ಕಾರ್ಗಲ್: ವಿಶ್ವವಿಖ್ಯಾತ ಜೋಗ ಜಲಪಾತ ಪ್ರದೇಶದಲ್ಲಿ ಪ್ಲಾಸ್ಟಿಕ್ ಬಾಟಲಿಗಳನ್ನು ಜೋಗ್ ಅಭಿವೃದ್ಧಿ ಪ್ರಾಧಿಕಾರದ ಗೇಟಿನ ಒಳಭಾಗಕ್ಕೆ ತರಲು ರೂ100 ಎಚ್ಚರಿಕೆ ಹಣವನ್ನು ಪ್ರವಾಸಿಗರು ಪಾವತಿಸಲು ಸಾಗರ ಉಪ ವಿಭಾಗಾಧಿಕಾರಿ ಹೊರಡಿಸಿರುವ ಆದೇಶವನ್ನು ಮರುಪರಿಶೀಲನೆ ಮಾಡಬೇಕು ಎಂದು ಪಟ್ಟಣ ಪಂಚಾಯ್ತಿ ಸದಸ್ಯ ಎಸ್.ಎಲ್. ರಾಜ್‌ಕುಮಾರ್ ಆಗ್ರಹಿಸಿದ್ದಾರೆ.
ಉಪ ವಿಭಾಗಾಧಿಕಾರಿ ಹೊರಡಿಸಿರುವ ಆದೇಶದಿಂದ ಪ್ರವಾಸಿಗರಿಗೆ ವಿಶೇಷವಾಗಿ ಶಾಲಾ ಮಕ್ಕಳಿಗೆ ತೊಂದರೆಯಾಗುತ್ತದೆ. ಅಲ್ಲದೇ ಪ್ರವೇಶದ್ವಾರದ ಒಳಭಾಗದಲ್ಲಿ ಇರುವ ವಾಣಿಜ್ಯ ಸಂಕೀರ್ಣದ ಮಳಿಗೆಗಳಲ್ಲಿ ಬಾಡಿಗೆ ಇರುವ ವ್ಯಾಪಾರಿಗಳಿಗೆ ಮತ್ತು ಪ್ರವಾಸೋದ್ಯಮ ಇಲಾಖೆಯ ಹೋಟೆಲ್‌ಗಳಿಗೆ ಈ ಆದೇಶವನ್ನು ಪಾಲಿಸುವಲ್ಲಿ ಗೊಂದಲ ಸೃಷ್ಟಿಸುತ್ತದೆ ಎಂದು ಅವರು ತಿಳಿಸಿದರು.
ಜೋಗ್ ಅಭಿವೃದ್ಧಿ ಪ್ರಾಧಿಕಾರ ಪ್ರವಾಸಿಗರಿಂದ ಜಲಪಾತದ ವೀಕ್ಷಣೆಗೆ ಸುಂಕ ವಸೂಲಿ ಮಾಡುತ್ತಿರುವುದರಿಂದ ಹೆಚ್ಚಿನ `ಪಿಕ್‌ಮ್ಯೋನ್~ ಸಿಬ್ಬಂದಿ ನಿಯೋಜಿಸಿ ಅಲ್ಲಲ್ಲಿ ಸೂಚನಾ ಫಲಕಗಳನ್ನು ಅಳವಡಿಸಿದರೆ ಪ್ರವಾಸಿಗರಿಗೆ ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಚಿಂತನೆ ನಡೆಸಿ ಮಾಹಿತಿ ಸಂಗ್ರಹಿಸಲಿ ಎಂದು ಹೇಳಿಕೆ ನೀಡಿದ್ದಾರೆ.
ಜೋಗ ಜಲಪಾತದ ಮುಂಭಾಗದಲ್ಲಿ ಭದ್ರತಾ ಕಾಂಪೌಂಡ್‌ಗಳು ಉದುರಿ ಬಿದ್ದು, ಎರಡು ತಿಂಗಳುಗಳೇ ಕಳೆದಿದ್ದು ಕೂಡಲೇ ಇದನ್ನು ದುರಸ್ತಿಪಡಿಸಿ ಪ್ರವಾಸಿಗರಿಗೆ ಒದಗಬಹುದಾದ ಅನಾಹುತಗಳನ್ನು ತಪ್ಪಿಸಬೇಕು ಎಂದು ಅಭಿವೃದ್ಧಿ ಪ್ರಾಧಿಕಾರವನ್ನು ಅವರು ಒತ್ತಾಯಿಸಿದ್ದಾರೆ.
ಜೋಗ ನಿರ್ವಹಣೆ ಪ್ರಾಧಿಕಾರ ವ್ಯಾಪ್ತಿಯಲ್ಲಿ ಬರುವ ಜೋಗ ಜಲಪಾತದ ಹತ್ತಿರ ಪ್ಲಾಸ್ಟಿಕ್ ತ್ಯಾಜ್ಯ ವಸ್ತುಗಳ ಉಪಯೋಗಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸಾಗರ ಉಪ ವಿಭಾಗಾಧಿಕಾರಿ ಮತ್ತು ಪ್ರಾಧಿಕಾರದ ಕಾರ್ಯದರ್ಶಿ ಡಾ.ಪ್ರವೀಣ್‌ಕುಮಾರ್ ಹೊರಡಿಸಿರುವ ಆದೇಶದಲ್ಲಿ ಪ್ಲಾಸ್ಟಿಕ್ ಚೀಲ, ವಸ್ತುಗಳ ಬಳಕೆ ಹಾಗೂ ಮಾರಾಟವನ್ನು ಸಂಪೂರ್ಣವಾಗಿ ಷರತ್ತಿಗೊಳಪಟ್ಟು ನಿಷೇಧಿಸಲಾಗಿದೆ.
ಪ್ರವಾಸಿಗರು ನೀರಿನ ಬಾಟಲ್‌ಗಳನ್ನು ಪ್ರವೇಶ ದ್ವಾರದ ಮೂಲಕ ತೆಗೆದುಕೊಂಡು ಹೋಗಲು ಹಾಗೂ ಖಾಲಿಯಾದ ಬಾಟಲ್‌ಗಳನ್ನು ತರುವ ಬಗ್ಗೆ 1 ಬಾಟಲಿಗೆ ರೂ 100 ಹಾಗೂ ಶಾಲಾ ಮಕ್ಕಳು ಪ್ರವಾಸಕ್ಕೆ ಬಂದಾಗ 1 ವಾಹನಕ್ಕೆ ರೂ 500ರಂತೆ ನಿಗದಿತ ಎಚ್ಚರಿಕೆ ಹಣ ಪಾವತಿಸಿ ಟೋಕನ್ ಪಡೆದು ನಂತರ ಖಾಲಿ ಬಾಟಲ್‌ಗಳನ್ನು ವಾಪಸ್ ನೀಡಿ ಕಾವಲುಗಾರರ ಬಳಿ ಇರುವ ಕಸದ ಬುಟ್ಟಿಗೆ ಹಾಕಿ, ಟೋಕನ್ ಹಿಂತಿರುಗಿಸಿ ಠೇವಣಿ ನೀಡಲಾದ ಮೊಬಲಗನ್ನು ಹಿಂದಕ್ಕೆ ಪಡೆಯುವುದು ಎಂಬ ಷರತ್ತು ಆದೇಶದಲ್ಲಿ ವಿಧಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.