ADVERTISEMENT

ಪಠ್ಯದ ಜತೆಗೆ ಸಾಮಾನ್ಯ ಜ್ಞಾನವೂ ಮುಖ್ಯ

​ಪ್ರಜಾವಾಣಿ ವಾರ್ತೆ
Published 20 ಜನವರಿ 2011, 7:05 IST
Last Updated 20 ಜನವರಿ 2011, 7:05 IST

ಸಾಗರ: ಶಿಕ್ಷಣ ಎಂದರೆ ಕೇವಲ ನಾಲ್ಕು ಗೋಡೆಗಳ ನಡುವೆ ಕಲಿಸುವುದಲ್ಲ. ಪಠ್ಯದ ಜತೆಗೆ ನಿತ್ಯದ ವಿದ್ಯಮಾನಗಳ ಪರಿಚಯ ಮಕ್ಕಳಿಗೆ ಇರಬೇಕು ಎಂದು ಜಿಲ್ಲಾ ಪಂಚಾಯ್ತಿ ಸದಸ್ಯೆ ಪದ್ಮಾವತಿ ಚಂದ್ರಕುಮಾರ್ ಹೇಳಿದರು.

ತಾಲ್ಲೂಕಿನ ಗೆಣಸಿನಕುಣಿ ಗ್ರಾಮದಲ್ಲಿ ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಬುಧವಾರ ಏರ್ಪಡಿಸಿದ್ದ, ವಿಜ್ಞಾನ ಮೇಳ, ಮೆಟ್ರಿಕ್ ಮೇಳ, ಮಕ್ಕಳಸಂತೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಶಿಕ್ಷಣ ಎಂಬುದು ಕೇವಲ ಉದ್ಯೋಗ ಗಳಿಸಲು ಹಾಕಿಕೊಡುವ ಮಾರ್ಗವಲ್ಲ. ಲೋಕಜ್ಞಾನವನ್ನು ಕಲಿಸದ ಶಿಕ್ಷಣದಿಂದ ಯಾವುದೇ ಪ್ರಯೋಜನವಿಲ್ಲ. ಹೊರ ಜಗತ್ತಿನಲ್ಲಿ ಏನೇನು ನಡೆಯುತ್ತಿದೆ ಎಂಬುದು ಮಕ್ಕಳಿಗೆ ಗೊತ್ತಾಗುವಂತೆ ಶಿಕ್ಷಣ ಕ್ರಮವನ್ನು ರೂಪಿಸುವುದು ಮುಖ್ಯ ಎಂದು ಹೇಳಿದರು.

ವಿಜ್ಞಾನ ಮೇಳದಂತಹ ಕಾರ್ಯಕ್ರಮವನ್ನು ಆಯೋಜಿಸುವುದರಿಂದ ಮಕ್ಕಳಿಗೆ ವಿಜ್ಞಾನದ ಕಲಿಕೆ ಸುಲಭವಾಗುತ್ತದೆ. ಮಾದರಿಗಳ ಮೂಲಕ ವಿಜ್ಞಾನವನ್ನು ಕಲಿಸುವುದು ಹೆಚ್ಚು ಪರಿಣಾಮಕಾರಿ. ಮಕ್ಕಳಸಂತೆಯಿಂದ ಮಕ್ಕಳಲ್ಲಿ ವ್ಯವಹಾರಿಕ ಜ್ಞಾನ ಬೆಳೆಯುತ್ತದೆ ಎಂದರು.

ತಾಲ್ಲೂಕು ಪಂಚಾಯ್ತಿ ಸದಸ್ಯೆ ಶ್ಯಾಮಲಾ ದೇವರಾಜ್ ಮಾತನಾಡಿ, ಮಕ್ಕಳಸಂತೆ, ವಿಜ್ಞಾನ ಮೇಳ ಇವೆಲ್ಲಾ ಮಕ್ಕಳು ಸಂಭ್ರಮಪಡುವಂತಹ ಕಾರ್ಯಕ್ರಮಗಳು. ಇವುಗಳಿಂದಾಗಿ ಮಕ್ಕಳಲ್ಲಿ ಕ್ರಿಯಾಶೀಲತೆ ಬೆಳೆಯುತ್ತದೆ ಎಂದು ಹೇಳಿದರು.

ಗ್ರಾಮದ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಎ.ಸಿ. ಸೂರ್ಯನಾರಾಯಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಗದೀಶಗೌಡ, ವಿನೋದಾ ಆರ್. ಜೋಶಿ ಹಾಜರಿದ್ದರು.
ವಂದನಾ ಮತ್ತು ಸಂಗಡಿಗರು ಪ್ರಾರ್ಥಿಸಿದರು. ದೀಪಿಕಾ ಸ್ವಾಗತಿಸಿದರು. ಅಕ್ಷಯಾ ವಂದಿಸಿದರು. ಸುಷ್ಮಾ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.