ADVERTISEMENT

ಚುನಾವಣೆಗೆ ನಾನು ಸಿದ್ಧ: ಬೇಳೂರು

​ಪ್ರಜಾವಾಣಿ ವಾರ್ತೆ
Published 6 ಜನವರಿ 2011, 9:25 IST
Last Updated 6 ಜನವರಿ 2011, 9:25 IST

ಶಿವಮೊಗ್ಗ: ‘ಚುನಾವಣೆಗೆ ನಾನು ಸಿದ್ಧನಿದ್ದೇನೆ. ನೀವು ಇದ್ದೀರಾ?’ ಎಂದು ಅನರ್ಹಗೊಂಡ ಶಾಸಕ ಗೋಪಾಲಕೃಷ್ಣ ಬೇಳೂರು ಬಿಜೆಪಿಗೆ ಸವಾಲು ಎಸೆದರು. ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜಿಲ್ಲಾ ಮತ್ತು ತಾಲ್ಲೂಕು ಪಂಚಾಯ್ತಿ ಚುನಾವಣೆಯಲ್ಲಿ ಈ ಬಾರಿ ಬೆಂಬಲಿಸಿದ ಪಕ್ಷದಿಂದಲೇ ತಾವು ಸ್ಪರ್ಧಿಸುತ್ತಿದ್ದು, ಈ ಕುರಿತಂತೆ ಆ ಪಕ್ಷದ ರಾಜ್ಯದ ಮುಖಂಡರ ಜತೆ ಮಾತುಕತೆ ಮುಗಿದಿದೆ. ಹೈಕಮಾಂಡ್‌ನಲ್ಲಷ್ಟೇ ಈ ಬಗ್ಗೆ ಚರ್ಚೆ ಬಾಕಿ ಉಳಿದಿದೆ’ ಎಂದರು.

ಶಾಸಕತ್ವ ಅನರ್ಹತೆ ವಿಚಾರ ನ್ಯಾಯಾಲಯದಲ್ಲಿರುವುದರಿಂದ ಬಹಿರಂಗವಾಗಿ  ಪಕ್ಷದ ಹೆಸರು ಹೇಳಲು ಬರುವುದಿಲ್ಲ ಎಂದು ಮಾಧ್ಯಮಗಳಿಗೆ ಸ್ಪಷ್ಟಪಡಿಸಿದ ಅವರು, ಪ್ರಸ್ತುತ ಫಲಿತಾಂಶ ಜಿಲ್ಲೆಯಲ್ಲಿ ಯಡಿಯೂರಪ್ಪ ನಾಯಕತ್ವಕ್ಕೆ ಹಿನ್ನಡೆಯಾಗಿದೆ. ಯಡಿಯೂರಪ್ಪ- ಈಶ್ವರಪ್ಪ ಅವರದ್ದು ಮುಗಿದ ಅಧ್ಯಾಯ. ಅಧಿಕಾರ ಅವರಿಗೆ ಶಾಶ್ವತ ಅಲ್ಲ ಎಂದು ಜನ ತೋರಿಸಿಕೊಟ್ಟಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಜಿಲ್ಲೆಯಲ್ಲಿ ಬಿಜೆಪಿಯ ಗೆಲುವು, ಗೆಲುವಲ್ಲ. ಇಬ್ಬರ ಜಗಳದಲ್ಲಿ ಮೂರನೆಯವರಿಗೆ ಲಾಭವಾಗಿದೆ ಅಷ್ಟೇ ಎಂದು ವಿಶ್ಲೇಷಿಸಿದರು.

ಸಾಗರದಲ್ಲಿ ಕಾಗೋಡು ತಿಮ್ಮಪ್ಪ ಅವರ ನೇತೃತ್ವದಲ್ಲಿ ಬಿಜೆಪಿಯನ್ನು ದೂಳೀಪಟ ಮಾಡಲಾಗಿದೆ. ಕಾಂಗ್ರೆಸ್ ಅಭ್ಯರ್ಥಿಗಳಿಗೆ ತಮ್ಮ ಸಂಪೂರ್ಣ ಬೆಂಬಲ ಇತ್ತು. ‘ಸಂಡೆ ಲಾಯರ್’ ಹಣದ ಸೂಟ್‌ಕೇಸ್ ಕೈಯಲ್ಲಿ ಹಿಡಿದುಕೊಂಡು ಓಡಾಡಿದರೂ ಸಾಗರದಲ್ಲಿ ಬಿಜೆಪಿಗೆ ಗೆಲುವು ಕಾಣಲು ಸಾಧ್ಯವಾಗಲಿಲ್ಲ ಎಂದು ಮುಖ್ಯಮಂತ್ರಿಗಳ ಸಲಹೆಗಾರ ದಿವಾಕರ್ ಉದ್ದೇಶಿಸಿ ವ್ಯಂಗ್ಯವಾಡಿದರು.

ಗೆದ್ದು ಬರಲಿ
 ಸಂಸದ ಬಿ.ವೈ. ರಾಘವೇಂದ್ರ ಗೆಲುವಿಗೆ ಸಾಗರದಲ್ಲಿ ನಾನು ಕಾರಣನಾಗಿದ್ದೆ. ಅವರಿಗೆ ತಾಕತ್ತು ಇದ್ದರೆ ಈಗ ರಾಜೀನಾಮೆ ನೀಡಿ ಮತ್ತೆ ಗೆದ್ದು ಬರಲಿ ಎಂದು ಸವಾಲು ಹಾಕಿದರು.

ಜಿಲ್ಲಾ ಪ್ರವಾಸ
 ಯಡಿಯೂರಪ್ಪ ಮತ್ತು ಮಕ್ಕಳ ಹಗರಣಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ತಾವು ಕಾಗೋಡು ತಿಮ್ಮಪ್ಪ ಅವರೊಂದಿಗೆ ಸದ್ಯದಲ್ಲೇ ಜಿಲ್ಲಾದ್ಯಂತ ಪ್ರವಾಸ ಕೈಗೊಳ್ಳಲಾಗುವುದು ಎಂದರು. ಭ್ರಷ್ಟಚಾರದಲ್ಲಿ ತೊಡಗಿರುವ ಬಿಜೆಪಿ ಸರ್ಕಾರದ ವಿರುದ್ಧ ಶಿಕಾರಿಪುರ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಜಂಟಿ ಪ್ರವಾಸ ಮಾಡಿ ಜನಾಭಿಪ್ರಾಯ ಮೂಡಿಸಲಾಗುವುದು ಎಂದು ಹೇಳಿದರು.

ಕಾರ್ಯಾಗಾರ
ರಿಪ್ಪನ್‌ಪೇಟೆ ವರದಿ: ಪ್ರತಿಯೊಬ್ಬರೂ ಉತ್ತಮ ಆರೋಗ್ಯ ಹೊಂದಿರಬೇಕಾದರೆ ತಮ್ಮ ಸುತ್ತ ಮುತ್ತಲಿನ ಪರಿಸರ ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ಎಂದು ಆಯುರ್ವೇದ ವೈದ್ಯ ಡಾ.ಪತಂಜಲಿ ಹೇಳಿದರು.  ಯುನೈಟೆಡ್ ಸಮಾಜ ಕಲ್ಯಾಣ ಸಂಸ್ಥೆ ಹಾಗೂ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ ಯೋಜನೆ ಅಡಿ ಹರತಾಳು ಗ್ರಾಮದಲ್ಲಿ ಈಚೆಗೆ ನಡೆದ ಗ್ರಾಮ ಆರೋಗ್ಯ ಮತ್ತು ನೈರ್ಮಲ್ಯ ಸಮಿತಿ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ವಕೀಲ ನಂಜುಂಡಪ್ಪ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಗ್ರಾ.ಪಂ. ಅಧ್ಯಕ್ಷ  ಕಣಕಿ ನಾರಾಯಣಪ್ಪ, ಸದಸ್ಯೆ ಸುಮಿತ್ರಮ್ಮ, ಪಿಡಿಒ ಚಂದ್ರಶೇಖರ, ಹಿರಿಯ ಆರೋಗ್ಯ ಸಹಾಯಕ ಶೇಷಗಿರಿ ಹಾಗೂ ಶಿಕ್ಷಕ ರಾಜು ಭಂಡಾರಿ ಹಾಜರಿದ್ದರು. ಶಶಿಕಲಾ ಪ್ರಾರ್ಥಿಸಿದರು. ಚಂದ್ರು ಡಿ. ಸ್ವಾಗತಿಸಿದರು. ಲೋಕೇಶ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.