ಹೊಸನಗರ: ವೈದ್ಯರಿಲ್ಲದೇ ಸೂಕ್ತಚಿಕಿತ್ಸೆ ದೊರಕದ ಕಾರಣ ಹಸುಗೂಸು ಸಾವಿಗೀಡಾದ ಹಿನ್ನೆಲೆಯಲ್ಲಿ ಜಿಲ್ಲಾವೈದ್ಯಾಧಿಕಾರಿಗೆ ದಿಗ್ಬಂಧನ ಹಾಕಿ, ಕಚೇರಿಗೆ ಬೀಗಜಡಿದು ಪ್ರತಿಭಟನೆ ನಡೆಸಿದ ಘಟನೆ ಸೋಮವಾರ ನಡೆದಿದೆ.
ಭಾನುವಾರ ಹೆರಿಗೆಗೆ ಬಂದಿದ್ದ ತ್ರಿಣಿವೆ ಗ್ರಾ.ಪಂ. ವ್ಯಾಪ್ತಿಯ ತೊಗರೆ ಗ್ರಾಮದ ಬಡ ಮಹಿಳೆಗೆ ಪ್ರಸೂತಿ ತಜ್ಞರಿಲ್ಲದ ಕಾರಣ ಸೂಕ್ತ ಚಿಕಿತ್ಸೆ ದೊರಕದೇ ಹಸುಗೂಸು ಅಸು ನೀಗಿದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಸಾರ್ವಜನಿಕರು ತಾಲ್ಲೂಕು ವೈದ್ಯಾಧಿಕಾರಿ ಕಚೇರಿ ತಪಾಸಣೆಗೆ ಬಂದಿದ್ದ ಜಿಲ್ಲಾ ವೈದ್ಯಾಧಿಕಾರಿ ಡಾ.ಚೆನ್ನಬಸಪ್ಪ ಅವರನ್ನು ಕೊಠಡಿಯಲ್ಲಿ ಕೂಡಿ ಹಾಕಿ, ಬೀಗ ಜಡಿದು ಪ್ರತಿಭಟನೆ ನಡೆಸಿದರು.
ಸಾರ್ವಜನಿಕ ಆಸ್ಪತ್ರೆಯಲ್ಲಿ ಈ ಸೇವೆಯಲ್ಲಿದ್ದ ಮಹಿಳಾ ವೈದ್ಯೆ ಈಚೆಗೆ ನಿವೃತ್ತರಾಗಿ ತಿಂಗಳು ಕಳೆದಿದೆ. 10ಕ್ಕೂ ಹೆಚ್ಚು ವೈದ್ಯರು ಇರಬೇಕಾದ ಆಸ್ಪತ್ರೆಯಲ್ಲಿ ಕೇವಲ ಇಬ್ಬರು ವೈದ್ಯರಿದ್ದಾರೆ. ಅವರು ರಜೆ ಹೋದರೆ ದೇವರೆ ಗತಿ ಎಂದು ಅವರು ದೂರಿದರು.
ತಾಲ್ಲೂಕು ವೈದ್ಯರಿಂದ ಕೇವಲ ಮಾಮೂಲಿ ವಸೂಲಿಗೆ ಬರುತ್ತೀರಾ. ಆಸ್ಪತ್ರೆಯಲ್ಲಿ ವೈದ್ಯರಿಲ್ಲ. ವೈದ್ಯರನ್ನು ನೇಮಕ ಮಾಡುವ ಬಗ್ಗೆ ಏನು ಕ್ರಮ ತೆಗೆದುಕೊಂಡಿದ್ದೀರಾ? ಎಂದು ಪ್ರತಿಭಟನಾಕಾರರು ಪ್ರಶ್ನೆಯ ಸುರಿಮಳೆ ಮಾಡಿ ಜಿಲ್ಲಾ ವೈದ್ಯಾಧಿಕಾರಿಗೆ ಮುತ್ತಿಗೆ ಹಾಕಿ ತರಾಟೆಗೆ ತೆಗೆದುಕೊಂಡರು.
ಆಸ್ಪತ್ರೆಯಲ್ಲಿ ವೈದ್ಯರಿಲ್ಲದೇ ಮಗು ಮೃತಪಟ್ಟರೂ ಹೊಸನಗರದಲ್ಲಿದ್ದ ಶಾಸಕ ಗೋಪಾಲಕೃಷ್ಣ ಬೇಳೂರು ಆಸ್ಪತ್ರೆಯ ಕಡೆ ಗಮನ ನೀಡಿಲ್ಲ. ಗುದ್ದಲಿಪೂಜೆ, ಉದ್ಘಾಟನೆ ನೆಪದಲ್ಲಿ ಕುರಿ ಊಟ ಹಾಕಿಸುವಲ್ಲಿ ಮಗ್ನರಾಗಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು.
ಪ್ರತಿಭಟನೆಯಲ್ಲಿ ಪಟೇಲ್ ಗರುಡಪ್ಪ ಗೌಡ, ಮುಖಂಡರಾದ ಏರಗಿ ಉಮೇಶ್, ಡಿ.ಎಂ. ರತ್ನಾಕರ ಶೆಟ್ಟಿ, ಗುಬ್ಬಿಗಾ ಅನಂತರಾವ್, ಕಾಡುವಳ್ಳಿ ಸತೀಶ್, ಟೀಕಪ್ಪ, ಕೋಡೂರು ಚಂದ್ರಮೌಳಿ, ಹಾಲಗದ್ದೆ ಉಮೇಶ್, ಜೆಡಿಎಸ್ ಮುಖಂಡ ಬಿ.ಜಿ. ನಾಗರಾಜ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.