ADVERTISEMENT

ಪೌರ ಕಾರ್ಮಿಕರ ಶೋಷಣೆ ತಡೆಗಟ್ಟಲು ಕ್ರಮ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2013, 8:30 IST
Last Updated 24 ಸೆಪ್ಟೆಂಬರ್ 2013, 8:30 IST

ಸಾಗರ:   ಊರಿನ ಸ್ವಚ್ಛತೆಯಲ್ಲಿ  ಪ್ರಮುಖ ಪಾತ್ರ ವಹಿಸುವ ಪೌರ ಕಾರ್ಮಿಕರನ್ನು ಗೌರವದಿಂದ ಕಾಣುವುದು ಪ್ರತಿಯೊಬ್ಬರ ನಾಗರಿಕರ  ಕರ್ತವ್ಯವಾಗಿದೆ ಎಂದು ತಹಶೀಲ್ದಾರ್ ಧರ್ಮೋಜಿರಾವ್ ಹೇಳಿದರು.

  ನಗರಸಭೆ ಹಾಗೂ ಪೌರಸೇವಾ ನೌಕರರ ಸಂಘ ಆಶ್ರಯದಲ್ಲಿ ಸೋಮವಾರ  ನಡೆದ ಪೌರ ಕಾರ್ಮಿಕರ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದ ಅವರು ಪೌರ ಕಾರ್ಮಿಕರ ಕೆಲಸವನ್ನು ನಿಕೃಷ್ಟ ಮನೋಭಾವದಿಂದ ಕಾಣುವ ಪ್ರವೃತ್ತಿ ದೂರಾಗಬೇಕು ಎಂದು ಹೇಳಿದರು.

  ಪ್ರತಿದಿನ ಕಸದ ಜತೆಗೆ ಕೆಲಸ ಮಾಡುವ ಪೌರ ಕಾರ್ಮಿಕರ ಆರೋಗ್ಯ ಹದಗೆಡದಂತೆ ನೋಡಿಕೊಳ್ಳುವ ಜವಾಬ್ದಾರಿ ಸಮಾಜದ ಮೇಲೆ ಇದೆ. ಒಂದು ವೇಳೆ ಪೌರ ಕಾರ್ಮಿಕರು ತಾವು ಮಾಡುತ್ತಿರುವ ಕೆಲಸವನ್ನು ನಿರಾಕರಿಸಿದರೆ ಯಾವ ಪರಿಸ್ಥಿತಿ ನಿರ್ಮಾಣವಾಗಬಹುದು ಎನ್ನುವ ಅರಿವು ನಮಗೆ ಇರಬೇಕು ಎಂದರು.

   ಪೌರಸೇವಾ ನೌಕರರ ಸಂಘದ ಅಧ್ಯಕ್ಷ ಎಚ್.ಕೆ.ನಾಗಪ್ಪ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಪರಿಸ್ಥಿತಿ ಸ್ವಲ್ಪಮಟ್ಟಿಗೆ ಬದಲಾಗಿದ್ದು ಪೌರ ಕಾರ್ಮಿಕರಲ್ಲೂ ಶಿಕ್ಷಣದ ಕುರಿತು ಜಾಗೃತಿ ಮೂಡುತ್ತಿರುವುದು ಆರೋಗ್ಯಕರ ಬೆಳವಣಿಗೆಯಾಗಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಪೌರ ಕಾರ್ಮಿಕರಾದ ಮುನಿಯ, ಗಣೇಶ್, ಬಾಬುಕುಪ್ಪ, ಗೌರಮ್ಮ, ಪೌರ ಕಾರ್ಮಿಕರ ಪ್ರತಿಭಾವಂತ ಮಕ್ಕಳಾದ ಮೇಘನಾ, ದೀಪಾ, ದ್ರಾಕ್ಷಾಯಿಣಿ, ಪುಷ್ಪಾ ಅವರನ್ನು ಸನ್ಮಾನಿಸಲಾಯಿತು.

ಹಿರಿಯ ಪೌರ ಕಾರ್ಮಿಕ ಕುಪ್ಪಾಪಾಚಿ ಅವರು ಕಾರ್ಯಕ್ರಮ ಉದ್ಘಾಟಿಸಿದರು. ನಗರಸಭಾ ಸದಸ್ಯೆ ಲಲಿತಮ್ಮ, ಕಚೇರಿ ವ್ಯವಸ್ಥಾಪಕ ಶಿವಮೂರ್ತಿ, ಪರಿಸರ ಅಭಿಯಂತರ ಪ್ರಭಾಕರ್, ಶೈಲೇಶ್, ಗುರುಪ್ರಸಾದ್, ಭೂಮೇಶ್ ಹಾಜರಿದ್ದರು. ರಾಜಕುಮಾರ್ ಸ್ವಾಗತಿಸಿದರು. ನರಸಿಂಹಮೂರ್ತಿ ವಂದಿಸಿದರು. ಬಾಲಚಂದ್ರ ನಿರೂಪಿಸಿದರು. ಇದಕ್ಕೂ ಮುನ್ನ ನಗರದ ಪ್ರಮುಖ ಬೀದಿಗಳಲ್ಲಿ ಪೌರ ಕಾರ್ಮಿಕರ ಮೆರವಣಿಗೆ ನಡೆಯಿತು.

‘ಆರೋಗ್ಯದತ್ತ ಗಮನಹರಿಸಿ’
ಶಿಕಾರಿಪುರ: ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುವ ಕಾರ್ಮಿಕರ ಶೋಷಣೆ ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ಮನೋಹರ್‌ ಹೇಳಿದರು.

  ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಸೋಮವಾರ ಪುರಸಭೆ ಆಶ್ರಯದಲ್ಲಿ ನಡೆದ  ‘ಪೌರಕಾರ್ಮಿಕರ ದಿನಾಚರಣೆ ಹಾಗೂ ಪೌರ ಕಾರ್ಮಿಕರ ಸನ್ಮಾನ’ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

  ನಗರದ ನೈರ್ಮಲ್ಯ ಕಾಪಾಡುವ ಪೌರ ಕಾರ್ಮಿಕರು, ಆರೋಗ್ಯ ಕಾಪಾಡಿಕೊಳ್ಳುವತ್ತ ಗಮನಹರಿಸಬೇಕು. ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುವ ಕಾರ್ಮಿಕರ ಶೋಷಣೆಗೆ ಅವಕಾಶ ನೀಡದಂತೆ ಅಧಿಕಾರಿಗಳು ಶ್ರಮಿಸಬೇಕಾಗಿದೆ ಎಂದು ಹೇಳಿದರು. 

   ಪೌರ ಕಾರ್ಮಿಕರಿಗೆ ನಿವೇಶನ ಸೇರಿದಂತೆ ಹಲವು ಮೂಲ ಸೌಲಭ್ಯಗಳ ಕೊರತೆ  ಒದಗಿಸುವ ನಿಟ್ಟಿನಲ್ಲಿ  ಪ್ರಯತ್ನ ನಡೆಸುವುದಾಗಿ ಭರವಸೆ ನೀಡಿದರು.

ಪುರಸಭೆ ಸದಸ್ಯ ಹುಲ್ಮಾರ್‌ ಮಹೇಶ್‌, ಸಮಯ ಪ್ರಜ್ಞೆಯಿಂದ ಕರ್ತವ್ಯ ನಿರ್ವಹಿಸುವ ಪೌರ ಕಾರ್ಮಿಕರನ್ನು ನಾಗರಿಕರು ಕೀಳಾಗಿ ನೊಡದೇ, ಅವರ ಕಾರ್ಯಕ್ಕೆ ಪ್ರೋತ್ಸಾಹ ನೀಡಬೇಕು ಎಂದರು.

ಪುರಸಭೆ ಸದಸ್ಯೆ ರೂಪಕಲಾ ಹೆಗಡೆ ಮಾತನಾಡಿ, ವೃತ್ತಿಯ ಬಗ್ಗೆ ಕೀಳು ಮನೋಭಾವನೆ ಹೊಂದದೆ ಹೆಮ್ಮೆಯಿಂದ ಕಾರ್ಯ ನಿರ್ವಹಿಸಬೇಕು ಎಂದರು.

ಪುರಸಭೆ ಸದಸ್ಯರಾದ ಯಲ್ಲಪ್ಪ, ಗೌರಮ್ಮ, ಶನಾಬಾನು, ಮಧುಸೂಧನ್‌, ರವೀಂದ್ರ, ಪುರಸಭೆ ಆರೋಗ್ಯ ನಿರೀಕ್ಷಕರಾದ ಹಿರೇಮಠ್‌, ನವಾಜ್‌, ಎಂಜಿನಿಯರ್‌ ಶಂಕರ್‌, ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎಸ್. ಹುಚ್ಚರಾಯಪ್ಪ, ಹರಳೆಣ್ಣೆ ಗಿರೀಶ್‌, ಸುರೇಶ್‌ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.