ADVERTISEMENT

ಜೀತ ಪದ್ಧತಿ ದೂರವಿಟ್ಟ ದಿಟ್ಟೆ ಇಂದಿರಾ: ಕಾಗೋಡು ತಿಮ್ಮಪ್ಪ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2017, 5:30 IST
Last Updated 29 ನವೆಂಬರ್ 2017, 5:30 IST

ರಿಪ್ಪನ್‌ಪೇಟೆ: ರಾಷ್ಟ್ರದಲ್ಲಿ ಜೀತ ಪದ್ಧತಿಯನ್ನು ದೂರವಿಟ್ಟ ದಿಟ್ಟ ಮಹಿಳೆ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಬಣ್ಣಿಸಿದರು. ಪಟ್ಟಣದ ಜಿಎಸ್‌ಬಿ ಸಮಾಜದಲ್ಲಿ ಮಂಗಳವಾರ ಏರ್ಪಡಿಸಿದ್ದ ಇಂದಿರಾ ಗಾಂಧಿ ಅವರ 100ನೇ ಜನ್ಮದಿನದ ನೆನಪು ಕಾರ್ಯಕ್ರಮದಲ್ಲಿ ತಮ್ಮ ಗತಕಾಲದ ನೆನಪು ಬಿಟ್ಟಿಟ್ಟರು.

‘1973ರಲ್ಲಿ ಉಳುವವವೇ ಹೊಲದೊಡೆಯ ಎಂಬ ಮಸೂದೆ ಜಾರಿಗೆ ತರುವ ಮೂಲಕ ಶ್ರಮದ ಬದುಕಿಗೆ ಆಸರೆಯಾದರು. ಇದೇ ರೈತರಿಗೆ ಭೂಮಿ ಹಕ್ಕು ಕೊಡಿಸಿದ್ದು ಕಾಂಗ್ರೆಸ್‌’ ಎಂದು ಹೇಳಿದರು. ‘ಹಿಂದುಳಿದ ವರ್ಗಕ್ಕೆ ಮೀಸಲಾತಿ ನೀಡಿ ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಸಮಾಜದ ಮುಖ್ಯ ವಾಹಿನಿಗೆ ಕರೆ ತಂದಿರುವುದು ಪಕ್ಷದ ಸಾಧನೆ’ ಎಂದರು.

‘1972ರಲ್ಲಿ ವಿಧಾನ ಸಭೆಯಲ್ಲಿ ಮೀಸಲಾತಿ ಬೇಕು ಎಂಬ ವಿಚಾರವಾಗಿ ಸತತ ಮೂರು ಗಂಟೆ ಚರ್ಚೆ ಮಾಡಿ ಮಸೂದೆ ಜಾರಿಗೆ ಒತ್ತಾಯಿಸಿದ್ದೇನೆ. ಪಕ್ಷದ ಕಾರ್ಯಕರ್ತರಲ್ಲಿ ಸೈದ್ಧಾಂತಿಕ ಬದ್ಧತೆ ಇರಬೇಕು. ಎಂದಿಗೂ ಸಮಾಜ ಕಟ್ಟುವ ಕೆಲಸ ನಮ್ಮದು, ಒಡೆಯುವುದಲ್ಲ. ಇದನ್ನು ಕಾರ್ಯಕರ್ತರು ಅರಿಯಬೇಕು’ ಎಂದು ಸಲಹೆ ನೀಡಿದರು.

ADVERTISEMENT

‘ಅಳುಕು– ಅಂಜಿಕೆ ಬಿಟ್ಟು ಪಕ್ಷದ ಸಂಘಟನೆಯಲ್ಲಿ ತೊಡಗಿಕೊಳ್ಳಬೇಕು. ತೊಟ್ಟಿಲನ್ನು ತೂಗುವ ಕೈಗೆ ರಾಷ್ಟ್ರವನ್ನೇ ತೂಗುವ ಸಾಮರ್ಥ್ಯವಿದೆ ಎಂಬುದನ್ನು ಮನಗಾಣಬೇಕು. ಬಸುರಿ ಹೆಂಡತಿಯನ್ನು ಕಾಡಿಗೆ ಬಿಟ್ಟ ರಾಮ ಎಂದಿಗೂ ಈ ದೇಶಕ್ಕೆ ಆದರ್ಶವಲ್ಲ. ತಾಯಿ ಮಮತೆ ಹೃದಯದಲ್ಲಿ ಬರಬೇಕು. ಇದು ಜನತೆಗೆ ತಲುಪಬೇಕು’ ಎಂದು ಕಾರ್ಯಕರ್ತರನ್ನು ಹುರಿದುಂಬಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ತಿ,ನಾ.ಶ್ರೀನಿವಾಸ, ವಿಧಾನ ಪರಿಷತ್‌ ಸದಸ್ಯ ಪ್ರಸನ್ನ ಕುಮಾರ್‌, ಜಿಲ್ಲಾ ಪಂಚಾಯ್ತಿ ಸದಸ್ಯರಾದ ಶ್ವೇತಾ ಆರ್‌. ಬಂಡಿ, ಕಲಗೋಡು ರತ್ನಾಕರ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ವಾಸಪ್ಪಗೌಡ, ಉಪಾಧ್ಯಕ್ಷೆ ಸುಶೀಲ ರಘುಪತಿ, ಸದಸ್ಯರಾದ ಎನ್‌.ಚಂದ್ರೇಶ್‌, ಸದಸ್ಯ ಚಂದ್ರಮೌಳ , ಶಕುಂತಳಾ ರಾಮಚಂದ್ರ, ಬಗರ್‌ಹುಕುಂ ಸಮಿತಿ ಅಧ್ಯಕ್ಷ ಏರಿಗೆ ಉಮೇಶ, ಎಪಿಎಂಸಿ ಅಧ್ಯಕ್ಷ ಬಿ.ಪಿ. ರಾಮಚಂದ್ರ, ಹಿಂದುಳಿದ ವರ್ಗದ ಸಂಚಾಲಕ ಮೋಹನ್‌ ಗ್ರಾಮ ಪಂಚಾಯ್ತಿ ಸದಸ್ಯರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.