ADVERTISEMENT

ನೂತನ ಜಿಲ್ಲಾಧಿಕಾರಿ ಎಂ.ವಿ. ವೇದಮೂರ್ತಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2012, 9:30 IST
Last Updated 10 ಫೆಬ್ರುವರಿ 2012, 9:30 IST

ಶಿವಮೊಗ್ಗ: ಹಿಂದಿನ ಜಿಲ್ಲಾಧಿಕಾರಿಗಳ ಎಲ್ಲಾ ಯೋಜನೆಗಳನ್ನು ಮುಂದುವರಿಸು ವುದರೊಂದಿಗೆ ಜನಪ್ರತಿನಿಧಿಗಳ ಸಲಹೆ-ಸಹಕಾರದಲ್ಲಿ ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುವುದು ಎಂದು ನೂತನ ಜಿಲ್ಲಾಧಿಕಾರಿ ಎಂ.ವಿ. ವೇದಮೂರ್ತಿ ತಿಳಿಸಿದರು.

ಕಚೇರಿಯಲ್ಲಿ ಗುರುವಾರ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ, ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಕೆ. ಶ್ರೀರಂಗಯ್ಯ ಅವರಿಂದ ಅಧಿಕಾರ ಸ್ವೀಕರಿಸಿದ ನಂತರ ಅವರು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದರು.

ಶಿವಮೊಗ್ಗ ಎಲ್ಲ ರೀತಿಯಲ್ಲೂ ಪ್ರಬಲವಾದ ಜಿಲ್ಲೆ. ಸಾಂಸ್ಕೃತಿಕ, ರಾಜಕೀಯ ಸೇರಿದಂತೆ ಎಲ್ಲ ಕ್ಷೇತ್ರದಲ್ಲೂ ತನ್ನದೇ ವಿಶೇಷವಾದ ಛಾಪು ಮೂಡಿಸಿದೆ. ಎರಡು ರಾಷ್ಟ್ರಕವಿ, ಎರಡು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಜಿಲ್ಲೆ; ಪಿ. ಲಂಕೇಶ್‌ರಂತಹ ಪತ್ರಕರ್ತರಿಗೆ ಜನ್ಮ ನೀಡಿದ ಸ್ಥಳ. ಈ ಎಲ್ಲ ಸೂಕ್ಷ್ಮಗಳನ್ನು ಅರಿತು ಕೆಲಸ ಮಾಡಬೇಕಾದಂತಹ ಮಹತ್ತರ ಜವಾಬ್ದಾರಿ ನನ್ನ ಮೇಲಿದೆ ಎಂದರು.

ಎಲ್ಲಾ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ, ಸರ್ಕಾರದ ಯೋಜನೆಗಳನ್ನು ನಿಗದಿತ ಕಾಲಮಿತಿ ಒಳಗೆ ಜನಸಾಮಾನ್ಯರಿಗೆ ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.

ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಗಮನಹರಿಸಲಾಗುವುದಲ್ಲದೆ, ವಿಮಾನ ನಿಲ್ದಾಣ ಸೇರಿದಂತೆ ಇತರೆ ಅಭಿವೃದ್ಧಿ ಕಾಮಗಾರಿಗಳು ಕೂಡ ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಯತ್ನಿಸಲಾಗುವುದು ಎಂದರು.

ಇದೇ ಮೊದಲ ಬಾರಿಗೆ ತಾವು ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದು, ಈ ಹಿಂದೆ ಮಂಡ್ಯ, ಬಾಗಲಕೋಟೆ, ಬೀದರ್, ಬೀಳಗಿ ಹಾಗೂ ಬೆಂಗಳೂರಿನಲ್ಲಿ ಉಪ ವಿಭಾಗಾಧಿಕಾರಿಯಾಗಿ, ಜಿಲ್ಲಾ ನೋಂದಣಾಧಿಕಾರಿ ಆಗಿ, ಅಂಗವಿಕಲರ ಇಲಾಖೆ ನಿರ್ದೇಶಕರಾಗಿ, ವಿವಿಧ ಇಲಾಖೆಗಳಲ್ಲಿ ಹಲವು ಜವಾಬ್ದಾರಿಯುತ ಹುದ್ದೆಗಳನ್ನು ನಿರ್ವಹಿಸಿ 26 ವರ್ಷಗಳ ಕಾಲ ಸೇವೆ ಸಲ್ಲಿಸಿದ ಅನುಭವ ಹೊಂದಿರುವುದಾಗಿ ತಿಳಿಸಿದರು. ತಮ್ಮದು ಮೂಲತಃ ದಾವಣಗೆರೆಯ ಮಳಲಕೆರೆ ಗ್ರಾಮ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.