ADVERTISEMENT

ನಗರದಲ್ಲಿ ಮಧ್ಯಸ್ಥಿಕೆದಾರರ ತರಬೇತಿ ಕಾರ್ಯಾಗಾರ.ತ್ವರಿತ ವಿಲೇವಾರಿಗೆ ಮಧ್ಯಸ್ಥಿಕೆ ಕೇಂದ್ರ ಪರಿಹಾರ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2011, 5:55 IST
Last Updated 15 ಫೆಬ್ರುವರಿ 2011, 5:55 IST

ಶಿವಮೊಗ್ಗ: ಪ್ರತಿಷ್ಠೆ, ಅಪಾರ್ಥ, ಅಹಂಕಾರ ಮತ್ತಿತರ ಕಾರಣಗಳಿಂದ ನ್ಯಾಯಾಲಯದ ಮೆಟ್ಟಿಲು ಹತ್ತಿದ ಪ್ರಕರಣಗಳನ್ನು ಮಧ್ಯಸ್ಥಿಕೆ ಕೇಂದ್ರಗಳಲ್ಲಿ ತ್ವರಿತವಾಗಿ ಬಗೆಹರಿಸಿಕೊಂಡು ಹಣ, ಸಮಯ, ಶಕ್ತಿ ಹಾಗೂ ಬಾಂಧವ್ಯವನ್ನೂ ಉಳಿಸಿಕೊಳ್ಳಲು ಸಾಧ್ಯವಿದೆ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಎ.ಬಿ. ಹೇಮಚಂದ್ರ ಸಲಹೆ ಮಾಡಿದರು.
ನಗರದ ರಾಷ್ಟ್ರೀಯ ಕಾನೂನು ಕಾಲೇಜಿನಲ್ಲಿ ಸೋಮವಾರ ಬೆಂಗಳೂರು ಮಧ್ಯಸ್ಥಿಕೆ ಕೇಂದ್ರ, ನ್ಯಾಯಾಂಗ ಇಲಾಖೆ, ಜಿಲ್ಲಾ ವಕೀಲರ ಸಂಘ ಸಂಯುಕ್ತವಾಗಿ ಹಮ್ಮಿಕೊಂಡಿದ್ದ ಮಧ್ಯಸ್ಥಿಕೆದಾರರ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಕ್ಷುಲ್ಲಕ ಕಾರಣದಿಂದ ಇಂದು ಬಹಳಷ್ಟು ಪ್ರಕರಣಗಳು ನ್ಯಾಯಾಲಯಕ್ಕೆ ಹೋಗುತ್ತವೆ. ಇಂತಹ ಕಕ್ಷಿದಾರರಿಗೆ ತಮ್ಮ ಭಾವನೆಗಳನ್ನು ಹೊರಹಾಕಲು ಮಧ್ಯಸ್ಥಿಕೆ ಕೇಂದ್ರ ವೇದಿಕೆಯಾಗಿದೆ. ಮಧ್ಯಸ್ಥಿಕೆ ಕೇಂದ್ರದಿಂದ ಮುರಿದು ಹೋದ ಬಹಳಷ್ಟು ಕುಟುಂಬಗಳನ್ನು ಮತ್ತೆ ಒಂದಾಗಿಸಲು ಸಾಧ್ಯ ಎಂದರು.ಹೊರರಾಜ್ಯಗಳಲ್ಲಿ ಮಧ್ಯಸ್ಥಿಕೆ ಕೇಂದ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕರ್ನಾಟಕದಲ್ಲೂ ಇದು ಯಶಸ್ವಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನ್ಯಾಯ ತಡವಾದರೆ ನ್ಯಾಯವನ್ನೇ ನಿರಾಕರಿಸಿದಂತೆ ಎಂಬ ಮಾತುಗಳಿವೆ. ಈಗಿರುವ ನ್ಯಾಯಾಧೀಶರ ಸಂಖ್ಯೆಯನ್ನು 6ಪಟ್ಟು ಹೆಚ್ಚು ಮಾಡಿದರೂ ಬಾಕಿ ಪ್ರಕರಣಗಳನ್ನು ಬಗೆಹರಿಸಲು ಕಷ್ಟ. ಮಧ್ಯಸ್ಥಿಕೆ ಕೇಂದ್ರ ಪ್ರಕರಣಗಳನ್ನು ತ್ವರಿತಗತಿಯಲ್ಲಿ ಬಗೆಹರಿಸುವುದರಿಂದ ನ್ಯಾಯಾಲಯಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ ಎಂದರು.

ವಿಶೇಷ ಕೌಶಲ ಅಗತ್ಯ:
ತರಬೇತಿ ಕಾರ್ಯಾಗಾರ ಉದ್ಘಾಟಿಸಿದ ಹೆಚ್ಚುವರಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಪ್ರಕಾಶ್ ಎಲ್. ನಾಡಿಗೇರ್ ಮಾತನಾಡಿ, ಬಾಕಿ ಇರುವ ಪ್ರಕರಣಗಳನ್ನು ಸಂಧಾನದ ಮೂಲಕ ಬಗೆಹರಿಸಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಮಧ್ಯಸ್ಥಿಕೆ ಕೇಂದ್ರ ಸಹಾಯವಾಗಲಿದೆ. ಆದರೆ, ಸಂಧಾನಕ್ಕೆ ಮಾನಸಿಕವಾಗಿ ತಯಾರು ಮಾಡಲು ವಿಶೇಷ ಕೌಶಲ್ಯಗಳನ್ನು ಮಧ್ಯಸ್ಥಿಕೆಗಾರರು ಹೊಂದಿರುವುದು ಅವಶ್ಯ ಎಂದರು.

ತರಬೇತುದಾರ ಪ್ರಸಾದ್ ಸುಬ್ಬಣ್ಣ ಮಾತನಾಡಿ, ನ್ಯಾಯಾಲಯದಲ್ಲಿ ಬಾಕಿ ಉಳಿದಿರುವ ಪ್ರಕರಣಗಳ ಸಂಖ್ಯೆಯನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿ, ಪ್ರತಿ ಜಿಲ್ಲೆ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಮಧ್ಯಸ್ಥಿಕೆ ಕೇಂದ್ರಗಳನ್ನು ಆರಂಭಿಸಲು ಅಗತ್ಯ ಸೌಲಭ್ಯ ಕಲ್ಪಿಸಿಕೊಟ್ಟಿದೆ. ಜೊತೆಗೆ ಪ್ರತಿ ಜಿಲ್ಲೆಯಲ್ಲಿ 20 ಜನ ಮಧ್ಯಸ್ಥಿಕೆದಾರರು ಕಾರ್ಯ ನಿರ್ವಹಿಸಲು ಸೂಚಿಸಿದೆ ಎಂದರು.ಮಧ್ಯಸ್ಥಿಕೆ ಕೇಂದ್ರ ಆರಂಭವಾದಾಗಿನಿಂದ ಕೇಂದ್ರಕ್ಕೆ ಬಂದ 18,041 ಪ್ರಕರಣಗಳಲ್ಲಿ 13,782 ಪ್ರಕರಣಗಳು ಇತ್ಯರ್ಥಗೊಂಡಿವೆ. ಶೇ. 62ರಷ್ಟು ಸಾಧನೆಯಾಗಿದೆ ಎಂದರು.


ಜಿಲ್ಲಾ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿಎಚ್.ಬಿ. ದೇವೇಂದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ತರಬೇತುದಾರರಾದ ಜಿಯೋ ಜೋಸೆಫ್, ಹುಮಾಯೂನ್ ಉಪಸ್ಥಿತರಿದ್ದರು.ಪ್ರಧಾನ ಹಿರಿಯ ವ್ಯವಹಾರ ನ್ಯಾಯಾಧೀಶರಾದ ಬಿ.ಎಸ್. ರೇಖಾ ಸ್ವಾಗತಿಸಿದರು. 2ನೇ ಹೆಚ್ಚುವರಿ ಹಿರಿಯ ವ್ಯವಹಾರ ನ್ಯಾಯಾಧೀಶ ಎಚ್.ಎ. ಮೋಹನ್ ವಂದಿಸಿದರು. ವಕೀಲಕೆ.ಪಿ. ಶ್ರೀಪಾಲ್ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.