ADVERTISEMENT

ಪಟ್ಟಣದ ವ್ಯಾಪ್ತಿಯಲ್ಲಿ ಗ್ರಾ.ಪಂ. ಹಸ್ತಕ್ಷೇಪ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2012, 5:30 IST
Last Updated 7 ಮಾರ್ಚ್ 2012, 5:30 IST

ಹೊಸನಗರ: ಪಟ್ಟಣದ ವ್ಯಾಪ್ತಿಯಲ್ಲಿ ಅಕ್ರಮವಾಗಿ ಅಂಗಡಿ ಮಳಿಗೆ, ಮನೆ ಕಟ್ಟಲು ಅತಿಕ್ರಮಣ ಕೃತ್ಯಕ್ಕೆ ಪರವಾನಗಿ ನೀಡುತ್ತಿರುವ ಎಂ. ಗುಡ್ಡೆಕೊಪ್ಪ ಗ್ರಾ.ಪಂ. ಪಿಡಿಒ ಮತ್ತು ಅಧ್ಯಕ್ಷರ ಮೇಲೆ ಸೂಕ್ತ ಕ್ರಮ ಜರುಗಿಸುವಂತೆ ಹೊಸನಗರ ಪಟ್ಟಣ ಪಂಚಾಯ್ತಿಯು ಜಿಲ್ಲಾಧಿಕಾರಿಗೆ ಒತ್ತಾಯಿಸಿತು.

 ಪ.ಪಂ. ಅಧ್ಯಕ್ಷ ಅರುಣ್‌ಕುಮಾರ್ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ತ್ರೈಮಾಸಿಕ ಸಾಮಾನ್ಯ ಸಭೆಯಲ್ಲಿ ಗ್ರಾ.ಪಂ. ಹಸ್ತಕ್ಷೇಪವನ್ನು ಖಂಡಿಸಿದ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು.
ಪ.ಪಂ. ವ್ಯಾಪ್ತಿಯಲ್ಲಿ ಕೋಳಿ ಮಾರಾಟ ಮಳಿಗೆ, ಮಾಂಸದ ಅಂಗಡಿ ಹಾಗೂ ಅತಿಕ್ರಮ ಮನೆಕಟ್ಟಲು ಪರವಾನಗಿ ನೀಡಿರುವ ಅಧಿಕಾರಿ ಹಾಗೂ ಜನಪ್ರತಿನಿಧಿಗಳ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಸದಸ್ಯರು ಆಗ್ರಹ ಮಾಡಿದರು.

13ನೇ ಹಣಕಾಸು ಯೋಜನೆಯಲ್ಲಿ ಸುಮಾರು ರೂ. 40 ಲಕ್ಷದ ಕ್ರಿಯಾ ಯೋಜನೆ ಅನುಮೋದಿಸಲಾಯಿತು. ಇದರಲ್ಲಿ ಘನತ್ಯಾಜ್ಯ ವಿಲೇವಾರಿಗೆ ರೂ. 16 ಲಕ್ಷ, ಚರಂಡಿ ನಿರ್ಮಾಣ- ರೂ. 10 ಲಕ್ಷ, ಕುಡಿಯುವ ನೀರು ಸರಬರಾಜು ಹಾಗೂ ವಿದ್ಯುದ್ದೀಕರಣಕ್ಕೆ ರೂ. 4 ಲಕ್ಷ ನಿಗದಿಪಡಿಸಲಾಯಿತು.

ಪಟ್ಟಣ ಅಭಿವೃದ್ಧಿಗಾಗಿ ಈ ಹಿಂದೆ ತೆರವುಗೊಳಿಸಿದ್ದ ನೆಲಬಾಡಿಗೆ ಅಂಗಡಿ ಮಳಿಗೆಗಳ ಮಾಲೀಕರಿಗೆ  ಪುನರ್‌ವಸತಿ ಕಲ್ಪಿಸುವ ನಿಟ್ಟಿನಲ್ಲಿ  ಸುಮಾರು ರೂ. 20 ಲಕ್ಷ ಅಂದಾಜು ವೆಚ್ಚದ  21 ತಾತ್ಕಾಲಿಕ ಮಳಿಗೆಗಳನ್ನು ಹಳೆ ಗೀತಾ ಟಾಕೀಸ್  ಸ್ಥಳದಲ್ಲಿ ನಿರ್ಮಿಸಲು ಸಭೆಯು ನಿರ್ಣಯಿಸಿತು.

ನೂತನ ಬಸ್‌ನಿಲ್ದಾಣದಲ್ಲಿ ಹಲವು ವರ್ಷಗಳಿಂದ ನೆನೆಗುದಿಯಲ್ಲಿರುವ ಎಲ್ಲಾ ಮಾರಾಟ ಮಳಿಗೆಗಳನ್ನು ಕೂಡಲೆ ಹರಾಜು ಮಾಡಲು ಸಭೆಯು ಅಧ್ಯಕ್ಷರಿಗೆ ಅಧಿಕಾರ ನೀಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.