ಸಾಗರ: ಆಧುನಿಕತೆಯ ಸಂದರ್ಭದಲ್ಲಿ ಪುರಾಣದ ಕೃತಿಗಳಿಗಿಂತ ಹೆಚ್ಚಾಗಿ ಶಾಸ್ತ್ರ ಗ್ರಂಥಗಳನ್ನು ಅವಲಂಬಿಸಿರುವುದು ತಪ್ಪು ಕ್ರಮ ಎಂದು ಲೇಖಕ ಮನು ಚಕ್ರವರ್ತಿ ಹೇಳಿದರು.
ಸಮೀಪದ ಹೆಗ್ಗೋಡಿನಲ್ಲಿ ನಡೆಯುತ್ತಿರುವ ‘ನೀನಾಸಂ’ ಸಂಸ್ಕೃತಿ ಶಿಬಿರದಲ್ಲಿ ಬುಧವಾರ ನಡೆದ ಗೋಷ್ಠಿಯಲ್ಲಿ ಸಾಹಿತ್ಯದ ಕಲ್ಪನೆಯಲ್ಲಿ ಪರಂಪರೆ ಎಂಬ ವಿಷಯದ ಕುರಿತು ಮಾತನಾಡಿದ ಅವರು, ಪುರಾಣದ ಕತಿಗಳಲ್ಲಿ ಮನುಷ್ಯನ ಜೀವನದ ವಿವಿಧ ಮಜಲುಗಳನ್ನು, ಸಂಕೀರ್ಣತೆಯನ್ನು ಶೋಧಿಸುವ ವಿಶಿಷ್ಟ ಗುಣ ಇದೆ ಎಂದರು.
ಪರಂಪರೆ ಎನ್ನುವುದು ಒಂದು ಪರಿಕಲ್ಪನೆ. ರೂಢಿಗಳು, ಸಂಪ್ರದಾಯ, ಪ್ರಮೇಯ, ಪ್ರಮಾಣ... ಹೀಗೆ ಅನೇಕ ಸಂಗತಿಗಳು ಸೇರಿ ಪರಂಪರೆ ಎನ್ನುವುದು ಸೃಷ್ಟಿಯಾಗಿದೆ. ಪರಂಪರೆಗೆ ಪಠ್ಯದ ಅಥವಾ ಗಡಿರೇಖೆಗಳ ನಿರ್ಬಂಧವಿಲ್ಲ. ಆಚರಣೆಯ ಕ್ರಿಯೆ ಬದಲಾದರೆ ಪರಂಪರೆಯ ಪ್ರಮಾಣವೂ ಬದಲಾಗುತ್ತದೆ ಎಂದು ಹೇಳಿದರು.
ಕಾವ್ಯದಲ್ಲಿನ ಸೌಂದರ್ಯ ಮೀಮಾಂಸೆಗೆ ರಾಜಕೀಯ ಆಯಾಮವೂ ಇದೆ. ಆದರೆ, ರಾಮಾಯಣದಂತಹ ಕಾವ್ಯವನ್ನು ರಸ, ಧ್ವನಿ, ಸೌಂದರ್ಯ ಮೀಮಾಂಸೆಯ ದೃಷ್ಟಿಯಿಂದ ನೋಡದೇ ಕೇವಲ ಪೂಜ್ಯ ಭಾವನೆಯಿಂದ ನೋಡಿದರೆ ಅದರ ಅಂತಃಪಠ್ಯ ಅರ್ಥವಾಗುವುದಿಲ್ಲ ಎಂದು ಪುತಿನ ಅವರು ಹೇಳಿದ ಮಾತನ್ನು ನೆನಪಿಸಿದರು.
ಭಾರತದಲ್ಲಿ ಆಧುನಿಕ ಪ್ರಜ್ಞೆ ಹಠಾತ್ತಾಗಿ ಬಂದದ್ದೇ, ಇಲ್ಲವೆ ಎನ್ನುವಂತಹ ಸಮಸ್ಯಾತ್ಮಕ ಸಂಗತಿಗಳಿಗೆ ಕನ್ನಡದ ಲೇಖಕರಾದ ಮಾಸ್ತಿ ವೆಂಕಟೇಶ್ ಐಯ್ಯಂಗಾರ್, ಬಾಗಲೋಡಿ ದೇವರಾಯ, ಸೇಡಿಯಾಪು ಕೃಷ್ಣಭಟ್ಟ ಮೊದಲಾದವರು ತಮ್ಮ ಸಾಹಿತ್ಯದ ಮೂಲಕ ಹೇಗೆ ಅನುಸಂಧಾನ ನಡೆಸಿದ್ದಾರೆ ಎಂಬುದನ್ನು ವಿವರಿಸಿದರು.
ಹೈದರಾಬಾದ್ ವಿಶ್ವವಿದ್ಯಾಲಯದ ತತ್ವಶಾಸ್ತ್ರ ಪ್ರಾಧ್ಯಾಪಕ ರಘುರಾಮ್ ರಾಜು ಮಾತನಾಡಿ, ಪರಂಪರೆಯನ್ನು ಪುನರಾವಲೋಕನ ಅಥವಾ ಪುನರ್‌ಶೋಧನೆ ಮಾಡುವ ಹೊತ್ತಿಗೆ ಒಳಗಿನವರು ಅಥವಾ ಹೊರಗಿನವರು ಎಂಬ ಭೇದವನ್ನು ಒಪ್ಪಿಕೊಳ್ಳುವುದು ಕಷ್ಟ. ಈ ಹಂತದಲ್ಲಿ ನಾವುಗಳು ಸಂಪೂರ್ಣವಾಗಿ ಒಳಗಿನವರು ಅಥವಾ ಸಂಪೂರ್ಣವಾಗಿ ಹೊರಗಿನವರು ಆಗಿರುವುದಿಲ್ಲ ಎನ್ನುವುದನ್ನು ಉದಾಹರಿಸಿದರು.
ಭಾರತೀಯ ಮೂಲದ ನರೇಂದ್ರನಾಥನಿಗೆ ರಾಮಕೃಷ್ಣ ಪರಮಹಂಸರ ಪರಿಚಯವಾಗಿ ವಿವೇಕಾನಂದರಾಗಿ ಪರಿವರ್ತನೆ ಗೊಳ್ಳಲು ಕಾರಣರಾದವರು ಒಬ್ಬ ಕ್ರೈಸ್ತ ಪಾದ್ರಿ. ಅಲ್ಲಿಯವರೆಗೂ ವಿವೇಕಾನಂದರು ಪರಂಪರೆಯ ಹೊರಗಿನವರಾಗಿದ್ದು, ನಂತರ ಒಳಗಿನವರಾದರು ಎಂದರು.
ಪರಂಪರೆಗೆ ಸಂಬಂಧಿಸಿದಂತೆ ಹೇಳುವುದಾದರೆ ಗಾಂಧೀಜಿ ಒಳಗಿನ ಮತ್ತು ಹೊರಗಿನ, ಹೊಸತು ಹಾಗೂ ಹಳತು ಈ ಎರಡೂ ಸಂಗತಿಗಳನ್ನು ಹದವಾಗಿ ಬೆಸೆದ ವ್ಯಕ್ತಿಯಂತೆ ಕಾಣುತ್ತಾರೆ. ಪರಂಪರೆ ಹಾಗೂ ಆಧುನಿಕತೆ ಇವೆರಡರಿಂದಲೂ ಪಡೆದ ಮತ್ತು ನಿರಾಕರಿಸಿದ ಆಧುನಿಕ ಭಾರತದ ಅತಿ ದೊಡ್ಡ ಮಾದರಿ ಎಂದರೆ ಗಾಂಧೀಜಿ ಎಂದು ಹೇಳಿದರು.
ಅಂಬೇಡ್ಕರ್ ಹಿಂದೂ ಧರ್ಮವನ್ನು ತೊರೆದು ಯಾವ ಧರ್ಮಕ್ಕೆ ಸೇರಬೇಕು ಎನ್ನುವ ಬಗ್ಗೆ ನಿರ್ಧರಿಸಲು 27 ವರ್ಷ ತೆಗೆದುಕೊಂಡರು. ಅಂಬೇಡ್ಕರ್ ಹಿಂದೂ ಧರ್ಮ ಬಿಟ್ಟರೂ ಮತ್ತೊಂದು ಧರ್ಮವನ್ನೇ ಆರಿಸಿಕೊಂಡರು. ಇಂತಹ ಒಂದು ವೈರುಧ್ಯ ಅಥವಾ ಅಂತರ್ ವಿರೋಧವನ್ನು ನಮ್ಮಲ್ಲಿ ಕಾಣಬಹುದು ಎಂದರು.
ಭಾರತದಲ್ಲಿ ಆಧುನಿಕರಾಗಬೇಕು ಎಂದರೆ ಪರಂಪರೆಯನ್ನು ಪೂರ್ತಿಯಾಗಿ ಬಿಡಲೇಬೇಕು ಎಂದೇನೂ ಇಲ್ಲ. ಆದರೆ, ಪಶ್ಚಿಮ ದೇಶಗಳಲ್ಲಿ ಹಾಗಿಲ್ಲ. ಭಾರತದ ಮಟ್ಟಿಗೆ ಪರಂಪರೆ ಹಾಗೂ ಆಧುನಿಕತೆಯ ಸ್ಪಷ್ಟ ವರ್ಗೀಕರಣ ಅಸಾಧ್ಯ ಎಂದು ಅಭಿಪ್ರಾಯಪಟ್ಟರು.
ಲೇಖಕ ಸುಂದರ ಸಾರುಕ್ಕೈ ಪ್ರತಿಕ್ರಿಯಿಸಿದರು. ಚರ್ಚೆಯಲ್ಲಿ ಡಾ.ಗೋಪಾಲಗುರು, ನಟರಾಜ ಹೊನ್ನವಳ್ಳಿ, ಎಂ.ಎಸ್.ಶ್ರೀರಾಮ್, ದಿವಾಕರ್ ಮೊದಲಾದವರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.