ADVERTISEMENT

ಪೌರ ಕಾರ್ಮಿಕ ಮಹಿಳೆ ಇಂದು ಪುರಸಭೆ ಅಧ್ಯಕ್ಷೆ

ಶಿಕಾರಿಪುರ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2014, 5:35 IST
Last Updated 18 ಮಾರ್ಚ್ 2014, 5:35 IST

ಶಿಕಾರಿಪುರ: ಸುಮಾರು 10ವರ್ಷಕ್ಕೂ ಹೆಚ್ಚು ಕಾಲ ಗುತ್ತಿಗೆ ಆಧಾರದಲ್ಲಿ ಪುರಸಭೆ ಪೌರಕಾರ್ಮಿಕರಾಗಿ  ಕಾರ್ಯ ನಿರ್ವಹಿಸಿದ್ದ ಬಿಜೆಪಿಯ ಪುರಸಭೆ ಸದಸ್ಯೆ ಗೌರಮ್ಮ.ಪಿ.ರಾಮಯ್ಯ ಪುರಸಭೆಯ ಮೊದಲ ದಲಿತ ಮಹಿಳಾ ಅಧ್ಯಕ್ಷೆ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.

23 ಸದಸ್ಯರನ್ನು ಹೊಂದಿರುವ ಪುರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸೋಮವಾರ ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಚುನಾವಣೆ ನಡೆಯಿತು. ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಗೆ ಮೀಸಲಾಗಿದ್ದರಿಂದ ವಿರೋಧ ಪಕ್ಷದಲ್ಲಿ ಯಾವ ಅಭ್ಯರ್ಥಿ ಇಲ್ಲದ ಕಾರಣ ಬಿಜೆಪಿಯ ಗೌರಮ್ಮ ಪಿ. ರಾಮಯ್ಯ ಒಬ್ಬರೇ ನಾಮಪತ್ರ ಸಲ್ಲಿಸಿದ್ದರೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದರಿಂದ ಬಿಜೆಪಿಯ ಸೈಯದ್‌ಫೀರ್‌ ಹಾಗೂ ಕಾಂಗ್ರೆಸ್‌ನ ಬಿ.ಯಲ್ಲಪ್ಪ ನಾಮಪತ್ರ ಸಲ್ಲಿಸಿದರು.

ನಂತರ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಪುರಸಭೆ ಅಧ್ಯಕ್ಷರಾಗಿ ಗೌರಮ್ಮ ಪಿ. ರಾಮಯ್ಯ ಅವಿರೋಧವಾಗಿ ಆಯ್ಕೆಯಾದರು ಎಂದು ಚುನಾವಣಾಧಿಕಾರಿ ತಹಶೀಲ್ದಾರ್‌ ಧರ್ಮೋಜಿರಾವ್‌ ಘೋಷಿಸಿದರು.

   ನಂತರ ಪುರಸಭೆ ಸದಸ್ಯರು ಕೈ ಎತ್ತುವ ಮೂಲಕ ಉಪಾಧ್ಯಕ್ಷ ಸ್ಥಾನಕ್ಕೆ ಮತದಾನ ಮಾಡಿದರು. ಕಾಂಗ್ರೆಸ್‌ನ ಬಿ. ಯಲ್ಲಪ್ಪ 7 ಮತ ಪಡೆದರೆ,16 ಮತ ಪಡೆಯುವ ಮೂಲಕ ಬಿಜೆಪಿಯ ಸೈಯದ್‌ಫೀರ್‌ ಪುರಸಭೆ ಉಪಾಧ್ಯಕ್ಷರಾಗಿ ಆಯ್ಕೆಯಾದರು.

  ಚುನಾವಣೆ ನಂತರ ಎಲ್ಲ ಸದಸ್ಯರು ಅಧ್ಯಕ್ಷೆ, ಉಪಾಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಟಿ.ಎಸ್‌. ಮಹಾಲಿಂಗಪ್ಪ ಹಾಗೂ ನಾಮ ನಿರ್ದೇಶಿತ ಸದಸ್ಯ ಗೀರೀಶ್‌ ನಿಧನಕ್ಕೆ ಶ್ರದ್ಧಾಂಜಲಿ ಅರ್ಪಿಸಿದರು.

ಅಧಿಕೃತ ಬಿಜೆಪಿ ಸದಸ್ಯರಲ್ಲ
ಕಳೆದ ವರ್ಷ ಪಟ್ಟಣದ 23ವಾರ್ಡ್‌ಗಳಿಗೆ ನಡೆದ ಪುರಸಭೆ ಚುನಾವಣೆಯಲ್ಲಿ ಕೆಜೆಪಿಯಿಂದ ಸ್ಪರ್ಧಿಸಿ 15 ವಾರ್ಡ್‌ಗಳಲ್ಲಿ ಗೆಲುವು ಸಾಧಿಸಿದ್ದ ಸದಸ್ಯರು ಹಾಗೂ ಒಬ್ಬ ಪಕ್ಷೇತರ ಸದಸ್ಯರು, ನಂತರ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಕೆಜೆಪಿಯ 15 ಹಾಗೂ ಪಕ್ಷೇತರ ಒಬ್ಬ ಸದಸ್ಯೆ ಬಿಜೆಪಿ ಸೇರ್ಪಡೆಯಾಗಿದ್ದರು. ಆದರೆ, ಬಿಜೆಪಿ ಸೇರ್ಪಡೆ ಬಗ್ಗೆ ಪ್ರತಿಕ್ರಿಯಿಸಿದ ಪುರಸಭೆ ಮುಖ್ಯಾಧಿಕಾರಿ ಮನೋಹರ್‌, ಕೆಜೆಪಿ ಸದಸ್ಯರು ಬಿಜೆಪಿ ಸೇರ್ಪಡೆಯಾಗಿದ್ದೇವೆ ಎಂದು ಹೇಳಿದರೂ,  ಕಾನೂನು ಪ್ರಕಾರವಾಗಿ ಅಧಿಕೃತವಾಗಿ ಅವರು ಬಿಜೆಪಿ ಸದಸ್ಯರಾಗಿಲ್ಲ. ಅಧಿಕೃತವಾಗಿ ಅವರು ಬಿಜೆಪಿ ಸದಸ್ಯರಾಗಲು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಬೇಕು ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.