ADVERTISEMENT

ನಾಳೆ ಹೈಟೆಕ್ ಬಸ್‌ನಿಲ್ದಾಣ ಲೋಕಾರ್ಪಣೆ

ಹೊಸನಗರ:ರೂ 3 ಕೋಟಿ ವೆಚ್ಚದ ಕಾಮಗಾರಿ, ಅಂತೂ ಕೂಡಿ ಬಂತು ಮುಹೂರ್ತ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2012, 7:10 IST
Last Updated 13 ಡಿಸೆಂಬರ್ 2012, 7:10 IST

ಹೊಸನಗರ: ಜಿಲ್ಲೆಯಲ್ಲಿಯೇ ತಾಲ್ಲೂಕು ಕೇಂದ್ರದಲ್ಲಿ ಪ್ರಥಮ ಬಾರಿಗೆ ಬಹು ನಿರೀಕ್ಷಿತ ಸುಮಾರುರೂ3 ಕೋಟಿ ವೆಚ್ಚದ ಹೈಟೆಕ್ ಖಾಸಗಿ ಬಸ್‌ನಿಲ್ದಾಣವನ್ನು ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಡಿ. 14ರಂದು ಉದ್ಘಾಟನೆ ಮಾಡುವರು.

5 ವರ್ಷಗಳ ಹಿಂದೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಶಂಕುಸ್ಥಾಪನೆ ನೆರವೇರಿಸಿದ್ದರು. ಆದರೆ, ನಿರಂತರ ಬದಲಾದ ಗುತ್ತಿಗೆದಾರರು ಹಾಗೂ ಪದೇ ಪದೇ ಕಾಮಗಾರಿಯ ನೀಲ ನಕ್ಷೆಯ ಬದಲಾವಣೆಯಿಂದಾಗಿ ಬಸ್‌ನಿಲ್ದಾಣ ಕಾಮಗಾರಿಯು ಕುಂಠಿತವಾಗಿದ್ದು ಪ್ರಯಾಣಿಕರು ತಂಗಲು ಸೂರಿಲ್ಲದೆ ಹಿಡಿ ಶಾಪ ಹಾಕುವಂತಾಗಿತ್ತು.

ಆದರೆ, ಇಂದಿನ ಪಟ್ಟಣ ಪಂಚಾಯ್ತಿ ಅಧ್ಯಕ್ಷ ಅರುಣ್‌ಕುಮಾರ್ ಮತ್ತು ಸದಸ್ಯರ ಕಾಮಗಾರಿ ಅನುಷ್ಠಾನ ಕುರಿತ ಬದ್ಧತೆ, ಕಾಳಜಿಯಿಂದಾಗಿ 1 ವರ್ಷದಿಂದ ಕಾಮಗಾರಿಗೆ ತ್ವರಿತಗತಿಯ ಚಾಲನೆ ನೀಡಿದ ಪರಿಣಾಮರೂ3 ಕೋಟಿ ಅಂದಾಜು ವೆಚ್ಚದ ಬಸ್‌ನಿಲ್ದಾಣಕ್ಕೆ ಉದ್ಘಾಟನೆಯ ಭಾಗ್ಯ ದೊರೆತಿದೆ ಎನ್ನಲಾಗಿದೆ.

ಈ ಸುಸಜ್ಜಿತ ಬಸ್‌ನಿಲ್ದಾಣದಲ್ಲಿ ಏಕ ಕಾಲದಲ್ಲಿ 10-12 ಬಸ್ ನಿಲ್ಲುವ ವ್ಯವಸ್ಥೆ, ಹೋಟೆಲ್ ಸೇರಿದಂತೆ 21 ಮಾರಾಟ ಮಳಿಗೆ, ಮೊದಲ ಅಂತಸ್ತಿನಲ್ಲಿ ಸುಮಾರು 18 ಕೊಠಡಿಗಳ ಸುಸಜ್ಜಿತ ವಸತಿ ವ್ಯವಸ್ಥೆಗಳು ಇದೆ. 100 ಲೀಟರ್ ತಂಪು ಹಾಗೂ 100 ಲೀಟರ್ ಡಬಲ್ ಶುದ್ಧೀಕರಿಸಿದ ನಿರಂತರ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ.

ಬಸ್ ನಿಲ್ದಾಣದ ಆವರಣ ಸುತ್ತಲೂ ಪ್ರಥಮ ಬಾರಿಗೆ ಯುಪಿಎಸ್ ಸಹಿತ ಎಲ್‌ಇಡಿ ದೀಪಗಳು ವ್ಯವಸ್ಥೆ ಮಾಡಲಾಗಿದೆ. ಬಸ್ ನಿಲ್ದಾಣದ ಆವರಣದೊಳಗೆ ಪುಟ್ಟದೊಂದು ಲಾನ್ ಹಾಗೂ ಕಾರಂಜಿಗೆ ಅವಕಾಶ ಇದೆ. ಜಿಲ್ಲೆಯಲ್ಲಿಯೇ ಪ್ರಥಮ ಬಾರಿಗೆ ಮೈಸೂರಿನ ಇನ್‌ಫೋಸಿಸ್ ಮಾದರಿಯಲ್ಲಿ ಸೆನ್ಸ್‌ರ್‌ಯುಕ್ತ ಅತ್ಯಾಧನಿಕ ಮೂತ್ರಾಲಯವನ್ನು (ಮೂತ್ರದ ನಂತರ ಬೇಸಿನ್‌ಗೆ ತನ್ನಷ್ಟಕ್ಕೆ ನೀರು ಪ್ರವಹಿಸಿ ಸ್ವಚ್ಛವಾಗುತ್ತದೆ) ಅಳವಡಿಸಲಾಗಿದೆ ಎನ್ನುತ್ತಾರೆ ಕಾಮಗಾರಿಯ ಮೇಲ್ವಿಚಾರಣೆಯ ಹೊಣೆ ಹೊತ್ತ ಎಂಜಿನಿಯರ್ ಮಹಾಂತ ಗೌಡ ಪಾಟೀಲ್.

5 ವರ್ಷಗಳಿಂದ ಬಸ್‌ನಿಲ್ದಾಣ ಇಲ್ಲದೆ ರಸ್ತೆ ಬದಿಯಲ್ಲಿ, ಕಂಡ-ಕಂಡ ಕಟ್ಟಡದ ಸೂರಿನಡಿಯಲ್ಲಿ ಬಿಸಿಲು, ಮಳೆಗೆ ಮೈಯೊಡ್ಡಿದ ಸಾರ್ವಜನಿಕರಿಗೆ ಈಗ ಹೈಟೆಕ್ ಬಸ್‌ನಿಲ್ದಾಣದಿಂದಾಗಿ ನಿಟ್ಟುಸಿರು ಬಿಡುವಂತಾಗಿದೆ.

ಅನುಮಾನ: ಉದ್ಘಾಟನೆಯ ಮುಹೂರ್ತ 3 ಬಾರಿ ಮುಂದೂಡಿದ ಪ್ರಸಂಗ ನೋಡಿದ ಸಾರ್ವಜನಿಕರಿಗೆ ಇನ್ನೂ ಅನುಮಾನ ಕಾಡುತ್ತಿದೆ. ನ. 28ಕ್ಕೆ ಉದ್ಘಾಟನೆ ಅಂತ ಪಟ್ಟಣ ಪಂಚಾಯ್ತಿ ಸಭೆಯಲ್ಲಿ ನಿರ್ಧಾರವಾಗಿದ್ದು, ಕಾರಣ ಇಲ್ಲದೆ ಡಿ. 3ಕ್ಕೆ ಮುಂದಕ್ಕೆ ಹೋಗಿತ್ತು. ಮಾಜಿ ಪ್ರಧಾನಿ ನಿಧನದ ಶೋಕಾಚರಣೆ ಅಂತ ಡಿ. 14ಕ್ಕೆ ಮುಹೂರ್ತ ನಿಗದಿ ಆಗಿದೆ. ಅಧಿಕೃತ ಉದ್ಘಾಟನೆ ಆಗಲಿ-ಬಿಡಲಿ, ವಾಹನ ಹಾಗೂ ಸಾರ್ವಜನಿಕರ ನಿಲುಗಡೆಗೆ ಅವಕಾಶ ಮಾಡಿಕೊಡುವಂತೆ ಸಾರ್ವಜನಿಕರ ಆಗ್ರಹ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.