ಇಂದಿನಿಂದ ಸೀತಾರಾಮಾಂಜನೇಯ ಉಯ್ಯೊಲೆ ಉತ್ಸವ
ನಗರದ ಕೋಟೆ ಸೀತಾರಾಮಾಂಜನೇಯ ಸ್ವಾಮಿ ದೇವಾಲಯದಲ್ಲಿ ಜು. 20ರಿಂದ ಐದು ದಿನಗಳ ಕಾಲ ಸೀತಾರಾಮಾಂಜನೇಯ ಉಯ್ಯೊಲೆ ಉತ್ಸವ ನಡೆಯಲಿದೆ.
ಆಷಾಢ ಪ್ರಥಮ ಏಕಾದಶಿಯಿಂದ ಆರಂಭವಾಗಲಿರುವ ಈ ಉತ್ಸವದಲ್ಲಿ ಜು. 20ರಂದು ಸಂಜೆ 7ಕ್ಕೆ ಹಂಸವಾಹನದಲ್ಲಿ ವಿಶೇಷ ಭಜನೆಯೊಂದಿಗೆ ರಾಜಬೀದಿ ಉತ್ಸವ, 21ರಂದು ಸಂಜೆ 6.30ಕ್ಕೆ ವೇದ ಪಠಣದೊಂದಿಗೆ ಉಯ್ಯೊಲೆ ಸೇವೆ, ಅಷ್ಟಾವಧಾನ, ಜು. 22ರಂದು ಸಂಜೆ 6.30ರಿಂದ ಸಾಮೂಹಿಕ ವಿಷ್ಣು ಸಹಸ್ರನಾಮ, ಲಲಿತಾ ಸಹಸ್ರನಾಮ ಪಾರಾಯಣ, 23ರಂದು ಸಂಜೆ 6.30ಕ್ಕೆ ವಿದ್ವಾನ್ ಕುಮಾರ ಸ್ವಾಮಿ ಮತ್ತು ತಂಡದವರಿಂದ ಸ್ಯಾಕ್ಷ್ಸೋಫೋನ್ ವಾದನ, ವೇದಪಾರಾಯಣ, ಅಷ್ಟಾವಧಾನ ಸೇವೆ, ಪ್ರಸಾದ ವಿನಿಯೋಗ ನಡೆಯಲಿದೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.
ಆರ್ಯವೈಶ್ಯ ಸಂಘದ ರಜತ ಮಹೋತ್ಸವ ಇಂದಿನಿಂದ
ಆರ್ಯವೈಶ್ಯ ಅಧಿಕಾರಿಗಳ ಮತ್ತು ವೃತ್ತಿನಿರತರ ಸಂಘ ಅಂಬೇಡ್ಕರ್ ಭವನದಲ್ಲಿ ಜುಲೈ 20ರಂದು ಸಂಜೆ 4ರಿಂದ ಸಂಘದ ರಜತ ಮಹೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿದೆ. ಮಲ್ಲಿರ್ಕಾಜುನ ಮುರುಘರಾಜೇಂದ್ರ ಸ್ವಾಮೀಜಿ ಕಾರ್ಯಕ್ರಮದ ನೇತೃತ್ವ ವಹಿಸುವರು. ವಿಧಾನ ಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ, ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್, ಸಂಸತ್ ಸದಸ್ಯ ಬಿ.ವೈ.ರಾಘವೇಂದ್ರ ಉಪಸ್ಥಿತರಿರುವರು. ಸಂಘದ ಅಧ್ಯಕ್ಷ ಬಿ.ಎಸ್.ನರಸಿಂಹಮೂರ್ತಿ ಅಧ್ಯಕ್ಷತೆ ವಹಿಸುವರು.
ಅಂಬೇಡ್ಕರ್ ಭವನದಲ್ಲಿ ಜುಲೈ 21ರಂದು ಬೆಳಿಗ್ಗೆ 9.30ಕ್ಕೆ ರಾಜ್ಯ ಆರ್ಯವೈಶ್ಯ ಸಂಘಗಳ ಒಕ್ಕೂಟದ 7ನೇ ರಾಜ್ಯ ಸಮ್ಮೇಳನ ಏರ್ಪಡಿಸಿದೆ. ಡಿ.ಎಚ್.ಶಂಕರಮೂರ್ತಿ ಸಮ್ಮೇಳನ ಉದ್ಘಾಟಿಸುವರು. ಒಕ್ಕೂಟದ ಅಧ್ಯಕ್ಷ ಸಂಜೀವಪ್ಪ ಶ್ರೇಷ್ಠಿ ಅಧ್ಯಕ್ಷತೆ ವಹಿಸುವರು.
ಇಂದು ವೈದ್ಯಕೀಯ ವಿದ್ಯಮಾನ ಕುರಿತು ಉಪನ್ಯಾಸ
ವಾಸನ್ ಕಣ್ಣಿನ ಆಸ್ಪತ್ರೆ ಮತ್ತು ಭಾರತೀಯ ವೈದ್ಯಕೀಯ ಸಂಘ ಸಂಯುಕ್ತವಾಗಿ ಮೆಗ್ಗಾನ್ ಆಸ್ಪತ್ರೆಯ ಆವರಣದ ಐಎಂಎ ಸಭಾಂಗಣದಲ್ಲಿ ಜುಲೈ 20ರಂದು ಸಂಜೆ 7.30ಕ್ಕೆ `ಪ್ರಸ್ತುತ ವೈದ್ಯಕೀಯ ವಿದ್ಯಮಾನಗಳ' ಕುರಿತು ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಿದೆ. ವಾಸನ್ ಕಣ್ಣಿನ ಆಸ್ಪತ್ರೆ ವೈದ್ಯಾಧಿಕಾರಿಗಳಾದ ಡಾ.ಆರ್.ಪ್ರಶಾಂತ್, ಡಾ.ಅನಿಲ್‌ರಾಜ್ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡುವರು. ಕಾರ್ಯಕ್ರಮಕ್ಕೆ ಭಾರತೀಯ ವೈದ್ಯಕೀಯ ಸಂಘದ ಸದಸ್ಯರು ಭಾಗವಹಿಸುವಂತೆ ಸಂಘ ಮನವಿ ಮಾಡಿದೆ.
ಇಂದು ಪಂಚಮಸಾಲಿ ಸಮಾಜದ ಪ್ರತಿಭಾ ಪುರಸ್ಕಾರ
ಜಿಲ್ಲಾ ವೀರಶೈವ ಲಿಂಗಾಯತರ ಪಂಚಮಸಾಲಿ ಸಮಾಜದ ಪ್ರತಿಭಾನ್ವಿತ ಮಕ್ಕಳಿಗೆ ನೂರು ಅಡಿ ರಸ್ತೆಯ ಶಿವಾಲಯ ದೇವಾಲಯದ ಪಕ್ಕದ ಸಮುದಾಯ ಭವನದಲ್ಲಿ ಜು. 20ರಂದು ಮಧ್ಯಾಹ್ನ 12ಕ್ಕೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಿದ್ದಲಿಂಗ ಸ್ವಾಮೀಜಿ ಕಾರ್ಯಕ್ರಮದ ನೇತೃತ್ವ ವಹಿಸುವರು ಎಂದು ಪ್ರಕಟಣೆ ತಿಳಿಸಿದೆ.
ಸ್ನಾತಕೋತ್ತರ ಪದವಿಗೆ ಅರ್ಜಿ ಆಹ್ವಾನ
ಭದ್ರಾವತಿಯ ಸರ್ ಎಂ.ವಿ. ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜು ಸ್ನಾತಕೋತ್ತರ ಪದವಿಯ ಕನ್ನಡ ಹಾಗೂ ಇತಿಹಾಸ ವಿಭಾಗಗಳ ಪ್ರವೇಶಕ್ಕೆ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಕನ್ನಡ ಐಚ್ಚಿಕ ವಿಷಯದೊಂದಿಗೆ ಪದವಿ, ಅಥವಾ ಪದವಿಯಲ್ಲಿ ಕನ್ನಡ ಭಾಷಾ ವಿಷಯ ಅಧ್ಯಯನ ಮಾಡಿರುವವರು ಸ್ನಾತಕೋತ್ತರ ಕನ್ನಡ ಪದವಿಗೆ, ಇತಿಹಾಸ ಐಚ್ಚಿಕ ವಿಷಯದೊಂದಿಗೆ ಪದವಿ ಪಡೆದವರು ಸ್ನಾತಕೋತ್ತರ ಇತಿಹಾಸ ಪದವಿಗೆ ಜುಲೈ 30ರ ಒಳಗೆ ಅರ್ಜಿ ಸಲ್ಲಿಸಬಹುದು. ಮಾಹಿತಿಗೆ ಮೊಬೈಲ್: 98869 70436/ 94492 04906 ಸಂಪರ್ಕಿಸಬಹುದು.
ಐಟಿ ದಾಳಿ; ಒಕ್ಕಲಿಗರ ವೇದಿಕೆ ಖಂಡನೆ
ಸಮಾಜಕ್ಕೆ, ರಾಜ್ಯಕ್ಕೆ ಕೊಡುಗೆ ನೀಡಿರುವ ಆದಿಚುಂಚನಗಿರಿ ಮಠದ ಮೇಲೆ ನಡೆದ ದಾಳಿಯನ್ನು ರಾಜ್ಯ ಒಕ್ಕಲಿಗರ ವೇದಿಕೆ ಖಂಡಿಸಿದೆ.
ಬಡಮಕ್ಕಳಿಗೆ ಉನ್ನತ ಶಿಕ್ಷಣ, ಅನ್ನದಾಸೋಹ, ಆರೋಗ್ಯ ಕ್ಷೇತ್ರದಲ್ಲಿ ಸೇವೆ ಮಾಡುತ್ತಿರುವ ಮಠದ ಮೇಲೆ ಕೆಲವರ ಚಿತಾವಣಿಯಿಂದ ಐಟಿ ಸಂಸ್ಥೆ ದಾಳಿ ಮಾಡಿದೆ ಎಂದು ಪ್ರಕಟಣೆಯಲ್ಲಿ ವೇದಿಕೆ ಆರೋಪಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.