ADVERTISEMENT

ತುಂಗೆಯಲ್ಲಿ ತೇಲಿದ ಮಹಿಳೆಯರು

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2011, 9:00 IST
Last Updated 5 ಆಗಸ್ಟ್ 2011, 9:00 IST
ತುಂಗೆಯಲ್ಲಿ ತೇಲಿದ ಮಹಿಳೆಯರು
ತುಂಗೆಯಲ್ಲಿ ತೇಲಿದ ಮಹಿಳೆಯರು   

ಶಿವಮೊಗ್ಗ: ಕೆಲವು ದಿನಗಳ ಹಿಂದೆ ಪುರುಷ ಜಲಸಾಹಸಿಗರು ಮತ್ತೂರಿನಿಂದ ಶಿವಮೊಗ್ಗದವರೆಗೆ ತುಂಗಾನದಿಯಲ್ಲಿ ರ‌್ಯಾಫ್ಟಿಂಗ್ ಮಾಡಿದ್ದರೆ, ಗುರುವಾರ ಮಹಿಳೆಯರು ತುಂಬಿದ ನದಿಯಲ್ಲಿ ತೇಲಿ, ಸಾಹಸ ಮೆರೆದರು.

ಸಾಹಸ ಮತ್ತು ಸಂಸ್ಕೃತಿ ಅಕಾಡೆಮಿ ಹಾಗೂ ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಜಂಟಿಯಾಗಿ ಆಯೋಜಿಸಿದ್ದ ಈ ಜಲಸಾಹಸದಲ್ಲಿ ಮಹಿಳೆಯರು ಪಾಲ್ಗೊಂಡಿದ್ದರು. ತಂಡದಲ್ಲಿ ಎಂಟು ಜನ ಮಹಿಳೆಯರು, 2 ಮಕ್ಕಳಿದ್ದರು.

ಬೆಳಿಗ್ಗೆ 11.15ಕ್ಕೆ ಸುಮಾರಿಗೆ ಮತ್ತೂರಿನಿಂದ ಹೊರಟ ಈ ತಂಡ ಮಧ್ಯಾಹ್ನ 1.15ಕ್ಕೆ ಶಿವಮೊಗ್ಗ ನಗರದ ಮಂಟಪದ ಬಳಿ ಬಂದು ತಲುಪಿತು.

`ಇದು ಮರೆಯಲಾಗದ ಅನುಭವ. ಆರಂಭದಲ್ಲಿ ಸ್ವಲ್ಪ ಹೆದರಿಕೆ ಆಯಿತು. ಒಂದು ಕಿ.ಮೀ. ದಾಟುತ್ತಿದ್ದಂತೆ ಭಯ ಹೋಯ್ತು. ಮಧ್ಯದಲ್ಲಿ ಇಳಿದು ಈಜು ಮಾಡಿದೆವು. ಒಮ್ಮೆ ರ‌್ಯಾಫ್ಟ್ ಬಂಡೆಗೆ ಬಡಿದು, ಅಲುಗಾಡಿದಾಗ ಕೂಗಿಕೊಂಡಿವು. ಆದರೆ, ಇದಾದ ಮೇಲೆ ಇನ್ನೂ ಖುಷಿ ಆಯಿತು. ನಿಜಕ್ಕೂ ಇದು ಅವಿಸ್ಮರಣೀಯ~ ಎನ್ನುತ್ತಾರೆ ತಂಡದಲ್ಲಿದ್ದ ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್‌ನ ಆನ್ಸ್ ಅಧ್ಯಕ್ಷೆ ಎ.ಬಿ. ಜಯಶ್ರೀ ಗಿರೀಶ್.

`ತುಂಗಾ ನದಿಯಲ್ಲಿ ರ‌್ಯಾಫ್ಟಿಂಗ್ ಮಾಡುವುದು ಹಲವು ವರ್ಷಗಳ ಕನಸಾಗಿತ್ತು. ಪ್ರತಿ ವರ್ಷ ಪುರುಷರೇ ಹೋಗುತ್ತಿದ್ದರು. ಆಸೆ ಇದ್ದರೂ ಒಂದು ಮಹಿಳಾ ತಂಡವಾಗಿ  ಸಾಧ್ಯವಾಗಿರಲಿಲ್ಲ. ಈ ಬಾರಿ ಅದು ಕೈಗೂಡಿತು~ ಎನ್ನುತ್ತಾರೆ ಅವರು.

ತಂಡದಲ್ಲಿ ತನುಜಾ ಗುರುಮೂರ್ತಿ, ವಾಣಿ ಪ್ರವೀಣ್, ಅಕ್ಷತಾ, ಲಕ್ಷ್ಮೀ, ಅನುರಾಧಾ ಪಾಟೀಲ್, ರೇಖಾ ಅಶ್ವಥ್‌ನಾರಾಯಣ್, ಆಕರ್ಷಣ್, ಅಭಿನಂದನ್ ಇದ್ದರು.

ಮಹಿಳೆಯರ ಈ ಜಲಸಾಹಸಕ್ಕೆ ಸಾಹಸ ಅಕಾಡೆಮಿಯ ಹರೀಶ್ ಪಾಟೀಲ್, ದೊರೈ, ಮಹೇಶ್ ಮತ್ತು ಮನೋಜ್ ಮಾರ್ಗದರ್ಶನ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.