ADVERTISEMENT

ಧರ್ಮ ಪರಿಷತ್ ಸಭೆಯಲ್ಲಿ ಶಾಸಕ ಎಚ್. ಹಾಲಪ್ಪ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2011, 6:15 IST
Last Updated 15 ಫೆಬ್ರುವರಿ 2011, 6:15 IST

ಸೊರಬ: ‘ಬ್ಯಾತನಾಳ ಯೋಜನೆ ಪ್ರಸ್ತಾವ ಸರ್ಕಾರದ ಮುಂದೆ ಇಲ್ಲ’ ಎಂದು ಶಾಸಕ ಎಚ್. ಹಾಲಪ್ಪ ಸ್ಪಷ್ಟಪಡಿಸಿದರು.ಭಾನುವಾರ ಮೂಡಿಯ ಶಿವಲಿಂಗೇಶ್ವರ ವಿರಕ್ತಮಠದಲ್ಲಿ ಶಿವಲಿಂಗೇಶ್ವರ ಸ್ಮಾರಕ ಶಿವಾನುಭವ ತತ್ವ ಪ್ರಚಾರ ಸಮಿತಿ ಹಮ್ಮಿಕೊಂಡಿದ್ದ ಭಾವೈಕ್ಯ- ಧರ್ಮ ಪರಿಷತ್ ಸಭೆಯಲ್ಲಿ ಅವರು ಮಾತನಾಡಿದರು.ದಂಡಾವತಿ ಯೋಜನೆಗೆ ಶೀಘ್ರ ಚಾಲನೆ ದೊರಕಲಿದೆ ಎಂದು ತಿಳಿಸಿದ ಅವರು, ಸಮಾಜದಲ್ಲಿ ಸೌಹಾರ್ದಯುತ ವಾತಾವರಣ ಸೃಷ್ಟಿ ಹಾಗೂ ಶೈಕ್ಷಣಿಕ ಪ್ರಗತಿಯಲ್ಲಿ ಮಠ-ಮಠಾಧೀಶರು ಮಹತ್ತರ ಪಾತ್ರ ವಹಿಸಿದ್ದಾರೆ ಎಂದು ಶ್ಲಾಘಿಸಿದರು.

ಯಾವುದೇ ಆಪಾದನೆಗಳಿಗೆ ಹೆದರುವುದಿಲ್ಲ. ಜನರ ಆಶೀರ್ವಾದ ತಮಗಿದೆ ಎಂಬುದಕ್ಕೆ ಈಚೆಗೆ ನಡೆದ ಜಿಲ್ಲಾ ಪಂಚಾಯ್ತಿ ಚುನಾವಣೆ ಫಲಿತಾಂಶವೇ ಸಾಕ್ಷಿ ಎಂದರು.ಹಾವೇರಿಯ ಜಿ.ಎಚ್. ಕಾಲೇಜು ಪ್ರಾಂಶುಪಾಲ ಡಾ.ಬಿ.ಸಿ. ಬನ್ನೂರ ಮಾತನಾಡಿ, ‘ನಾವೆಲ್ಲಾ ಒಂದೇ ಎಂಬ ಭಾವನೆ ಈಚೆಗೆ ಕಮ್ಮಿಯಾಗುತ್ತಿದ್ದು, ಮೇಲು- ಕೀಳು ಭಾವನೆ ಹೆಚ್ಚಾಗುತ್ತಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

ಕವಿ ಅಬ್ಬಾಸ್ ಅಬ್ಬಲಗೆರೆ ಮಾತನಾಡಿ, ಪ್ರತಿಯೊಬ್ಬನೂ ‘ನಾನೊಬ್ಬ ದೇಶಭಕ್ತ, ದೇಶಕ್ಕಾಗಿ ಹೋರಾಡುತ್ತೇನೆ. ಹಿಂದು-ಮುಂದುಗಳ ಮಾತಿಗಿಂತ ಇಂದಿನ ಮಹತ್ವ ತಿಳಿಯೋಣ ಎಂಬ ವಿಶ್ವ ಮಾನವ ಸಂದೇಶವನ್ನು ಪಾಲಿಸುತ್ತೇನೆ’ ಎಂದು ಕಂಕಣ ತೊಡಬೇಕು ಎಂದು ಕರೆ ನೀಡಿದರು.ಬಾಲೇಹೊಸೂರು ದಿಂಗಾಲೇಶ್ವರ ಸ್ವಾಮೀಜಿ, ಶಿರಸಿ ಬಣ್ಣದಮಠದ ಶಿವಲಿಂಗ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಮಠದ ಹಿರಿಯ ಸ್ವಾಮೀಜಿ ಚನ್ನವೀರ ಮಹಾಸ್ವಾಮಿ ಸಭೆ ಉದ್ಘಾಟಿಸಿದರು. ಸದಾಶಿವ ಸ್ವಾಮೀಜಿ ಉಪಸ್ಥಿತರಿದ್ದರು.ಸಾವಿತ್ರಿ ಡಿ. ಲಮಾಣಿ ಸುಗಮ ಸಂಗೀತ, ರಾಮಣ್ಣ ಭಜಂತ್ರಿ ಶಹನಾಯ್ ವಾದನ ಏರ್ಪಡಿಸಲಾಗಿತ್ತು.ಜಿ.ಪಂ. ಮುಖ್ಯ ಯೋಜನಾಧಿಕಾರಿ ಶಂಕರಪ್ಪ, ಬಿ. ಮಲ್ಲಿಕಾರ್ಜುನ್, ನಿರಂಜನ್ ಇತರರು ಹಾಜರಿದ್ದರು.
ಮುಖ್ಯ ಶಿಕ್ಷಕ ಎಂ.ವಿ. ಹಿರೇಮಠ ಸ್ವಾಗತಿಸಿದರು. ಜಿ.ಎಂ. ಶೇಖರಪ್ಪ ವಂದಿಸಿದರು. ಗಂಗಾಧರಪ್ಪ ಕಾರ್ಯಕ್ರಮ ನಿರೂಪಿಸಿದರು. 


ಪ್ರಜಾಯತ್ನ ಆಯೋಜನಾ ಸಭೆ

ಅಂಗನವಾಡಿ ಹಾಗೂ ಶಾಲೆಗಳ ಭೌತಿಕ, ಶೈಕ್ಷಣಿಕ ಸಮಸ್ಯೆ ಗುರುತಿಸಿ, ಪರಿಹಾರ ಮಾರ್ಗ ಕಂಡು ಹಿಡಿಯುವ ಪ್ರಜಾಯತ್ನ ಸಂಸ್ಥೆಯ ಆಯೋಜನಾ ಸಭೆ ಸಮೀಪದ ಹೆಚ್ಚೆ ಗ್ರಾಮದಲ್ಲಿ   ಈಚೆಗೆ ನಡೆಯಿತು.ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವ ಶಾಲಾ ಸಮಿತಿ, ಸಿಎಸ್ ಹಾಗೂ ಬಿವಿಎಸ್ ಸಮಿತಿಗಳ ಜಂಟಿ ಸಭೆಯಲ್ಲಿ ಸಂಸ್ಥೆ ಸಂಚಾಲಕ ಶಂಕರ್ ಪಾಟೀಲ್ ಕಾರ್ಯಕ್ರಮದ ರೂಪುರೇಷೆ ಕುರಿತು ವಿವರಿಸಿದರು.


ಶಿಕ್ಷಣ ಹಾಗೂ ಆರೋಗ್ಯದ ಅರಿವು ಜತೆ ಜತೆಯಲ್ಲಿಯೇ ಸಾಗಬೇಕಿದ್ದು, ಈ ನಿಟ್ಟಿನಲ್ಲಿ ಸಮಸ್ಯೆಗಳ ಸ್ವಯಂ ನಿವೇದನೆ ಹಾಗೂ ಪರಿಹಾರ ಪಡೆಯುವ ಪ್ರಕ್ರಿಯೆ ನಡೆಯಬೇಕು ಎಂದು ಸಲಹೆ ನೀಡಿದ ಅವರು, ಸಮಿತಿಗಳ ಜವಾಬ್ದಾರಿ, ವಿವಿಧ ಇಲಾಖೆಯಿಂದ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.ಗ್ರಾ.ಪಂ. ಅಧ್ಯಕ್ಷೆ ಗುತ್ಯಮ್ಮ,  ಕೆರಿಯಮ್ಮ, ಜಯಶೀಲಗೌಡ, ಪರಸಪ್ಪ, ಮೋಹನ್,  ಬಂಗಾರೇಶ್ವರ, ಸಿಆರ್‌ಪಿ ಗಣೇಶ್‌ಜೊಯ್ಸೆ,  ಸಂಪತ್ ಜೊಯ್ಸೆ, ಶ್ರೀಧರ್ ಜೊಯ್ಸೆ, ಶಿಕ್ಷಕರು, ಸಮಿತಿಗಳ ಸದಸ್ಯರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.