ADVERTISEMENT

ದೇಸಿ ಬತ್ತ, ಅಧಿಕ ಇಳುವರಿ ರಾಗಿ ಪ್ರಾತ್ಯಕ್ಷಿಕೆ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2011, 9:25 IST
Last Updated 20 ಸೆಪ್ಟೆಂಬರ್ 2011, 9:25 IST

ಶಿವಮೊಗ್ಗ: ಅಲ್ಲಿ ಹೆಚ್ಚು ಇಳುವರಿ ನೀಡುವ ರಾಗಿ ತಳಿಗಳ ಪ್ರಾತ್ಯಕ್ಷಿಕೆ ಇದೆ. ಎಲೆಚುಕ್ಕಿರೋಗ ನಿರೋಧಕ ತಳಿ ಶೇಂಗಾ ಇದೆ. 167 ದೇಸಿ ತಳಿ ಬತ್ತ, ಸಾವಯವ ಕೃಷಿಯಲ್ಲಿ ಬೆಳೆದ ಅರಿಶಿಣ, ಶುಂಠಿಗಳ ಪ್ರಾತ್ಯಕ್ಷಿಕೆಗಳಿವೆ. ಎಮು, ಕುರಿ, ಕೋಳಿ, ಮೀನು, ಸೀಗಡಿ ಪ್ರಾತ್ಯಕ್ಷಿಕೆಗಳೂ ಇವೆ.

ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ವಲಯ ಕೃಷಿ ಸಂಶೋಧನಾ ಕೇಂದ್ರ ನವಿಲೆಯಲ್ಲಿ ಹಮ್ಮಿಕೊಂಡಿರುವ ಎರಡು ದಿನಗಳ ಕೃಷಿ ಮೇಳದಲ್ಲಿ ಸೋಮವಾರ ಕಂಡ ದೃಶ್ಯಗಳಿವು.ಹೆಚ್ಚುವರಿ ಇಳುವರಿ ನೀಡುವ ಎಂ.ಎಲ್. 365 ತಳಿಯ ರಾಗಿ ತಳಿ ಖುಷ್ಕಿ ಜಮೀನಿನಲ್ಲಿ ಹುಲುಸಾಗಿ ಬೆಳೆಯುತ್ತದೆ.

ಇದು ರೋಗ ನಿರೋಧಕ ಹೊಂದಿದ್ದು, 105-110 ದಿವಸಕ್ಕೆ ಕಟಾವಿಗೆ ಬರುತ್ತದೆ. ಬರ ನಿರೋಧಕ ಗುಣವನ್ನೂ ಹೊಂದಿದೆ. ಇದನ್ನು ನವಿಲೆ ಕೃಷಿ ಸಂಶೋಧನಾ ಕೇಂದ್ರ ಈ ಬಾರಿ ಕಂಡುಹಿಡಿದಿದೆ ಎಂದು ವಿವರಿಸುತ್ತಾರೆ ಕೃಷಿ ಸಂಶೋಧನಾ ಕೇಂದ್ರದ ಸಂಯೋಜಕ ಡಾ.ಎಚ್.ಕೆ. ವೀರಣ್ಣ. 

ಅಲ್ಲದೇ, ಬೂದಿರೋಗ ನಿರೋಧಕ ಶಕ್ತಿ ಇರುವ ಮೆಣಸಿನಕಾಯಿ, ಎಲೆಚುಕ್ಕೆರೋಗ ನಿರೋಧಕ ತಳಿ ಜಿ.ಪಿ.ಬಿ.ಡಿ-4 ಶೇಂಗಾ, ಅಲಸಂದೆ, ತೊಗರಿ ಪ್ರಾತ್ಯಕ್ಷಿಕೆಗಳಿವೆ.ಹಾಗೆಯೇ ಕಣ್ಮರೆಯಾಗುತ್ತಿರುವ 167 ದೇಸಿ ಬತ್ತದ ತಳಿಗಳನ್ನು ಸಾವಯವ ಕೃಷಿಯಲ್ಲಿ ಇಲ್ಲಿ ಬೆಳೆಯಲಾಗಿದ್ದು, ತಳಿಗಳು ಒಂದಕ್ಕಿಂತ ಒಂದು ಭಿನ್ನವಾಗಿದ್ದು, ವಿವಿಧ ಗುಣಧರ್ಮ ಹೊಂದಿವೆ.

ಅಧಿಕ ಇಳುವರಿ ಕೊಡುವ `ಮೈಸೂರು ಮಲ್ಲಿಗೆ~, `ಚಿನ್ನಪೊನ್ನಿ~, `ಬಂಗಾರಗುಂಡು~, ವಿವಿಧ ಔಷಧ ಗುಣವುಳ್ಳ `ಕಯಮೆ~, `ನವರ~, `ಕೆಂಪಕ್ಕಿ~, ಸುವಾಸನೆ ಬೀರುವ `ಗಂಧಸಾಲೆ~, `ಬಾಸುಮತಿ~, `ಪರಿಮಳಸಣ್ಣ~, ಕಪ್ಪುತೆನೆಯ `ಹುಗ್ಗಿಬತ್ತ~, ಅಳೆತ್ತರ ಬೆಳೆಯುವ `ಕಿಚಡಿಸಾಂಬ~, ಉತ್ತರಪ್ರದೇಶದಿಂದ ತಂದಿರುವ `ನಜರ್‌ಬಾದ್~ ಎಂಬ ವಿಶೇಷ ತಳಿಯ ಬತ್ತಗಳು ಗಮನ ಸೆಳೆಯುತ್ತಿದೆ.

ಹಾಗೆಯೇ, ವಿವಿಧ ಕಾಂಪೋಸ್ಟ್ ಗೊಬ್ಬರ, ಎರೆಹುಳು ಗೊಬ್ಬರ, ಬಯೋಡೈಜಸ್ಟರ್‌ದ ಪ್ರಾತ್ಯಕ್ಷಿಕೆ ಇದೆ. ಅಲ್ಲದೇ, ದೇಸಿ ತಳಿ ಹಳ್ಳಿಕಾರ್ ಎತ್ತುಗಳು, ಜಮುನಾಪಾರಿ ತಳಿ ಮೇಕೆ, ಕಡಿಮೆ ಕೊಂಬಿನಾಂಶ ಇರುವ ರ‌್ಯಾಂಬುಲೆಟ್ ತಳಿಯ ಕುರಿ, ಎಣ್ಣೆ ಮತ್ತು ಚರ್ಮ ಉದ್ಯಮದಲ್ಲಿ ಹೆಚ್ಚಿನ ಬೇಡಿಕೆ ಇರುವ ಎಮು ಕೋಳಿ, ಸರಳ ಮತ್ತು ಸುಲಭವಾಗಿ ಸಾಕುವ ಟರ್ಕಿ ಕೋಳಿ, ಬತ್ತದ ಗದ್ದೆಯಲ್ಲಿ ನಾಟಿಗಿಂತ ಮುಂಚೆ ಕೀಟಗಳ ಹತೋಟಿ ಮಾಡಲು ಸಹಾಯವಾಗುವ `ವೈಟ್ ಪೆಕಿಂಗ್~, `ಖಾಖಿ ಕ್ಯಾಂಪಬೆಲ್~ ಬಾತುಕೋಳಿಗಳೂ ಇವೆ.
ಅಲ್ಲದೇ, ಬಿ.ಟಿ. ಹತ್ತಿ (ಎಂಆರ್‌ಪಿ 6918) ಪ್ರಾತ್ಯಕ್ಷಿಕೆ ತಾಕು, ನವಣೆ, ಸಜ್ಜೆ ತಾಕುಗಳಿದ್ದು, ರೈತರ ಗಮನ ಸೆಳೆಯುತ್ತಿವೆ.

ರೈತರಿಗೆ ಪರಿಚಯಿಸುವ ದೃಷ್ಟಿಯಿಂದ ಈ ರೀತಿಯ ತಾಕುಗಳನ್ನು ನಿರ್ಮಿಸಲಾಗಿದೆ. ಹಾಗೆಯೇ, ಅವರಿಗೆ ಬೇಕಾದ ವಿಶೇಷ ತಳಿಗಳನ್ನು ನೀಡುವ ಉದ್ದೇಶವೂ ಈ ಕೇಂದ್ರಕ್ಕೆ ಇದೆ ಎನ್ನುತ್ತಾರೆ ರೋಗಶಾಸ್ತ್ರ ವಿಭಾಗದ ಸಂಶೋಧನಾ ಸಹಾಯಕ ಇಮ್ರಾನ್‌ಖಾನ್.

ಇವುಗಳಲ್ಲದೇ ಕೃಷಿ ಮೇಳದಲ್ಲಿ ವಿವಿಧ ತಳಿಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳನ್ನೂ ತೆರೆಯಲಾಗಿದ್ದು ರೈತರನ್ನು ಆಕರ್ಷಿಸುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.