ADVERTISEMENT

ದೇವರ ಹೆಸರಿನಲ್ಲಿ ಮುಗ್ಧರನ್ನು ತುಳಿಯುವ ಪ್ರಯತ್ನ

ಸಾಣೇಹಳ್ಳಿಯ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಕಳವಳ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2018, 12:49 IST
Last Updated 25 ಏಪ್ರಿಲ್ 2018, 12:49 IST
ಶಿವಮೊಗ್ಗ ಕೃಷಿ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ಏರ್ಪಡಿಸಿದ್ದ ಡಾ.ಬಿ.ಆರ್‌.ಅಂಬೇಡ್ಕರ್ ಮತ್ತು ಡಾ.ಬಾಬು ಜಗಜೀವನರಾಮ್‌ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಸಾಣೇಹಳ್ಳಿಯ ಶ್ರೀ ತರಳಬಾಳು ಜಗದ್ಗುರು ಶಾಖಾಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು.
ಶಿವಮೊಗ್ಗ ಕೃಷಿ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ಏರ್ಪಡಿಸಿದ್ದ ಡಾ.ಬಿ.ಆರ್‌.ಅಂಬೇಡ್ಕರ್ ಮತ್ತು ಡಾ.ಬಾಬು ಜಗಜೀವನರಾಮ್‌ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಸಾಣೇಹಳ್ಳಿಯ ಶ್ರೀ ತರಳಬಾಳು ಜಗದ್ಗುರು ಶಾಖಾಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು.   

ಶಿವಮೊಗ್ಗ: ಪುರಾಣ, ಶಾಸ್ತ್ರ, ಪಂಚಾಂಗಗಳು ದುರ್ಬಲರನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳಲು ಮಾಡಿಕೊಂಡಿರುವ ಕಪಟ ನಾಟಕಗಳಾಗಿವೆ ಎಂದು ಹೊಸದುರ್ಗ ಸಾಣೇಹಳ್ಳಿಯ ತರಳಬಾಳು ಜಗದ್ಗುರು ಶಾಖಾಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಆರೋಪಿಸಿದರು.

ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ಏರ್ಪಡಿಸಿದ್ದ ಡಾ.ಬಿ.ಆರ್‌.ಅಂಬೇಡ್ಕರ್ ಮತ್ತು ಡಾ.ಬಾಬೂ ಜಗಜೀವನರಾಂ ಅವರ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಜನರಲ್ಲಿ ಇತಿಹಾಸ ಪ್ರಜ್ಞೆ ಗೌಣವಾಗಿದ್ದು, ಪುರಾಣ ಪ್ರಜ್ಞೆ ಅಪಾರವಾಗಿದೆ. ನಮಗೆ ಬೇಕಾಗಿರುವುದು ಇತಿಹಾಸ ಪ್ರಜ್ಞೆಯೇ ಹೊರತು ಪುರಾಣ ಪ್ರಜ್ಞೆಯಲ್ಲ. ಇತಿಹಾಸ ಹಿಂದೆ ನಡೆದ ಘಟನೆಗಳನ್ನು ದಾಖಲಿಸುತ್ತದೆ. ಆ ಇತಿಹಾಸಕ್ಕೆ ಒಂದು ಆಧಾರ ಇರುತ್ತದೆ. ಆದರೆ ಪುರಾಣಕ್ಕೆ ಯಾವುದೇ ಆಧಾರ ಇರುವುದಿಲ್ಲ. ಅದು ಕಲ್ಪನೆಯಾಗಿದೆ. ರಾಮ, ಕೃಷ್ಣ, ದ್ರೌಪದಿ, ರಾಮಾಯಣ, ಮಹಾಭಾರತ ಇವೆಲ್ಲವೂ ಪೌರಾಣಿಕ ಕಲ್ಪನೆಗಳಾಗಿವೆ. ಆದರೆ ಬುದ್ದ, ಏಸು, ಬಸವಣ್ಣ, ಅಂಬೇಡ್ಕರ್ ಇವರೆಲ್ಲರೂ ಐತಿಹಾಸಿಕ ವ್ಯಕ್ತಿಗಳಾಗಿದ್ದಾರೆ. ಮನುಷ್ಯರಾದ ನಾವು ಮಾನ್ಯತೆ ನೀಡಬೇಕಾಗಿರುವುದು ಐತಿಹಾಸಿಕ ವ್ಯಕ್ತಿಗಳಿಗೆ ಹೊರತು ಪುರಾಣ ವ್ಯಕ್ತಿಗಳಿಗೆ ಅಲ್ಲ ಎಂದು ಹೇಳಿದರು.

ADVERTISEMENT

12ನೇ ಶತಮಾನದಲ್ಲಿ ಇದ್ದಂತಹ ಶರಣರಿಗೆ ಪುರಾಣ ಕಲ್ಪನೆಯೇ ಇರಲಿಲ್ಲ. ಅವರು ಇತಿಹಾಸ ಮತ್ತು ವರ್ತಮಾನದ ಮೇಲೆ ಭವಿಷ್ಯ ಕಟ್ಟುವ ಕನಸುಗಾರರಾಗಿದ್ದರು. ಶರಣರು ತಮ್ಮ ವಚನಗಳಲ್ಲಿ ‘ಪುರಾಣವೆಂಬುದು ಪುಂಡರ ಗೋಷ್ಠಿ, ಶಾಸ್ತ್ರವೆಂಬುದು ಸಂತೆಯ ಸುದ್ದಿ, ಭಕ್ತಿ ಎಂಬುದು ತೋರಿ ಉಂಬ ಲಾಭ’ ಎಂದಿದ್ದಾರೆ. ಅಲ್ಲದೇ ಪರಂಪರೆಯಿಂದ ಬಂದ ವೇದ, ಉಪನಿಷತ್ತು, ಗೀತೆ, ಪುರಾಣ ಇವೆಲ್ಲವೂಗಳನ್ನು ಅವರು ನೇರವಾಗಿ ಟೀಕಿಸಿದ್ದಾರೆ. ಹಾಗಾಗಿ ವಿದ್ಯಾರ್ಥಿಗಳೂ ಪುರಾಣ, ಶಾಸ್ತ್ರ, ಪಂಚಾಂಗದಂತಹ ಕಪಟ ನಾಟಕಗಳಿಂದ ದೂರ ಉಳಿಯಬೇಕು’ ಎಂದು ಕರೆ ನೀಡಿದರು.

‘ಉನ್ನತ ಸ್ಥಾನದಲ್ಲಿ ಇರುವ ಜನರು ಈ ನಾಡಿನ ಮುಗ್ಧರನ್ನು ಶಾಸ್ತ್ರ, ಪಂಚಾಗ, ದೇವರ ಹೆಸರಿನಲ್ಲಿ ಅನೇಕ ವರ್ಷಗಳಿಂದ ತುಳಿಯುತ್ತಿದ್ದಾರೆ. ಇದು ದೇಶಕ್ಕೆ ಮಾರಕವಾಗಿದೆ. ಹಾಗಾಗಿಯೇ ಡಾ.ಬಿ.ಆರ್‌.ಅಂಬೇಡ್ಕರ್‌ ಇವುಗಳ ವಿರುದ್ಧವೇ ಮೊದಲು ಹೋರಾಟ ಮಾಡಿದರು. ಈ ಮೂಲಕ ಕತ್ತಲಲ್ಲಿರುವ ಜನಕ್ಕೆ ಬೆಳಕು ತೋರುವ ಪ್ರಯತ್ನ ಮಾಡಿದರು. ಅವರಿಗೆ ಅದ್ಭುತವಾದ ಛಲ, ಮನೋಬಲ ಮತ್ತು ಜ್ಞಾನವಿತ್ತು. ಹಾಗಾಗಿಯೇ ಇಂತಹ ವ್ಯಕ್ತಿಯನ್ನು ಹೋಲುವ ಮತ್ತೊಬ್ಬ ವ್ಯಕ್ತಿ ಇಡೀ ಪ್ರಪಂಚದಲ್ಲಿ ನಮಗೆ ಸಿಗುವುದಿಲ್’ಲ ಎಂದರು.

ಅಂಬೇಡ್ಕರ್ ಮತ್ತು ಬಾಬು ಜಗಜೀವನರಾಂ ಈ ನಾಡಿನ ಅದ್ಭುತ ಚೇತನಗಳು. ಪ್ರತಿಯೊಬ್ಬರಿಗೂ ಇವರು ಸ್ಫೂರ್ತಿಯ ಚಿಲುಮೆಗಳಾಗಿದ್ದಾರೆ. ಇವರ ಆದರ್ಶಗಳನ್ನು ನಾಡು ಪಾಲಿಸಿದ್ದರೇ ಇಂದು ಜಾತಿ, ಪಕ್ಷ, ಮತಗಳ ಅಂತರ ಈ ನಾಡಿನಲ್ಲಿ ಇರುತ್ತಿರಲಿಲ್ಲ. ಕೇವಲ ಸಮ ಸಮಾಜ ನಿರ್ಮಾಣದ ಕುರಿತು ಮಾತನಾಡುತ್ತಿದ್ದೇವೆಯೇ ವಿನಃ ಮಹಾನ್‌ ವ್ಯಕ್ತಿಗಳ ಆದರ್ಶಗಳನ್ನು ಅನುಷ್ಠಾನಗೊಳಿಸುವಲ್ಲಿ, ಬದುಕಿನಲ್ಲಿ ಅಳವಡಿಸಿಕೊಳ್ಳುವಲ್ಲಿ ಸೋಲುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.

ಶಿಕಾರಿಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ.ಕುಂಸಿ ಉಮೇಶ್‌ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಕುಲಪತಿ ಡಾ.ಮಂಜುನಾಥ್ ನಾಯ್ಕ್ ಅಧ್ಯಕ್ಷತೆ ವಹಿಸಿದ್ದರು. ಕುಲಸಚಿವ ಡಾ.ಪಿ.ನಾರಾಯಣಸ್ವಾಮಿ, ಶಿಕ್ಷಣ ನಿರ್ದೇಶಕ ಡಾ.ಎಂ.ಮಂಜುನಾಥ್, ವಿಸ್ತರಣಾ ನಿರ್ದೇಶಕ ಡಾ.ಟಿ.ಎಚ್.ಗೌಡ, ಡೀನ್‌ ಡಾ.ಟಿ.ಎಸ್‌.ವಾಗೀಶ್, ವಿದ್ಯಾರ್ಥಿ ಕಲ್ಯಾಣ ಡೀನ್‌ ಡಾ.ಬಿ.ಆರ್‌.ಗುರುಮೂರ್ತಿ, ದೈಹಿಕ ಶಿಕ್ಷಣ ವಿಭಾಗದ ಸಹಾಯಕ ಪ್ರಾಧ್ಯಾಪಕ ಕೆ.ವಿ.ಯುವರಾಜ್‌, ಗ್ರಂಥಪಾಲಕ ಡಾ.ಎಚ್‌.ಎಂ.ಚಿದಾನಂದಪ್ಪ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.