ADVERTISEMENT

ಪತ್ರಿಕೆ ಓದುಗರ ವಿಶ್ವಾಸ ಕಳೆದುಕೊಳ್ಳದಿರಲಿ

​ಪ್ರಜಾವಾಣಿ ವಾರ್ತೆ
Published 30 ಜುಲೈ 2012, 6:05 IST
Last Updated 30 ಜುಲೈ 2012, 6:05 IST
ಪತ್ರಿಕೆ ಓದುಗರ ವಿಶ್ವಾಸ ಕಳೆದುಕೊಳ್ಳದಿರಲಿ
ಪತ್ರಿಕೆ ಓದುಗರ ವಿಶ್ವಾಸ ಕಳೆದುಕೊಳ್ಳದಿರಲಿ   

ತೀರ್ಥಹಳ್ಳಿ: ಜಾಗೃತ ಸಮಾಜದಲ್ಲಿ ಮಾತ್ರ ಪತ್ರಿಕೆಗಳು ಯಶಸ್ವಿಯಾಗಿ ಕಾರ್ಯ ನಿರ್ವಹಿಸಲು ಸಾಧ್ಯ. ಓದುಗರ ವಿಶ್ವಾಸ ಕಳೆದುಕೊಂಡರೆ ಪತ್ರಿಕೆ ಲದ್ದಿಯಾಗುತ್ತದೆ ಎಂದು `ಪ್ರಜಾವಾಣಿ~ ಸಹಾಯಕ ಸಂಪಾದಕ ದಿನೇಶ್ ಅಮಿನ್‌ಮಟ್ಟು ಅಭಿಪ್ರಾಯಪಟ್ಟರು.

ನಗರದ ಬಂಟರ ಭವನದಲ್ಲಿ ಶನಿವಾರ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮಾಧ್ಯಮಗಳ ಮೇಲೆ ಇಂದು ಅಸಹನೆ ಇದೆ. ಒಂದುಕಡೆ ಹೊರಗಿನಿಂದ ಮಾಧ್ಯಮಗಳ ಮೇಲೆ ದಾಳಿ ನಡೆಯುತ್ತಿದ್ದರೆ, ಇನ್ನೊಂದೆಡೆ ಒಳಗಿನಿಂದಲೇ ದಾಳಿ ನಡೆಯುತ್ತಿದೆ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಾನೂನಿನಲ್ಲಿ ಕಟ್ಟಿಹಾಕುವಂಥ ಕೆಲಸವಾಗುತ್ತಿದ್ದು, ಕರ್ನಾಟಕ ಕಾರ್ಯನಿರತ ಪತ್ರಕರ್ತರು ಆ ಕುರಿತು ಏಕೆ ಚರ್ಚೆ ಮಾಡುತ್ತಿಲ್ಲ ಎಂಬ ಪ್ರಶ್ನೆ ಕಾಡುತ್ತಿದೆ. ಹೊರಗಿನ ದಾಳಿ ಎದುರಿಸುವ ಮೊದಲು ಒಳಗಿನ ಬಿಕ್ಕಟ್ಟು ಸರಿಪಡಿಸಿಕೊಳ್ಳಬೇಕಾದ ಪರಿಸ್ಥಿತಿ ಇದೆ ಎಂದರು.

ಒಂದು ಪತ್ರಿಕೆಯನ್ನು ರೂಪಿಸುವ ಕೆಲಸ ಏಕವ್ಯಕ್ತಿಯ ಕೆಲಸ ಅಲ್ಲ. ಸಾಮೂಹಿಕ ಪ್ರಯತ್ನದ ಫಲ. ಸಮಾಜದಲ್ಲಿ ಎಲ್ಲರೂ ಬದಲಾಗಬಹುದು. ಪತ್ರಕರ್ತ ನಾದವನು ಹಾಗೆಯೇ ಇರಬೇಕೆಂಬುದು ಸರಿಯಲ್ಲ. ಎಲ್ಲರೂ ಸರಿ ಇದ್ದರೆ ಪತ್ರಕರ್ತರೂ ಸರಿ ಇರುತ್ತಾರೆ. ಇದು ಸಾಮಾಜಿಕ ಜವಾಬ್ದಾರಿ. ಸಮಾಜ ಪತ್ರಕರ್ತರನ್ನು ಸೇವಕನಂತೆ ನೋಡಲು ಇಚ್ಛಿಸುತ್ತದೆ ಎಂದು ಹೇಳಿದರು.

ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷಟಿ.ಕೆ. ರಮೇಶ್ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು.
ಎಂಪಿಎಂ ಅಧ್ಯಕ್ಷ ಆರಗ ಜ್ಞಾನೇಂದ್ರ, ಮಾಜಿ ಶಾಸಕ ಪಟಮಕ್ಕಿ ರತ್ನಾಕರ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶೃಂಗೇಶ್, ಕಾರ್ಯದರ್ಶಿ ಸೂರ್ಯನಾರಾಯಣ್, ಎ.ಎಸ್. ಗಣಪತಿ, ವೆಂಕಟೇಶ್,  ಹೆಗ್ಗೋಡು ಕೃಷ್ಣಮೂರ್ತಿ,  ನೆಂಪೆ ದೇವರಾಜ್,  ವಿಜಯ್ ಬಿಳಿಗಿರಿ ಮಾತನಾಡಿದರು.

ಮಂಡಗದ್ದೆ ನಟರಾಜ್ ಅವರಿಂದ ವನ್ಯಜೀವಿ ಛಾಯಾಚಿತ್ರ ಪ್ರದರ್ಶನ ಆಯೋಜಿಸಲಾಗಿತ್ತು.  ಡಾ.ಸೌಮ್ಯಾ ಆರ್. ಶೆಟ್ಟಿ, ನಿವೃತ್ತ ನೌಕರರಾದ ಸೂಲಯ್ಯ, ಸುಧಾಕರ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಪತ್ರಕರ್ತ ಮುನ್ನೂರು ಮೋಹನಶೆಟ್ಟಿ ಪ್ರಾರ್ಥಿಸಿದರು, ಕೋಣಂದೂರು ಮುರುಗರಾಜ್ ಸ್ವಾಗತಿಸಿದರು. ಡಾನ್ ರಾಮಣ್ಣಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ರಮೇಶ್‌ಶೆಟ್ಟಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.