ADVERTISEMENT

ಪ್ರೌಢಶಾಲೆಯಲ್ಲೂ ಆಂಗ್ಲಮಾಧ್ಯಮ: ಚಿಂತನೆ

ಪ್ರಜಾವಾಣಿ ವಿಶೇಷ
Published 21 ಜೂನ್ 2012, 5:15 IST
Last Updated 21 ಜೂನ್ 2012, 5:15 IST

ಶಿವಮೊಗ್ಗ: ಸರ್ಕಾರಿ ಶಾಲೆಗಳಲ್ಲಿ ಸರ್ಕಾರ ಆಂಗ್ಲಮಾಧ್ಯಮ ಆರಂಭಿಸಿದ ವಿವಾದ ತಾರಕಕ್ಕೇರಿದೆ. ಈ ಬಗ್ಗೆ ಪರ-ವಿರೋಧ ಚರ್ಚೆಗಳು ಆರಂಭಗೊಂಡಿವೆ. ಈ ಹಂತದಲ್ಲೇ ಸರ್ಕಾರಿ ಪ್ರೌಢಶಾಲೆಯಲ್ಲೂ ಆಂಗ್ಲಮಾಧ್ಯಮ ಅಳವಡಿಕೆಗೆ ಸರ್ಕಾರ ಚಿಂತನೆ ನಡೆಸಿದೆ.

ಶಿವಮೊಗ್ಗ ಜಿಲ್ಲೆಯಲ್ಲಿ ಈಗಾಗಲೇ ಎರಡು ಶಾಲೆಗಳಿಂದ ಎಂಟನೇ ತರಗತಿಯಿಂದ ಆಂಗ್ಲ ಮಾಧ್ಯಮ ಅಳವಡಿಕೆಗೆ ಪ್ರಸ್ತಾವ ಬಂದಿದ್ದು, ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಮೂಲಕ ಈ ಪ್ರಸ್ತಾವ ಆಯುಕ್ತರ ಕಚೇರಿಗೆ ತಲುಪಿದೆ. ಈ ಶೈಕ್ಷಣಿಕ ವರ್ಷ ಅಥವಾ ಮುಂದಿನ ವರ್ಷ ಈ ಆದೇಶ ಹೊರಬೀಳುವ ನಿರೀಕ್ಷೆ ಇದೆ ಎಂದು ಶಿಕ್ಷಣ ಇಲಾಖೆ ಮೂಲಗಳು ದೃಢಪಡಿಸಿವೆ.

ಶಿವಮೊಗ್ಗ ತಾಲ್ಲೂಕಿನ ಹಾರ‌್ನಹಳ್ಳಿಯ ಸರ್ಕಾರಿ ಉರ್ದು ಪ್ರೌಢಶಾಲೆ ಹಾಗೂ ಶಿಕಾರಿಪುರದ ಈಸೂರು ಸರ್ಕಾರಿ ಪ್ರೌಢಶಾಲೆಯಿಂದಲೂ ಆಂಗ್ಲಮಾಧ್ಯಮಕ್ಕೆ ಬೇಡಿಕೆ ಬಂದಿದೆ. ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಎಸ್‌ಡಿಎಂಸಿಗಳಿಂದ ಆಂಗ್ಲಮಾಧ್ಯಮಕ್ಕೆ ಒತ್ತಾಯ ಬಂದಿದ್ದು,  ಸಂಬಂಧಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿಗಳು ಪ್ರಸ್ತಾವಗಳನ್ನು ಶಿಕ್ಷಣ ಇಲಾಖೆಗೆ ಸಲ್ಲಿಸಿದ್ದಾರೆ.  

ಈ ಕುರಿತಂತೆ ಬೆಂಗಳೂರಿನ ಆಯುಕ್ತರ ಕಚೇರಿಯಲ್ಲಿ ಈಗಾಗಲೇ ಒಂದು ಸುತ್ತಿನ ಚರ್ಚೆ ನಡೆದಿದ್ದು, ಆಂಗ್ಲ ಮಾಧ್ಯಮ ಅಳವಡಿಕೆಗೆ ರೂಪು-ರೇಷೆಗಳು ಸಿದ್ಧಗೊಳ್ಳುತ್ತಿವೆ ಎನ್ನಲಾಗಿದೆ. 

 19 ಶಾಲೆಗಳಲ್ಲಿ ಆಂಗ್ಲಮಾಧ್ಯಮ
ಜಿಲ್ಲೆಯಲ್ಲಿ ಈ ಶೈಕ್ಷಣಿಕ ವರ್ಷದಿಂದಲೇ 19 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ 6ನೇ ತರಗತಿಯಿಂದ ಆಂಗ್ಲಮಾಧ್ಯಮ ಅಳವಡಿಸಲಾಗಿದೆ.

ಶಿವಮೊಗ್ಗದಲ್ಲಿ ಆಯನೂರು, ಕುಂಸಿ, ಗಾಜನೂರು, ಹಾರ‌್ನಹಳ್ಳಿ, ಹಸೂಡಿ, ಉಂಬಳೇಬೈಲು, ಪಿಳ್ಳಂಗೆರೆ, ಕೊಮ್ಮನಾಳು, ಬಿ.ಎಚ್. ರಸ್ತೆ (ಪ್ರಧಾನ), ರವೀಂದ್ರನಗರ, ಗುರುಪುರ.

ಭದ್ರಾವತಿಯಲ್ಲಿ ಅಂತರಗಂಗೆ, ಬಿಆರ್‌ಪಿ, ಹಿರಿಯೂರು, ಹಳ್ಳಿಕೆರೆ, ಹೊಸಸಿದ್ದಾಪುರ ಕಲ್ಲಹಳ್ಳಿ, ಹುಣಸೇಕಟ್ಟೆ. ಸಾಗರದಲ್ಲಿ ತುಮರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಬಾರಿಯಿಂದಲೇ ಆಂಗ್ಲಮಾಧ್ಯಮ ಆರಂಭಿಸಲಾಗಿದೆ.

ಹೊಸ ಶಿಕ್ಷಕರನ್ನು ನೀಡದೆ ಹಾಲಿ ಇರುವ ಶಿಕ್ಷಕರಿಂದಲೇ ಆಂಗ್ಲ ವಿಭಾಗದ ತರಗತಿಗಳಿಗೆ ಪಾಠ-ಪ್ರವಚನಗಳನ್ನು ನಡೆಸಲಾಗುವುದು. ಅಲ್ಲದೇ, ಇದರಿಂದಾಗಿ ಸರ್ಕಾರಕ್ಕೆ ಯಾವುದೇ ಹೆಚ್ಚುವರಿಯಾಗಿ ಯಾವುದೇ ಆರ್ಥಿಕ ಹೊರೆ ಆಗುವುದಿಲ್ಲ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.

ಹೊಸ ಪ್ರಸ್ತಾವ

ಜಿಲ್ಲೆಯ ಇನ್ನಷ್ಟು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಆಂಗ್ಲಮಾಧ್ಯಮ ಆರಂಭಕ್ಕೆ ಶಿಕ್ಷಣ ಇಲಾಖೆ ಪ್ರಸ್ತಾವ ಸಲ್ಲಿಸಿದೆ. ಅದರಂತೆ ಜಿಲ್ಲೆಯಲ್ಲಿ 51 ಶಾಲೆಗಳು ಆಂಗ್ಲಮಾಧ್ಯಮ ಬೋಧನೆಗೆ ಆಸಕ್ತಿ ತೋರಿವೆ.

ಶಿವಮೊಗ್ಗ 5, ಶಿಕಾರಿಪುರ 7, ಹೊಸನಗರ 10, ತೀರ್ಥಹಳ್ಳಿ 14 ಹಾಗೂ ಸೊರಬದಲ್ಲಿ 5 ಶಾಲೆಗಳನ್ನು ಇಲಾಖೆಗೆ ಪ್ರಸ್ತಾವ ಸಲ್ಲಿಸಿದ್ದು, ಇಲಾಖೆ, ಆಯುಕ್ತರ ಕಚೇರಿಗೆ ಕಳುಹಿಸಿದೆ.

ಮುಂದಿನ ವರ್ಷ ಇನ್ನಷ್ಟು ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿಯೂ ಆಂಗ್ಲಮಾಧ್ಯಮ ಆರಂಭಕ್ಕೆ ಪ್ರಸ್ತಾವ ಬರಲಿವೆ ಎನ್ನುತ್ತಾರೆ ಸಾರ್ವಜನಿಕ ಶಿಕ್ಷಣ ಇಲಾಖೆ ಹಿರಿಯ ಅಧಿಕಾರಿಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.