ಕಾರ್ಗಲ್: ಭಾರತೀಯರಲ್ಲಿ ಜಾತಿಯತೆಯ ವಿಷ ಬೀಜ ತೊರೆದು ಹೋದಲ್ಲಿ ಮಾತ್ರ ರಾಷ್ಟ್ರೀಯ ಭಾವನೆ ಮೂಡಿಸಲು ಸಾಧ್ಯ ಎಂದು ಕೆಪಿಸಿ ಮುಖ್ಯ ಎಂಜಿನಿಯರ್ ರಾಜಮುಡಿ ಅಭಿಪ್ರಾಯಪಟ್ಟರು.
ಇಲ್ಲಿನ ಕುವೆಂಪು ರಂಗಮಂದಿರದ ಒಳಾಂಗಣದಲ್ಲಿ ಶನಿವಾರ ಕೆಪಿಸಿ ಮತ್ತು ಪರಿಶಿಷ್ಟ ಜಾತಿವರ್ಗದ ನೌಕರರ ಸಂಘದ ವತಿಯಿಂದ ನಡೆದ ಡಾ.ಬಿ.ಆರ್. ಅಂಬೇಡ್ಕರ್ ಅವರ 121ನೇ ಜಯಂತಿ ಆಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಭಾರತೀಯರಲ್ಲಿ ರಾಷ್ಟ್ರೀಯ ಭಾವನೆಯ ಕೊರತೆಯಿಂದ ಸಂಪದ್ಬರಿತ ಭಾರತ ದೇಶ ಹಿಂದುಳಿಯಲು ಕಾರಣ. ಇಲ್ಲಿ ಕೇವಲ ಜಾತಿಯತೆಯ ಚೌಕಟ್ಟಿನೊಳಗೆ ಚಿಂತಿಸುವವರ ಸಂಖ್ಯೆ ಜಾಸ್ತಿಯಾಗಿದೆ. ಇದರಿಂದ ದೇಶ ಅಭಿವೃದ್ಧಿಯಾಗಿಲ್ಲ ಎಂದರು.
ದೇಶದ ಜನರಲ್ಲಿ ತಮ್ಮ ವೈಯುಕ್ತಿಕ ಬದುಕಿಗಾಗಿ ಬೆಳೆಯುವುದಕ್ಕಿಂತ ದೇಶಕ್ಕೋಸ್ಕರ ಬೆಳೆಯಬೇಕು ಎಂಬ ಭಾವನೆ ಮೂಡುವಂಥ ವಾತಾವರಣ ನಿರ್ಮಾಣವಾಗಬೇಕಿದೆ ಎಂದು ಅವರು ಹೇಳಿದರು.
ಇಂದಿನ ಯುವಜನತೆ ಬುದ್ಧ, ಬಸವಣ್ಣ, ಅಂಬೇಡ್ಕರ್, ಕುವೆಂಪು ಇನ್ನು ಮುಂತಾದ ಆದರ್ಶ ಪುರುಷರ ಮಾನವತಾ ವಾದವನ್ನು ಮೈಗೂಡಿಸಿಕೊಳ್ಳಬೇಕು ಎಂದು ನುಡಿದರು.
ಕುವೆಂಪು ವಿಶ್ವವಿದ್ಯಾಲಯದ ಅಂಬೇಡ್ಕರ್ ಅಧ್ಯಯನ ಹಾಗೂ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ.ರವೀಂದ್ರ ಗಡ್ಕರ್ ಮಾತನಾಡಿ, ಅಂಬೇಡ್ಕರ್ ಅವರು ಬದುಕಿನಲ್ಲಿ ಅಳವಡಿಸಿಕೊಂಡಿದ್ದ ಸಾಮಾಜಿಕ ಕಳಕಳಿಗಳು ವಿಶ್ವಕ್ಕೆ ದಾರಿ ದೀಪವಾಗಿದೆ. ಶೀಲ, ಕರುಣೆ, ಜ್ಞಾನ, ಅಂಬೇಡ್ಕರ್ ಬದುಕಿನ ಪ್ರಮುಖ ಅಂಶಗಳು. ಮಾನವ ಸಂಪನ್ಮೂಲ ಸಮರ್ಪಕವಾಗಿ ಬಳಸಿಕೊಳ್ಳುವುದು ಅಂಬೇಡ್ಕರ್ ಚಿಂತನೆಯ ಭಾಗವಾಗಿದೆ ಎಂದು ಅವರು ತಿಳಿಸಿದರು.
ಕೆಪಿಸಿ ಅಧೀಕ್ಷಕ ಎಂಜಿನಿಯರ್ ಕೆ.ವಿ. ಚನ್ನವೀರಪ್ಪ, ಸಿಬ್ಬಂದಿ ಅಧಿಕಾರಿ ಎಸ್.ಆರ್ ಖೇಣಿಕರ್, ಪರಿಶಿಷ್ಟ ಜಾತಿ ಪಂಗಡದ ನೌಕರರ ಸಂಘದ ಅಧ್ಯಕ್ಷ ಪುಟ್ಟ ಮಾತನಾಡಿದರು. ಬಡಮಕ್ಕಳಿಗೆ ನೋಟ್‌ಪುಸ್ತಕವನ್ನು ನೌಕರರ ಸಂಘದ ವತಿಯಿಂದ ವಿತರಿಸಲಾಯಿತು.
ಕೆಪಿಸಿ ಉದ್ಯೋಗಿಗಳಾದ ಗೌರಮ್ಮ ಪ್ರಾರ್ಥಿಸಿದರು. ಮಾದಪ್ಪ ಸ್ವಾಗತಿಸಿದರು. ಶ್ರೀಪಾದ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿ.ಎಸ್. ಯಶೋಧರ ಇಂದ್ರಜೈನ್ ಕಾರ್ಯಕ್ರಮ ನಿರೂಪಿಸಿದರು.
ಸಿ.ಆರ್. ಪಾಟೀಲ್ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.