ್ರಕಾಶ್ ಶಿರೂರು, ಕೆ.ಜಿ. ರಾಘವೇಂದ್ರ ಹಾಜರಿದ್ದರು.ಸುಕೃತಾ ಪ್ರಾರ್ಥಿಸಿದರು. ಅಶ್ವಿನಿಕುಮಾರ್ ಸ್ವಾಗತಿಸಿದರು. ಕೆ.ಎಸ್. ಸತ್ಯನಾರಾಯಣ ಪ್ರಾಸ್ತಾವಿಕ ಮಾತನಾಡಿದರು. ಜಿ.ವಿ. ಬಾಲಕೃಷ್ಣ ವಂದಿಸಿದರು. ಕೆ.ಎಸ್. ಲಕ್ಷ್ಮೀನಾರಾಯಣ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT