ಭದ್ರಾವತಿ: ಪರೀಕ್ಷೆ ಸಮಯಕ್ಕೆ ಶಾರದಾ ಪೂಜೆ ನಡೆಸಿ ಕೋಸಂಬರಿ, ಪಾನಕ ನೀಡುವ ಮೂಲಕ ಮಕ್ಕಳಿಗೆ ಶುಭ ಹಾರೈಸುವುದು ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿನ ಪದ್ಧತಿ. ಆದರೆ, ಇದಕ್ಕೆ ಹೊರತಾಗಿ ಇಲ್ಲಿನ ಸತ್ಯಸಾಯಿ ಸಮಗ್ರ ಶಿಕ್ಷಣ ಸಂಸ್ಥೆ ಪೋಷಕರ ಪಾದಪೂಜೆಗೆ ಮುಂದಾಗಿದ್ದು ವಿಶೇಷ.
ಹೌದು! -ಇದು ಆಶ್ಚರ್ಯವಾದರು ಸತ್ಯ. ಶುಕ್ರವಾರ ಇಲ್ಲಿನ ಸಭಾಂಗಣದಲ್ಲಿ ಶಾರದಾಪೂಜೆ ಉತ್ಸವ, ಅದರ ನಂತರ ಕುರ್ಚಿಯಲ್ಲಿ ಸಾಲಾಗಿ ಕುಳಿತ ತಂದೆ, ತಾಯಿ ಅವರ ಮುಂದಿದ್ದ ಮಕ್ಕಳ ಕೈಯಲ್ಲಿ ಅರಿಷಿಣ, ಕುಂಕುಮ, ಹೂವು ಹಾಗೂ ತಾಂಬೂಲದ ತಟ್ಟೆ.
ವೇದಿಕೆಯ ಮಂತ್ರೋಚ್ಛಾರಣೆಗೆ ತಕ್ಕಂತೆ ಮಕ್ಕಳು ಪೋಷಕರ ಕಾಲು ತೊಳೆದು, ಅರಷಿಣ-ಕುಂಕುಮ, ಹೂವು ಇಟ್ಟು, ಮಂಗಳಾರತಿ ಬೆಳಗಿ, ಕಾಲುಮುಟ್ಟಿ ನಮಸ್ಕರಿಸಿ, ಅವರನ್ನು ತಾಂಬೂಲ ನೀಡಿ ಎಬ್ಬಿಸುವ ಮನ ತುಂಬಿದ ಸಂದರ್ಭ ನಡೆದದ್ದು ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಕುಳಿತ ವಿದ್ಯಾರ್ಥಿಗಳಿಂದ.
ಈ ಅಭೂತಪೂರ್ವ ಸನ್ನಿವೇಶ ಸೃಷ್ಟಿ ಮಾಡಿದ ಶಿಕ್ಷಣ ಸಂಸ್ಥೆಯ ಕಾರ್ಯವನ್ನು ಶ್ಲಾಘಿಸಿದ ವಿಐಎಸ್‌ಎಲ್ ಕಾರ್ಖಾನೆ ಕಾರ್ಮಿಕ ಸಂಘದ ಅಧ್ಯಕ್ಷ ಜೆ.ಎನ್. ಚಂದ್ರಹಾಸ `ಮಕ್ಕಳಲ್ಲಿ ಆತ್ಮವಿಶ್ವಾಸದ ಬದುಕನ್ನು ರೂಪಿಸುವಲ್ಲಿ ಪೋಷಕರ ಪಾತ್ರ ಹಿರಿದು. ಇದಕ್ಕೆ ಗೌರವ ನೀಡುವ ರೀತಿಯನ್ನು ಈ ಕಾರ್ಯಕ್ರಮ ಒದಗಿಸಿ ಪರೀಕ್ಷಾರ್ಥಿಗಳ ಸ್ಥೈರ್ಯ ಹೆಚ್ಚಿಸಿದೆ~ ಎಂದು ಪ್ರಶಂಸಿಸಿದರು.
ಶಿವಮೊಗ್ಗ-ಚಿಕ್ಕಮಗಳೂರು ರಾಮಕೃಷ್ಣಾಶ್ರಮದ ಧೀರಾನಂದಾಜಿ ಸ್ವಾಮೀಜಿ ಮಾತನಾಡಿ, `ಸಾಧಿಸಬೇಕೆಂಬ ಛಲವಿದ್ದಾಗ ಎಲ್ಲವನ್ನೂ ಗೆಲ್ಲಬಹುದು. ವಿದ್ಯೆ ಎಂಬ ವಸ್ತು ರಾಜ್ಯಾಧಿಕಾರಕ್ಕಿಂತ ದೊಡ್ಡದು ಎಂಬಂತೆ ತಂದೆ-ತಾಯಿ ಆಶೀರ್ವಾದ ಇದ್ದಲ್ಲಿ ಎಲ್ಲವನ್ನು ಸಾಧಿಸಬಹುದು~ ಎಂದರು.
ದೃಶ್ಯ ಮಾಧ್ಯಮಗಳು 16ರಿಂದ 30ವರ್ಷ ವಯೋಮಿತಿಯ ಯುವಕರನ್ನು ನಿರ್ಲಜ್ಜರನ್ನಾಗಿ ಮಾಡಿದೆ. ಇದರಿಂದ ಹೊರ ಬರಲು ಆಧ್ಯಾತ್ಮಿಕ ಚಿಂತನೆ, ಧ್ಯಾನ, ಸಾಧಿಸಬೇಕೆಂಬ ಮನೋಭಾವ ಬರಬೇಕು. ಅದಕ್ಕೆ ಪೂರಕ ಇಂತಹ ಕಾರ್ಯಕ್ರಮ ಎಂದರು.
ಸಂಸ್ಥೆಯ ಕಾರ್ಯದರ್ಶಿ ಪ್ರಭಾಕರ ಬೀರಯ್ಯ, ಚೀಲೂರಪ್ಪ, ದೇವೇಂದ್ರಪ್ಪ, ಪ್ರಾಂಶುಪಾಲರಾದ ಶಾಮಚಾರ್, ಪರಮೇಶ್ವರಪ್ಪ, ಪ್ರಸನ್ನ ಸೇರಿದಂತೆ ಹಲವರು ಹಾಜರಿದ್ದರು. ಒಟ್ಟಿನಲ್ಲಿ ಹಲವು ಆಧುನಿಕ ಮಜಲುಗಳ ನಡುವೆಯೂ ಸಹ ತಂದೆ-ತಾಯಿಯರ ಪ್ರೀತಿಗೆ ನೀಡಬೇಕಾದ ಗೌರವವನ್ನು ತೋರಿಸಿಕೊಟ್ಟ ಈ ಕಾರ್ಯಕ್ರಮ ಅಲ್ಲಿ ನೆರೆದಿದ್ದ ಹಲವು ಮಂದಿ ಹಿರಿಕರ ಕಣ್ಣಂಚಲ್ಲಿ ನೀರಿನ ಹನಿ ಮೂಡಿಸಿದ್ದು ಮಾತ್ರ ಸತ್ಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.