ADVERTISEMENT

ತೀರ್ಥಹಳ್ಳಿ: ವೈದ್ಯರ ಕೊರತೆ-ರೋಗಿಗಳ ಪರದಾಟ

​ಪ್ರಜಾವಾಣಿ ವಾರ್ತೆ
Published 4 ಜೂನ್ 2011, 6:25 IST
Last Updated 4 ಜೂನ್ 2011, 6:25 IST

ತೀರ್ಥಹಳ್ಳಿ: ಐದು ವರ್ಷಗಳಿಂದ ಇಲ್ಲಿನ ಸರ್ಕಾರಿ ಜಯಚಾಮ ರಾಜೇಂದ್ರ ಆಸ್ಪತ್ರೆಯಲ್ಲಿ ತಜ್ಞ ವೈದ್ಯರಿಲ್ಲದೇ ರೋಗಿಗಳು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಆಸ್ಪತ್ರೆಯಲ್ಲಿ ತಜ್ಞ ವೈದ್ಯರಿಲ್ಲದೇ ಇರುವುದರಿಂದ ಸಣ್ಣಪುಟ್ಟ ಕಾಯಿಲೆಗಳನ್ನು ಪರೀಕ್ಷಿಸಿಕೊಳ್ಳಲು,
 
ಸಲಹೆ ಪಡೆಯಲು ಇತರೆ ವಿಷಯ ತಜ್ಞ ವೈದ್ಯರನ್ನು ಸಂಪರ್ಕಿಸಬೇಕಾದ ಅನಿವಾರ್ಯತೆ ರೋಗಿಗಳಿಗೆ ಎದುರಾಗಿದೆ. ಇದರಿಂದಾಗಿ ಸಲಹೆ ನೀಡಬಾರದ ರೋಗಕ್ಕೂ ಅನಿವಾರ್ಯವಾಗಿ ಸಲಹೆ ನೀಡಿ ಚಿಕಿತ್ಸೆ ಕೊಡಬೇಕಾದ ಸಂದರ್ಭ ಇತರರಿಗೆ ಕಿರಿಕಿರಿಗೆ ಕಾರಣವಾಗಿದೆ ಎನ್ನಲಾಗಿದೆ.
 
ಕಿವಿ, ಮೂಗು, ಗಂಟಲು, ಮೂಳೆ ತಜ್ಞರು, ಮಕ್ಕಳ ವೈದ್ಯರು ಜ್ವರ, ಶೀತ, ತಲೆನೋವು, ಹೊಟ್ಟೆನೋವಿನಿಂದ ಬಳಲುತ್ತಿರುವ ರೋಗಿಗಳಿಗೆ ಚಿಕಿತ್ಸೆ ನೀಡಬೇಕಾಗಿದೆ. ತಜ್ಞ ವೈದ್ಯರಿಲ್ಲದ ಕಾರಣ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರು ತಜ್ಞ ವೈದ್ಯರು ನೀಡಬೇಕಾದ ಚಿಕಿತ್ಸೆಯನ್ನು ನೀಡುತ್ತಾ ಬರುವಂತಾಗಿದೆ ಎಂದು ಸಾರ್ವಜನಿಕರು ದೂರುತಾರೆ.
 
2006ರವರೆಗೆ ತಜ್ಞ ವೈದ್ಯರಾಗಿ  ಸೇವೆ ಸಲ್ಲಿಸಿ ವರ್ಗಾವಣೆಗೊಂಡ ಡಾ.ರಾಜಣ್ಣ ಅವರ ನಂತರ ಇಲ್ಲಿಯವರೆಗೂ ಇತರರ ನೇಮಕ ಆಗಿಲ್ಲ. ಪ್ರತಿ ನಿತ್ಯ ಆಸ್ಪತ್ರೆಗೆ ಬರುವ ರೋಗಿಗಳು ತಜ್ಞ ವೈದ್ಯರು ಇಲ್ಲದ ಕಾರಣ ಖಾಸಗಿ ವೈದ್ಯರ ಬಳಿ ಹೋಗಿ ಪರೀಕ್ಷೆ ಮಾಡಿಸಿಕೊಳ್ಳಬೇಕಾಗಿದೆ.

ಸರ್ಕಾರಿ ಆಸ್ಪತ್ರೆಯಲ್ಲಿ ಎಲ್ಲಾ ಬಗೆಯ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಲಾಗಿದ್ದರೂ ವೈದ್ಯರಿಲ್ಲದೇ ಆಸ್ಪತ್ರೆ ಸೊರಗುವಂತಾಗಿದೆ ಎಂಬುದು ಸಾರ್ವಜನಿಕರ ದೂರು.ಆಸ್ಪತ್ರೆಯಲ್ಲಿ ಒಟ್ಟು 26 ವಿವಿಧ ಹುದ್ದೆಗಳು ಖಾಲಿ ಇದ್ದು, ಸುಗಮವಾಗಿ ಸಾರ್ವಜನಿಕರಿಗೆ ಸೇವೆ ಒದಗಿಸಲು ಸಾಧ್ಯವಾಗುತ್ತಿಲ್ಲ. ಇರುವ ಸಿಬ್ಬಂದಿಗಳ ಮೇಲೆ ಒತ್ತಡ ಹೆಚ್ಚಾಗುತ್ತಿದೆ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ಕಿರಣ್ ಹೇಳುತ್ತಾರೆ.
 
ತಜ್ಞ ವೈದ್ಯ ಒಂದು ಹುದ್ದೆ , ಫಿಜಿಯೋತೆರಪಿಸ್ಟ್ 1, ಡೆಂಟಿಸ್ಟ್ 1, ಪ್ರಸೂತಿ ತಜ್ಞ1, ಗುಮಾಸ್ತರ ಹುದ್ದೆ 2, ಸೀನಿಯರ್ ಲ್ಯಾಬ್ ಟೆಕ್ನೀಷಿಯನ್ 1, ಸ್ಟಾಫ್ ನರ್ಸ 4 ಹುದ್ದೆಗಳು ಖಾಲಿ ಇದ್ದು, 9 ಗ್ರೂಪ್ `ಡಿ~ ನೌಕರರ ಕೊರತೆ ಇದೆ ಎನ್ನುತ್ತಾರೆ ಡಾ.ಕಿರಣ್.

ಇದರಿಂದಾಗಿ ಮಲೆನಾಡಿನಲ್ಲಿ ಸಾಮಾನ್ಯವಾಗಿ ಜನರಿಗೆ ಬಾಧಿಸುವ ಜ್ವರ, ಶೀತ, ಮೈಕೈ ನೋವು, ರಕ್ತದೊತ್ತಡ, ಮಧುಮೇಹ, ಅಸ್ತಮಾ, ಹೃದಯ ಸಂಬಂಧಿ ಕಾಯಿಲೆ, ಶ್ವಾಸಕೋಶ, ಮೂತ್ರಕೋಶ, ಮೆದುಳಿಗೆ ಅನ್ವಯಿಸುವ ರೋಗಗಳಿಗೆ ತುರ್ತು ಚಿಕಿತ್ಸೆ ನೀಡಿ ನಿರ್ವಹಿಸುವ ವೈದ್ಯರ ಕೊರತೆ ಆಸ್ಪತ್ರೆಯಲ್ಲಿ ಎದ್ದು ಕಾಣುವಂತಾಗಿದೆ. 

ಕೇವಲ ಮಾತ್ರೆ, ಔಷಧಿ ಪಡೆಯುವ ಮೂಲಕ ಚಿಕಿತ್ಸೆ ಪಡೆಯುವ ರೋಗಿಗಳು ಹೆಚ್ಚಾಗಿ ಆಸ್ಪತ್ರೆಗೆ ಬರುವುದರಿಂದ ಈ ವಿಭಾಗಕ್ಕೆ ಬೇಕಾದ ವೈದ್ಯರು ಸೇವೆಯಲ್ಲಿ ಇಲ್ಲದೇ ಇರುವುದರಿಂದ ಸಮಸ್ಯೆ ಹೆಚ್ಚಾಗಿದೆ.

5-6 ವರ್ಷಗಳಿಂದ ಪ್ರಸೂತಿ ತಜ್ಞರಾಗಿ ಸೇವೆ ಸಲ್ಲಿಸಿದ ಡಾ.ಮನೋಹರ್ ವರ್ಗಾವಣೆಯ ನಂತರ ತಾತ್ಕಾಲಿಕವಾಗಿ ಈ ಜಾಗಕ್ಕೆ ಡಾ.ಸುಮಾ ಅವರನ್ನು ನೇಮಕಗೊಳಿಸಲಾಗಿದೆ. ಇದರಿಂದ ಕೊಂಚ ಸುಧಾರಣೆ ಕಂಡುಬಂದರೂ ಆಸ್ಪತ್ರೆಗೆ ಖಾಯಂ ಪ್ರಸೂತಿ ತಜ್ಞರ ಅವಶ್ಯಕತೆ ಹೆಚ್ಚಿದೆ.

ಪ್ರಸೂತಿ ಹಾಗೂ ತಜ್ಞ ವೈದ್ಯರ ನೇಮಕ ತಕ್ಷಣ ಆಗಬೇಕು ಎಂದು ಸಾರ್ವಜನಿಕರು ಒತ್ತಾಯಿಸುತ್ತಲೇ ಬಂದಿದ್ದರೂ ಈ ವರೆವಿಗೂ ವೈದ್ಯರ ನೇಮಕವಾಗಿಲ್ಲ.

ತಾಲ್ಲೂಕು ಪಂಚಾಯ್ತಿ ಸಾಮಾನ್ಯ ಸಭೆ ಹಾಗೂ ಪ್ರಗತಿ ಪರಿಶೀಲನಾ ಸಭೆಗಳಲ್ಲಿ ಸಿಬ್ಬಂದಿ ಕೊರತೆ ಬಗ್ಗೆ ಚರ್ಚೆಗಳು ನಡೆದವೇ ಹೊರತು ಪರಿಹಾರ ಸಿಕ್ಕಿಲ್ಲ. ಜನಪ್ರತಿನಿಧಿಗಳು ಸಾರ್ವಜನಿಕರ ಸಮಸ್ಯೆಗಳಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ದೂರುತ್ತಾರೆ ಸಾರ್ವಜನಿಕರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.